ನವದೆಹಲಿ: ಮತಕಳವು ಖಂಡಿಸಿ 'ಇಂಡಿಯಾ' ಒಕ್ಕೂಟವು ಭಾನುವಾರ ನಡೆಸಿದ ಬೃಹತ್ ರ‍್ಯಾಲಿಯನ್ನು ಮೂರ್ಖತನದ ನಾಟಕ ಎಂದು ಕರೆದ ಕೇಂದ್ರ ಸಚಿವ ಜೆ.ಪಿ.ನಡ್ಡಾ, 1984ರ ಸಿಖ್ ಗಲಭೆಯ ವರ್ಷಾಚರಣೆಯಂದೇ ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸಿಖ್ ಸಮುದಾಯದವರ ಗಾಯಕ್ಕೆ ರಾಹುಲ್ ಗಾಂಧಿ ಉಪ್ಪು ಸವರಿದ್ದಾರೆ' ಎಂದು ಆರೋಪಿಸಿದ್ದಾರೆ.
'ಪ್ರತಿಭಟನೆಯು ಪ್ರಜಾಪ್ರಭುತ್ವವನ್ನು ಅರಾಜಕತೆ ಹಾಗೂ ಅವ್ಯವಸ್ಥೆಗೆ ವ್ಯವಸ್ಥಿತವಾಗಿ ದೂಡುವ ಪಿತೂರಿಯ ಭಾಗವಾಗಿದೆ. ಇದು ಕಾಂಗ್ರೆಸ್‌ನ ರಾಜಕೀಯ ಪತನದ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆಯಾಗಲಿದೆ' ಎಂದು ಟೀಕಿಸಿದ್ದಾರೆ.
'ಜನರಿಂದ ಆಯ್ಕೆಯಾದ ಪ್ರಜಾಪ್ರಸತ್ತಾತ್ಮಕ ಸರ್ಕಾರವನ್ನು ಕಿತ್ತೊಗೆಯಲು ದೆಹಲಿಯಲ್ಲಿ ದಂಗೆ ಹಾಗೂ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಮುಂದಾಗಿದೆ. ಹಬ್ಬದ ಸಂದರ್ಭದಲ್ಲಿಯೇ ಪ್ರತಿಭಟನೆ ನಡೆಸುವ ಮೂಲಕ ವ್ಯಾಪಾರಿಗಳಿಗೆ ತೊಂದರೆ ಉಂಟುಮಾಡುವ ಜೊತೆಗೆ ದೇಶಕ್ಕೆ ಅಪಮಾನ ಮಾಡುವುದೇ ರ‍್ಯಾಲಿಯ ಉದ್ದೇಶವಾಗಿದೆ' ಎಂದಿದ್ದಾರೆ.
'ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ ನವೆಂಬರ್ 1 ಅತ್ಯಂತ ಕರಾಳ ದಿನವಾಗಿದೆ. ಇದೇ ದಿನದಂದು ಕಾಂಗ್ರೆಸ್‌ನ ಗೂಂಡಾಗಳು ಸಾವಿರಾರು ಅಮಾಯಕ ಸಿಖ್ ಸಮುದಾಯದವರನ್ನು ಹತ್ಯೆಗೈದು, ರಾತ್ರಿಯೊಳಗಾಗಿ ಲಕ್ಷಾಂತರ ಮಂದಿಯನ್ನು ಮನೆ ಕಳೆದುಕೊಳ್ಳುವಂತೆ ಮಾಡಿದ್ದರು' ಎಂದು ನಡ್ಡಾ ಹೇಳಿದ್ದಾರೆ.
'ಭಾರತವು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ದಂಗೆ ಪ್ರೇರಿತ ರಾಜಕಾರಣದಿಂದ ನಡೆಯುವುದಿಲ್ಲ. ಸಂವಿಧಾನ ಹಾಗೂ ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು' ಎಂದು ಸಲಹೆ ನೀಡಿದ್ದಾರೆ.



