ಕುಂಬಳೆ: ಅನಂತಪುರ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಅಂತರ್ಜಲ ತೀವ್ರವಾಗಿ ಕಲುಷಿತಗೊಂಡಿದ್ದು, ಇಲ್ಲಿನ ತೆರೆದ ಬಾವಿ ಹಾಗೂ ಬೋರ್‌ವೆಲ್ ನೀರು ಕುಡಿಯಲು ಸಂಪೂರ್ಣ ಅಯೋಗ್ಯವಾಗಿದೆ ಎಂದು ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (KSPCB) ಅಧಿಕೃತ ತಪಾಸಣಾ ವರದಿಯಲ್ಲಿ ದೃಢಪಡಿಸಿದೆ.
ಕೈಗಾರಿಕಾ ಪ್ರದೇಶದ ಆಸುಪಾಸಿನ ಜಲಮೂಲಗಳು ಕಲುಷಿತಗೊಳ್ಳುತ್ತಿರುವ ಕುರಿತು ಕುಂಬಳೆ ಪೇರಾಲು ಕಣ್ಣೂರಿನ ನಿವಾಸಿ ಪಿ.ಟಿ. ನಾರಾಯಣ ಹೆಬ್ಬಾರ್ ಅವರು ಸಲ್ಲಿಸಿದ್ದ ಲಿಖಿತ ದೂರಿನ ಮೇರೆಗೆ ಮಂಡಳಿಯು ಕ್ರಮ ಕೈಗೊಂಡಿತ್ತು. ದೂರಿನ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 06 ರಂದು ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು, ಅವರ ಮನೆಯ ಬಾವಿ ಹಾಗೂ ಬೋರ್‌ವೆಲ್‌ನಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿದ್ದರು.
ಕಾಂಞಂಗಾಡ್‌ನಲ್ಲಿರುವ ಕಾಸರಗೋಡು ಜಿಲ್ಲಾ ಪರಿಸರ ಇಂಜಿನಿಯರಿಂಗ್ ಕಚೇರಿಯಿಂದ ದೂರುದಾರರಿಗೆ ರವಾನಿಸಲಾದ ಅಧಿಕೃತ ವರದಿಯಲ್ಲಿ (ಸಂಖ್ಯೆ: ಪಿಸಿಬಿ/ಕೆ.ಎಸ್.ಆರ್.ಡಿ.-ಸಿಒಎಂಪಿ/ಎಂಎಎನ್.ಜೆ./ಡಿಐಸಿ/ಅನಂತಪುರಂ/2026, ದಿನಾಂಕ: 29.10.2026), ಸಂಗ್ರಹಿಸಿದ ನೀರಿನ ಮಾದರಿಯ ಫಲಿತಾಂಶಗಳನ್ನು ಲಗತ್ತಿಸಲಾಗಿದ್ದು, ಈ ನೀರು ಮಾನವ ಬಳಕೆಗೆ ಅಥವಾ ಕುಡಿಯಲು ಯೋಗ್ಯವಲ್ಲ ಎಂಬ ಆಘಾತಕಾರಿ ಸತ್ಯವನ್ನು ಹೊರಹಾಕಲಾಗಿದೆ.
ಕಪ್ಪು ಬಣ್ಣಕ್ಕೆ ತಿರುಗಿದ ನೀರು, ತೇಲುತ್ತಿರುವ ಎಣ್ಣೆಯಂಶ: ಅನಂತಪುರ ಕೈಗಾರಿಕಾ ಪ್ರದೇಶದಲ್ಲಿರುವ ಕೆಲ ಪರಿಸರ ವಿರೋಧಿ ಕಾರ್ಖಾನೆಗಳು ಅವೈಜ್ಞಾನಿಕವಾಗಿ ರಾಸಾಯನಿಕ ತ್ಯಾಜ್ಯನೀರನ್ನು ಹೊರಬಿಡುತ್ತಿರುವುದೇ ಈ ದುಸ್ಥಿತಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅನಂತಪುರ ಹಾಗೂ ಕಣ್ಣೂರು ಭಾಗದ ಮನೆಗಳ ಬಾವಿಗಳಲ್ಲಿ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಮೇಲ್ಮೈಯಲ್ಲಿ ಎಣ್ಣೆಯ ಪದರಗಳು ತೇಲುತ್ತಿವೆ. ಕೆರೆ-ಕೊಳಗಳಲ್ಲಿ ಜಲಚರಗಳು ಮತ್ತು ಮೀನುಗಳು ಮೃತಪಡುತ್ತಿವೆ. ಕನಿಷ್ಠ ಬಟ್ಟೆ ತೊಳೆಯಲು ಅಥವಾ ಜಾನುವಾರುಗಳಿಗೂ ಈ ನೀರನ್ನು ಬಳಸಲಾಗದ ಕಾರಣ ಜನತೆ ಹನಿ ನೀರಿಗೂ ಪರದಾಡುವಂತಾಗಿದೆ.
ರಾತ್ರಿಯಾದರೆ ಉಸಿರುಗಟ್ಟಿಸುವ ದುರ್ವಾಸನೆ: ಜಲಮಾಲಿನ್ಯದ ಜತೆಗೆ ವಾಯುಮಾಲಿನ್ಯವೂ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾರ್ಖಾನೆಗಳಿಂದ ರಾತ್ರಿ ವೇಳೆ ದಟ್ಟ ರಾಸಾಯನಿಕ ಹೊಗೆ ಹಾಗೂ ಅಸಹನೀಯ ದುರ್ವಾಸನೆ ಹೊರಸೂಸುತ್ತಿದ್ದು, ಸ್ಥಳೀಯರಲ್ಲಿ ಉಸಿರಾಟದ ತೊಂದರೆ, ಕಣ್ಣು ಉರಿ ಹಾಗೂ ತೀವ್ರ ತಲೆನೋವಿನಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಮಾಲಿನ್ಯ ನಿಯಂತ್ರಣ ಮಂಡಳಿಯೇ ನೀರು ಅಯೋಗ್ಯವೆಂದು ದೃಢಪಡಿಸಿರುವುದರಿಂದ, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಮಧ್ಯಪ್ರವೇಶಿಸಿ ಗ್ರಾಮಸ್ಥರಿಗೆ ಪರ್ಯಾಯ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಮತ್ತು ಪರಿಸರ ನಾಶಕ್ಕೆ ಕಾರಣವಾದ ಕಾರ್ಖಾನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಿಮಿನಲ್ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.

-side.jpg)
.jpg)
.jpg)
