HEALTH TIPS

ನಾಡೋಜ ಡಾ. ಕಯ್ಯಾರ ಸ್ಮಾರಕಕ್ಕೆ ನೀಡಿದ ಜಾಗ ಕಾಡುಪಾಲು: ನಿರ್ಮಿಸದಿದ್ದರೆ ಜಾಗ ವಾಪಸ್ ನೀಡಲು ಕುಟುಂಬದ ಆಗ್ರಹ; ಜಿ.ಪಂ. ನಿಯೋಗ ಭೇಟಿ

 ಕಾಸರಗೋಡು: ನಾಡು ಕಂಡ ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಿನಲ್ಲಿ ಸ್ಮಾರಕ ಭವನ ನಿರ್ಮಿಸಲೆಂದು ಅವರ ಕುಟುಂಬಸ್ಥರು ಕಾಸರಗೋಡು ಜಿಲ್ಲಾ ಪಂಚಾಯಿತಿಗೆ ಬಿಟ್ಟುಕೊಟ್ಟಿರುವ ನಿವೇಶನವು ಯಾವುದೇ ಅಭಿವೃದ್ಧಿ ಕಾಣದೆ ಕಾಡು ಬೆಳೆದು ಹಾಳಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.


ಬದಿಯಡ್ಕ ಸಮೀಪದ ಪೆರಡಾಲ ‘ಕವಿತಾ ಕುಟೀರ’ದ ಸನಿಹದಲ್ಲಿರುವ ಸುಮಾರು 30 ಸೆಂಟ್ಸ್ ಜಾಗವನ್ನು ಸ್ಮಾರಕ ನಿರ್ಮಾಣಕ್ಕಾಗಿ ಕಯ್ಯಾರ ಅವರ ಕುಟುಂಬವು 8 ವರ್ಷಗಳ ಹಿಂದೆಯೇ ಜಿಲ್ಲಾ ಪಂಚಾಯಿತಿಗೆ ಹಸ್ತಾಂತರಿಸಿತ್ತು. ಆದರೆ, ಇಷ್ಟು ವರ್ಷಗಳು ಕಳೆದರೂ ಜಿಲ್ಲಾ ಪಂಚಾಯಿತಿ ಆಡಳಿತವು ಸ್ಮಾರಕ ನಿರ್ಮಾಣಕ್ಕೆ ಯಾವುದೇ ಕಾಂಕ್ರೀಟ್ ಹೆಜ್ಜೆ ಇಟ್ಟಿಲ್ಲ. ಮತ್ತೊಂದೆಡೆ, ಕವಿತಾ ಕುಟೀರದ ಸಮೀಪದ ಕಲ್ಲಕಳಯ ಬತ್ತೇರಿಯಲ್ಲಿ ಇದೇ ಕುಟುಂಬ ನೀಡಿದ 31 ಸೆಂಟ್ಸ್ ಜಾಗದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಸುಮಾರು ₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಾಂಸ್ಕೃತಿಕ ಭವನವನ್ನು ನಿರ್ಮಿಸಿದ್ದು, ಅದು ಈಗಾಗಲೇ ಲೋಕಾರ್ಪಣೆಗೆ ಸಜ್ಜಾಗಿದೆ.

'ಸ್ಮಾರಕ ನಿರ್ಮಿಸದಿದ್ದರೆ ಜಾಗ ವಾಪಸ್ ನೀಡಿ' ಹಿಂದೆ ವಕೀಲ ಕೆ. ಶ್ರೀಕಾಂತ್ ಅವರು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಕಯ್ಯಾರ ಸ್ಮಾರಕದ ಪ್ರಸ್ತಾವನೆಗೆ ಶ್ರಮವಹಿಸಿದ್ದರು. ತರುವಾಯ 30 ಸೆಂಟ್ಸ್ ಜಾಗ ಹಸ್ತಾಂತರಗೊಂಡರೂ ಜಿಲ್ಲಾ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ. ಇತ್ತೀಚೆಗೆ ಜಿ.ಪಂ. ಸದಸ್ಯ ಜೆ.ಎಸ್. ಸೋಮಶೇಖರ್ ಅವರು ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಆಡಳಿತ ಸಮಿತಿಯ ಗಮನ ಸೆಳೆದಿದ್ದರು. "ಸ್ಮಾರಕ ನಿರ್ಮಾಣ ಮಾಡಲು ಸಾಧ್ಯವಾಗದಿದ್ದರೆ, ಕುಟುಂಬದಿಂದ ಪಡೆದಿರುವ ಜಾಗವನ್ನು ವಾಪಸ್ ನೀಡಿ" ಎಂದು ಕಯ್ಯಾರ ಕುಟುಂಬದವರು ಜಿಲ್ಲಾ ಪಂಚಾಯಿತಿಗೆ ನೇರ ಎಚ್ಚರಿಕೆ ರವಾನಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ನಿಯೋಗ ಭೇಟಿ: ಕುಟುಂಬದ ಆಕ್ರೋಶ ಹಾಗೂ ಸಭೆಯ ನಿರ್ಧಾರದ ಬೆನ್ನಲ್ಲೇ ಮಂಗಳವಾರ ಜಿಲ್ಲಾ ಪಂಚಾಯಿತಿ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳ ತಂಡ ಪೆರಡಾಲದ ನಿಯೋಜಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇಡೀ ಜಾಗವು ಮುಳ್ಳು-ಗಿಡಗಂಟಿಗಳಿಂದ ಆವೃತವಾಗಿದ್ದು, ತಕ್ಷಣವೇ ಜಾಗವನ್ನು ಸ್ವಚ್ಛಗೊಳಿಸಿ ಸಮಗ್ರ ವರದಿ ಸಿದ್ಧಪಡಿಸಿ ಮುಂದಿನ ಸಭೆಯಲ್ಲಿ ಮಂಡಿಸಲಾಗುವುದು ಎಂದು ನಿಯೋಗ ಭರವಸೆ ನೀಡಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸದಸ್ಯರಾದ ಮನು ಎಂ., ಇರ್ಫಾನಾ ಇಕ್ಬಾಲ್, ಜಿ.ಪಂ. ಸದಸ್ಯರಾದ ಸುಭೀಶ್, ಹರ್ಷಾದ್ ವರ್ಕಾಡಿ, ಜೆ.ಎಸ್. ಸೋಮಶೇಖರ್, ರಾಮಪ್ಪ ಮಂಜೇಶ್ವರ, ಕಾರ್ಯದರ್ಶಿ ಬಿಜು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಟಿ. ಶಂಕರನಾರಾಯಣ ಭಟ್, ಶ್ಯಾಮ ಆಳ್ವ ಹಾಗೂ ಡಾ. ಕಯ್ಯಾರ ಅವರ ಪುತ್ರರಾದ ದುರ್ಗಾಪ್ರಸಾದ್ ರೈ, ರಂಗನಾಥ್ ಮತ್ತು ರವಿರಾಜ್ ಉಪಸ್ಥಿತರಿದ್ದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries