ಮಂಜೇಶ್ವರ: ರಾತ್ರಿ ವೇಳೆ ಮನೆಯೊಂದರ ವಠಾರದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಅವಿತು ಕುಳಿತಿದ್ದ ಯುವಕನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಕಿಶನ್ಗಂಜ್ ನಿವಾಸಿ ಗೋವಿಂದ್ ಮುರ್ಮು (26) ಬಂಧಿತ ಆರೋಪಿ.
ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜತ್ತೂರು ಯತೀಮ್ ಖಾನ ರಸ್ತೆಯಲ್ಲಿರುವ ಅಮಿತ್ ಎಂಬವರ ಮನೆಯ ಸಮೀಪ ಈತ ರಾತ್ರಿ ವೇಳೆ ಅವಿತು ಕುಳಿತಿದ್ದನು. ಇದನ್ನು ಗಮನಿಸಿದ ಸ್ಥಳೀಯರನ್ನು ಕಂಡು ಆತ ಅಲ್ಲಿಂದ ಓಡಿ ಪರಾರಿಯಾಗಲು ಯತ್ನಿಸಿದ್ದಾನೆ.
ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಎಸ್ಐ ಅರ್ಜುನ್ ಅರವಿಂದ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಯುವಕನನ್ನು ವಶಕ್ಕೆ ಪಡೆದುಕೊಂಡಿದೆ. ಆರೋಪಿಯು ಕಳವಿಗೆ ಸಂಚು ರೂಪಿಸುತ್ತಿದ್ದನೆಂದು ಶಂಕಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


