ಮಂಜೇಶ್ವರ: ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳನ್ನು ಆರಂಭದಲ್ಲೇ ಪತ್ತೆಹಚ್ಚುವ ಉದ್ದೇಶದಿಂದ ಮಂಜೇಶ್ವರ ಗ್ರಾಮ ಪಂಚಾಯತಿ ಮತ್ತು ಬಿ.ಎಫ್.ಹೆಚ್.ಸಿ. (BFHC) ಸಹಯೋಗದಲ್ಲಿ ಗಿಳಿವಿಂಡಿನಲ್ಲಿ ಆಯೋಜಿಸಿದ್ದ ಎರಡು ದಿನಗಳ 'ಮಹಿಳಾ ರೋಗನಿರ್ಣಯ ವೈದ್ಯಕೀಯ ಶಿಬಿರ' ಯಶಸ್ವಿಯಾಗಿ ನೆರವೇರಿತು.
ಶಾಸಕ ಎ.ಕೆ.ಎಂ. ಅಶ್ರಫ್ ಶಿಬಿರಕ್ಕೆ ಚಾಲನೆ ನೀಡಿ, ಆರು ತಿಂಗಳಿಗೊಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಕರೆ ನೀಡಿದರು. ಪಂಚಾಯತಿ ಅಧ್ಯಕ್ಷ ಬಶೀರ್ ಕನಿಲ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಪ್ಯಾಪ್ ಸ್ಮೀಯರ್, ಎಫ್.ಎನ್.ಎ.ಸಿ. (FNAC) ಹಾಗೂ ಮೌಖಿಕ ತಪಾಸಣೆ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಿ ಮಾರ್ಗಸೂಚಿ ನೀಡಲಾಯಿತು.
ವೈದ್ಯಾಧಿಕಾರಿ ಡಾ. ಪ್ರಭಾಕರ ರೈ ಸಹಕಾರದೊಂದಿಗೆ ನೂರಾರು ಮಹಿಳೆಯರು ಶಿಬಿರದ ಪ್ರಯೋಜನ ಪಡೆದರು. ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಿದ ಪಂಚಾಯತಿ ಅಧ್ಯಕ್ಷರ ಕಾರ್ಯವೈಖರಿಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

.jpg)
