ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2017
ಕೊಂಡೆವೂರಿನಲ್ಲಿ ವಿಶಿಷ್ಟ "ಕೊಯ್ಲು ಉತ್ಸವ-2017"
ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಇತ್ತೀಚೆಗೆ ಧಾನ್ಯಲಕ್ಷ್ಮಿ ಕೃಷಿ ಯೋಜನೆಯಡಿಯಲ್ಲಿ ಬೆಳೆದ ಭತ್ತದ ಕಟಾವಿನ "ಕೊಯ್ಲು ಉತ್ಸವ"ದ ಉದ್ಘಾಟನಾ ಸಮಾರಂಭವು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಆಶ್ರಮದ ಟ್ರಸ್ಟಿ ಗೋಪಾಲ್ ಬಂದ್ಯೋಡ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪೂಜ್ಯ ಶ್ರೀಗಳು ಪರಿಸರದ ಉತ್ತಮ ಕೃಷಿಕರಾದ ಬಾಲಕೃಷ್ಣ ಭಂಡಾರಿ ದಡ್ಡಂಗಡಿ, ತಿಮ್ಮಪ್ಪ ಭಂಡಾರಿ ಬೇಕೂರು, ತ್ಯಾಂಪಣ್ಣ ಶೆಟ್ಟಿ ದೇರಂಬಳ, ಹರಿನಾಥ ಭಂಡಾರಿ ಮುಳಿಂಜ ಮತ್ತು ಕಮಲ ಹೇರೂರು ಇವರನ್ನು ಈ ಸಂದರ್ಭ ಸನ್ಮಾನಿಸಿ 'ಕೃಷಿಗೆ ಉತ್ತೇಜನ ನೀಡುತ್ತಾ ಕೃಷಿಯನ್ನು ಜೀವಂತವಾಗಿ ಉಳಿಸುವ ಇಂತಹ ಕೃಷಿಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಪ್ರಕೃತಿಯ ನಿಜವಾದ ಪೂಜೆಯೇ ಕೃಷಿ, ಕೃಷಿಯಿಂದ ಭೂಮಿತಾಯಿ ಸಂತೃಪ್ತಳಾಗುವಳು. ನಮ್ಮ ಆರೋಗ್ಯಕ್ಕೆ ಬೇಕಾದ ಶುದ್ಧ ವಾಯು,ಆಹಾರದೊಂದಿಗೆ ಉತ್ತಮ ಬದುಕನ್ನು ಅವಳು ಅನುಗ್ರಹಿಸುವಳು. ಅನ್ನಕ್ಕೆ ಪಯರ್ಾಯ ಬೇರೊಂದಿಲ್ಲ ಹಾಗಾಗಿ ಉತ್ತಮ ಸಾವಯವ ಕೃಷಿಯ ಮೂಲಕ ಬೇಕಾದ ಆಹಾರವನ್ನು ಪಡೆದುಕೊಳ್ಳಬೇಕು' ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾದ ಮಂಗಲ್ಪಾಡಿ ಗ್ರಾಮ ಪಂಚಾಯಿತಿ ಪ್ರತಿನಿಧಿ ಸುಜಾತಾ ಶೆಟ್ಟಿ ಮತ್ತು ಮುಸ್ತಫಾ ರವರು ಸಮಾಜಮುಖೀ ಚಟುವಟಿಕೆಯೊಂದಿಗೆ ಮರೆಯಾಗುತ್ತಿರುವ ಕೃಷಿಗೂ ಉತ್ತೇಜನ ನೀಡುವ ಆಶ್ರಮದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಕು.ಪ್ರಜ್ಞಾ, ಕು.ದಿವ್ಯಶ್ರೀ ಹಾಗೂ ಕು.ವೈಷ್ಣವಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕಮಲಾಕ್ಷ ಮುಳಿಗದ್ದೆ ಸ್ವಾಗತಿಸಿ, ಬಾಲಕೃಷ್ಣ ಶಿರಿಯ ವಂದಿಸಿದರು. ಶ್ರೀ ಅರವಿಂದಾಕ್ಷ ಭಂಡಾರಿ ನಿರೂಪಿಸಿದರು.
ಬಳಿಕ ಪರಮಪೂಜ್ಯ ಶ್ರೀಗಳವರ ನೇತೃತ್ವದಲ್ಲಿ ಅತಿಥಿಗಳು, ಸನ್ಮಾನಿತರು, ಕೃಷಿ ಅಭಿಮಾನಿಗಳು, ವಿದ್ಯಾಪೀಠದ ಮಕ್ಕಳು,ಹೆತ್ತವರು ಮತ್ತು ಅಧ್ಯಾಪಕ ವೃಂದದವರು ಚೆಂಡೆ, ಶಂಖ, ಜಾಗಟೆ ಕೊಂಬು ವಾದನದೊಂದಿಗೆ ಮೆರವಣಿಗೆಯಲ್ಲಿ ಗದ್ದೆಗೆ ಸಾಗಿ ಕಟಾವು ಮಾಡುವುದರ ಮೂಲಕ ಕೊಯ್ಲು ಉತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು.

