ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 01, 2017
ಪೊಲೀಸರಿಗೆ ಕಲ್ಲೆಸೆತ : ಮೂವರಿಗೆ ಗಾಯ
ಗುಂಪು ಚದುರಿಸಲು ಲಾಠಿ ಪ್ರಹಾರ : 100 ಮಂದಿ ವಿರುದ್ಧ ಮೊಕದ್ದಮೆ
ಉಪ್ಪಳ: ನಬಿ ದಿನದ ಅಂಗವಾಗಿ ಆರಾಧನಾಲಯದ ಮುಂಭಾಗದಲ್ಲಿ ಹಾಕಿದ್ದ ಪತಾಕೆ, ತೋರಣ ತೆರವುಗೊಳಿಸಲು ತಲುಪಿದ ಪೊಲೀಸರಿಗೆ ಗುಂಪೊಂದು ಕಲ್ಲೆಸೆದ ಪರಿಣಾಮವಾಗಿ ಮೂವರು ಪೊಲೀಸರು ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಉಪ್ಪಳ ನಯಾಬಝಾರ್ ಐಲ ದ್ವಾರದ ಬಳಿ ನಡೆದಿದೆ. ಇದೇ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಘಟನೆಗೆ ಸಂಬಂಧಿಸಿ 100 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕಲ್ಲೆಸೆತದಿಂದ ಮಂಜೇಶ್ವರ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿಗಳಾದ ಸಂದೀಪ್, ಸುರೇಂದ್ರನ್ ಮತ್ತು ಪೊಲೀಸ್ ಕಾನ್ಸ್ಟೇಬಲೊಬ್ಬರಿಗೆ ಗಾಯಗಳಾಗಿದ್ದು, ಇವರನ್ನು ಮಂಗಲ್ಪಾಡಿ ಆಸ್ಪತ್ರೆಗೆ ಸೇರಿಸಲಾಗಿದೆ.
ಸಂದೀಪ್ ಅವರ ತಲೆಗೆ ಹಾಗೂ ಕೈಗೆ ಗಾಯಗಳಾಗಿವೆ. ಸುರೇಂದ್ರನ್ ಅವರ ಕೈಗೆ ಗಾಯವಾಗಿದೆ. ಪತಾಕೆ, ತೋರಣ ಕಟ್ಟಿದ ಬಗ್ಗೆ ವಿವಾದ ನಡೆಯುತ್ತಿರುವ ಬಗ್ಗೆ ಮಾಹಿತಿಯಿಂದ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಈ ಮಧ್ಯೆ ಪೊಲೀಸರಿಗೆ ನಿರಂತರವಾಗಿ ಕಲ್ಲೆಸೆತ ನಡೆಯಿತು. ಇದೇ ಸಂದರ್ಭದಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರಗೈದರು. ಇದರಿಂದ ಗುಂಪು ಚದುರಿತು. ಪೊಲೀಸರಿಗೆ ಕಲ್ಲೆಸೆತ ಸಂಬಂಧ ಕಂಡರೆ ಪತ್ತೆಹಚ್ಚಬಹುದಾದ 100 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.






