ಕಾಸರಗೋಡು: ಕಾಸರಗೋಡು ಜಿಲ್ಲಾಡಳಿತದ ನೇತೃತ್ವದಲ್ಲಿ ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿ (ಡಿಟಿಪಿಸಿ), ನೀಲೇಶ್ವರಂ ನಗರಸಭೆ, ಚೆರುವತ್ತೂರು ಗ್ರಾಮ ಪಂಚಾಯತ್ ಹಾಗೂ ವಳ್ಳಂಕಳಿ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ನವೆಂಬರ್ 18 ರಂದು ನಡೆಯಲಿರುವ ಪ್ರತಿಷ್ಠಿತ ‘ಮಹಾತ್ಮಾ ಗಾಂಧಿ ಟ್ರೋಫಿ ಉತ್ತರ ಮಲಬಾರ್ ಜಲೋತ್ಸವ’ದ ಅಧಿಕೃತ ಲೋಗೋವನ್ನು ಶಾಸಕ ರಮೇಶ್ ಪಿಶಾರಡಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನಾ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಸಂದೀಪ್ ವಾರಿಯರ್ ವಹಿಸಿದ್ದರು.
ಸಮಾರಂಭದಲ್ಲಿ ಚೆರುವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಟಿ. ನಾರಾಯಣನ್, ನೀಲೇಶ್ವರಂ ನಗರಸಭೆ ಉಪಾಧ್ಯಕ್ಷೆ ಪಿ.ಎಂ. ಸಿಂಧು, ನಗರಸಭೆ ಕೌನ್ಸಿಲರ್ ಸೌದಾ ಅಂಚಿಲ್ಲತ್, ಚೆರುವತ್ತೂರು ಗ್ರಾಮ ಪಂಚಾಯತ್ ಸದಸ್ಯೆ ಕೆ. ರಜನಿ ಹಾಗೂ ವಳ್ಳಂಕಳಿ ಅಸೋಸಿಯೇಷನ್ ಅಧ್ಯಕ್ಷ ಟಿ.ವಿ. ಸುರೇಶ್ ಬಾಬು ಉಪಸ್ಥಿತರಿದ್ದರು.
ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ನೀಲೇಶ್ವರಂ ನಗರಸಭೆ ಅಧ್ಯಕ್ಷ ಪಿ.ಪಿ. ಮುಹಮ್ಮದ್ ರಾಫಿ ಸ್ವಾಗತ ಕೋರಿದರು. ಪ್ರಚಾರ ಸಮಿತಿಯ ಅಧ್ಯಕ್ಷ ವಿನೋದ್ ಅಚ್ಚಾಂತುರುತ್ತಿ ವಂದನಾರ್ಪಣೆ ಮಾಡಿದರು. ಉತ್ತರ ಮಲಬಾರಿನ ಸಾಂಪ್ರದಾಯಿಕ ದೋಣಿ ಸ್ಪರ್ಧೆಗೆ ಮೆರುಗು ನೀಡುವ ಈ ಜಲೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ.



