HEALTH TIPS

SIR ವಿವಾದ: ಪ್ರಜಾಪ್ರಭುತ್ವದ ಅಸ್ತಿತ್ವದ ಹೋರಾಟ ಎಂದ ವಿಪಕ್ಷಗಳ ಮುಂದಿನ ನಡೆಯೇನು?

ಕಾಂಗ್ರೆಸ್ ಸೇರಿದಂತೆ ಲೋಕಸಭೆ ವಿರೋಧ ಪಕ್ಷಗಳ 'ಇಂಡಿಯಾ' ಬಣದ ನಾಯಕರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವಿವಾದವನ್ನು ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಯ ಬೃಹತ್ ಹೋರಾಟವಾಗಿ ಪರಿವರ್ತಿಸಲು ಯತ್ನಿಸುತ್ತಿದ್ದಾರೆ.


ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವಿರುದ್ಧದ ವಿರೋಧ ಪಕ್ಷಗಳ ಅಭಿಯಾನವು ಅತ್ಯಂತ ನಿರ್ಣಾಯಕ ಹಂತವನ್ನು ತಲುಪಿದೆ.

ಇದರ ಬೆನ್ನಲ್ಲೇ ಇದೇ ವಿಚಾರವಾಗಿ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಮುಂದಿನ ನಡೆಯನ್ನು ಕಂಡುಕೊಳ್ಳಲು ಸಜ್ಜಾಗುತ್ತಿವೆ.

ಎಸ್‌ಐಆರ್‌ ವಿವಾದ ಮತ್ತು ಅದರ ಸುತ್ತ ನಡೆಯುತ್ತಿರುವ ರಾಜಕೀಯವು ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳು ಕೈಗೊಂಡಿರುವ ಬೃಹತ್ ಪ್ರಯತ್ನದ ಭಾಗವಾಗಿದೆ. ಇಲ್ಲಿ ರಾಜಕೀಯ ಸಂಘರ್ಷವನ್ನು 'ಸಾಂಪ್ರದಾಯಿಕ ಜಾತ್ಯತೀತತೆ ವಿರುದ್ಧ ಕೋಮುವಾದ' ಎಂಬ ವಿಭಜನೆಯಿಂದ ಮುಕ್ತಗೊಳಿಸಿ, ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಸ್ವಾತಂತ್ರ್ಯೋತ್ತರ ಭಾರತದ ಸಾಂಸ್ಥಿಕ ಚೌಕಟ್ಟನ್ನು ರಕ್ಷಿಸುವತ್ತ ಗಮನ ಸೆಳೆಯುವುದು ಇದರ ಉದ್ದೇಶವಾಗಿದೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದು ಹಾಗೂ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಸಾರ್ವಜನಿಕರಿಗೆ ಇರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ವಿಪಕ್ಷಗಳ ವಾದದ ಸಾರಾಂಶವಾಗಿದೆ.

ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಎಸ್‌ಐಆರ್ ವಿವಾದವನ್ನು ಪ್ರಜಾಸತ್ತಾತ್ಮಕ ಹಕ್ಕುಗಳನ್ನು, ವಿಶೇಷವಾಗಿ ಸಮಾಜದ ದುರ್ಬಲ ವರ್ಗಗಳ ಹಕ್ಕುಗಳನ್ನು ಖಾತರಿಪಡಿಸುವ ಸಾಂವಿಧಾನಿಕ ರಕ್ಷಣೆಯನ್ನು ಎತ್ತಿಹಿಡಿಯುವ ಅಭಿಯಾನದ ಭಾಗವಾಗಿಸಲು ಪ್ರಯತ್ನಿಸಿದ್ದಾರೆ.

ಹೀಗಾಗಿ, ಎಸ್‌ಐಆರ್ ಪ್ರಕ್ರಿಯೆ ವೇಳೆ ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕಲಾಗುತ್ತಿದೆ ಎಂಬ ಆರೋಪದ ವಿರುದ್ಧದ ಈ ಅಭಿಯಾನವು ವಿಪಕ್ಷಗಳ 'ಸಂವಿಧಾನ ಉಳಿಸಿ' ಎಂಬ ನಿಲುವಿನ ಮತ್ತೊಂದು ಭಾಗವಾಗಿದೆ.

2024ರ ಲೋಕಸಭಾ ಚುನಾವಣೆಯಿಂದಲೂ ಇದು ವಿಪಕ್ಷಗಳ ಪ್ರಮುಖ ರಾಜಕೀಯ ಅಜೆಂಡಾ ಆಗಿ ಉಳಿದಿದೆ. ಜಾತಿಗಣತಿಗಾಗಿ ಒತ್ತಾಯಿಸುವುದು ಮತ್ತು ಬಂಡವಾಳಶಾಹಿ ವಿರುದ್ಧದ ಟೀಕೆಗಳು ಕೂಡ ಇದೇ ಅಜೆಂಡಾದ ಭಾಗಗಳಾಗಿವೆ.

ವಿರೋಧ ಪಕ್ಷದ ಕಾರ್ಯಕರ್ತರು ಭಾನುವಾರ ಬೆಳಿಗ್ಗೆ ಬಿಜೆಪಿ ರಾಷ್ಟ್ರೀಯ ಕಚೇರಿಯ ಮುಂಭಾಗದಲ್ಲಿರುವ ದೀನ್‌ದಯಾಳ್ ಉಪಾಧ್ಯಾಯ ಮಾರ್ಗದಿಂದ ರಾಮಲೀಲಾ ಮೈದಾನದತ್ತ ಮೆರವಣಿಗೆ ನಡೆಸಿದ್ದರು. 'ಮತ ಕಳ್ಳರು ಮತ್ತು ದೇಣಿಗೆ ಕಳ್ಳರು ಎಲ್ಲಿ ಸಿಗುತ್ತಾರೆ?, ಬಿಜೆಪಿ ಕಚೇರಿಯಲ್ಲಿ ಸಿಗುತ್ತಾರೆ...' ಎಂದು ಘೋಷಣೆಗಳನ್ನು ಕೂಗಿದ್ದರು.

ಈ ಎಲ್ಲಾ ವಿಷಯಗಳನ್ನು ಒಟ್ಟುಗೂಡಿಸಿ 'ಇಂಡಿಯಾ' ಬಣವು ಒಂದು ವಿಶಾಲವಾದ ರಾಜಕೀಯ ಚೌಕಟ್ಟನ್ನು ರೂಪಿಸಿದೆ. ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ರಕ್ಷಣೆಗಾಗಿ ಸಾಂವಿಧಾನಿಕ ವ್ಯವಸ್ಥೆಯನ್ನು ನಂಬಿರುವ ಶೇಕಡ 80ರಿಂದ 85ರಷ್ಟು ಜನಸಂಖ್ಯೆಯನ್ನು ತಮ್ಮತ್ತ ಸೆಳೆಯುವುದು ಇದರ ಉದ್ದೇಶವಾಗಿದೆ.

ಆದಾಗ್ಯೂ, ಈ ರಾಜಕೀಯ ಸಂಘರ್ಷವು ತೀವ್ರಗೊಳ್ಳುತ್ತಿರುವುದು ಮತ್ತು ಸುದೀರ್ಘ ಹೋರಾಟದ ಲಕ್ಷಣಗಳು ಕಾಣಿಸುತ್ತಿರುವುದು ಪ್ರಾದೇಶಿಕ ಪಕ್ಷಗಳಿಗೆ ದೊಡ್ಡ ಧರ್ಮಸಂಕಟವನ್ನು ತಂದೊಡ್ಡಿದೆ. ವಿಶೇಷವಾಗಿ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಸೇರಿದಂತೆ ಪ್ರಮುಖ ಕಾಯ್ದೆಗಳ ಕುರಿತು ತಮ್ಮ ನಿಲುವನ್ನು ನಿರ್ಧರಿಸುವಲ್ಲಿ ಇದು ಸವಾಲಾಗಿದೆ.

ಸವಾಲುಗಳೇನು?

ವಿರೋಧ ಪಕ್ಷಗಳು ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ತೀವ್ರಗೊಂಡರೆ, ಈಗಾಗಲೇ ಲೋಕಸಭೆಯಲ್ಲಿ ಒಮ್ಮೆ ಸೋಲು ಕಂಡಿರುವ 'ಕ್ಷೇತ್ರ ಪುನರ್ವಿಂಗಡಣೆ' ವಿಧೇಯಕವನ್ನು ಮತ್ತೆ ಮಂಡಿಸಲು ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ ಕ್ರೋಢೀಕರಿಸುವ ಬಿಜೆಪಿ ಸಾಮರ್ಥ್ಯಕ್ಕೆ ಧಕ್ಕೆಯಾಗಬಹುದು.

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಂದ್ರ ಕುಮಾರ್ ಅವರ ರಾಜೀನಾಮೆ ಅಥವಾ ವಜಾಗೊಳಿಸಲು ತೀವ್ರಗೊಳಿಸುವ ಮೂಲಕ ವಿಪಕ್ಷಗಳ 'ಇಂಡಿಯಾ' ಬಣವು ನರೇಂದ್ರ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಜ್ಞಾನೇಂದ್ರ ಕುಮಾರ್ ಅವರನ್ನು ಸರ್ಕಾರದ ಇಚ್ಛೆಯ ಮೇರೆಗೆ ಹುದ್ದೆಯಿಂದ ತೆಗೆದುಹಾಕಲು ಸಾಧ್ಯವಿಲ್ಲ. ಅವರನ್ನು ಪದಚ್ಯುತಗೊಳಿಸಲು ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಅನ್ವಯಿಸುವಂತಹ ಪ್ರಕ್ರಿಯೆ ಮತ್ತು ಆಧಾರಗಳನ್ನೊಳಗೊಂಡ ಸಂಸದೀಯ ವಿಧಾನದ ಅಗತ್ಯವಿರುತ್ತದೆ. ಇಲ್ಲವೇ ಸಿಇಸಿ ಸ್ವತಃ ರಾಜೀನಾಮೆ ನೀಡಬೇಕಾಗುತ್ತದೆ.

ಆದರೆ, ಸ್ವಯಂಪ್ರೇರಿತ ರಾಜೀನಾಮೆ ನೀಡುವ ಸಾಧ್ಯತೆ ತೀರ ಕಡಿಮೆ. ಒಂದು ವೇಳೆ ಜ್ಞಾನೇಂದ್ರ ಕುಮಾರ್ ರಾಜೀನಾಮೆ ನೀಡಿದರೆ, ಅವರ ಮೇಲ್ವಿಚಾರಣೆಯಲ್ಲಿ ನಡೆದ ಚುನಾವಣೆಗಳ ಸಿಂಧುತ್ವದ ಮೇಲೆಯೇ ಪ್ರಶ್ನೆಗಳು ಮೂಡುತ್ತವೆ ಮತ್ತು ಇದು 'ಇಂಡಿಯಾ' ಬಣಕ್ಕೆ ದೊಡ್ಡ ರಾಜಕೀಯ ಗೆಲುವು ತಂದುಕೊಟ್ಟಂತಾಗುತ್ತದೆ.

ಇನ್ನೊಂದೆಡೆ, ಜ್ಞಾನೇಂದ್ರ ಕುಮಾರ್ ತಮ್ಮ ಹುದ್ದೆಯಲ್ಲಿ ಮುಂದುವರಿದರೆ, ಈ ವಿಷಯವನ್ನು ಜೀವಂತವಾಗಿರಿಸಲು ಮತ್ತು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಪದೇ ಪದೇ ಪ್ರಶ್ನಿಸಲು ವಿರೋಧ ಪಕ್ಷಕ್ಕೆ ಉತ್ತಮ ಅವಕಾಶವೂ ಸಿಕ್ಕಂತಾಗುತ್ತದೆ.

ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ: ವಿರೋಧ ಪಕ್ಷಗಳು ಈ ಅಭಿಯಾನವನ್ನು ಎಷ್ಟು ಕಾಲ ಮುಂದುವರಿಸಲು ಸಾಧ್ಯ?, ಪ್ರತಿಯೊಂದು ರಾಜಕೀಯ ಚಳವಳಿಗೂ ಒಂದು ಕಾಲಮಿತಿ ಇರುತ್ತದೆ. ಒಂದು ವಿಷಯವನ್ನು ಎಷ್ಟರಮಟ್ಟಿಗೆ ತೆಗೆದುಕೊಂಡು ಹೋಗಬೇಕು, ಎಷ್ಟು ರಾಜಕೀಯ ಶಕ್ತಿಯನ್ನು ವಿನಿಯೋಗಿಸಬೇಕು ಮತ್ತು ಮುಖ್ಯವಾಗಿ ಈ ವಾದವನ್ನು ಚುನಾವಣಾ ಲಾಭವನ್ನಾಗಿ ಯಾವಾಗ ಪರಿವರ್ತಿಸಬೇಕು ಎಂಬುದನ್ನು ನಾಯಕತ್ವವು ನಿರ್ಧರಿಸಬೇಕಾಗುತ್ತದೆ.

2027ರ ಆರಂಭದಲ್ಲಿ ‌ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಳು, ವಿಶೇಷವಾಗಿ ಉತ್ತರ ಪ್ರದೇಶದ ಚುನಾವಣೆಗಳು ಈ ಹೋರಾಟಕ್ಕಿರುವ ದೊಡ್ಡ ಪರೀಕ್ಷೆಯಾಗಲಿದೆ.

ರಾಜಕೀಯ ರ್‍ಯಾಲಿಗಳು ಮತ್ತು ಸಾರ್ವಜನಿಕ ಚಳವಳಿಗಳನ್ನು ಮೀರಿ ಈ ಅಭಿಯಾನವನ್ನು ಚುನಾವಣಾ ಬೆಂಬಲವನ್ನಾಗಿ ಪರಿವರ್ತಿಸಬೇಕಾದರೆ, ವಿಪಕ್ಷಗಳು ತಮ್ಮ ಸಾಂಸ್ಥಿಕ ಮತ್ತು ಸಾಂವಿಧಾನಿಕ ವಾದಗಳನ್ನು ಜನರ ಜೀವನೋಪಾಯದ ಸಮಸ್ಯೆಗಳೊಂದಿಗೆ ಜೋಡಿಸಬೇಕಾಗುತ್ತದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries