HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              2011ರಿಂದ ಕೇರಳದಲ್ಲಿ  7292 ಮಕ್ಕಳು ನಾಪತ್ತೆ
     ಕಾಸರಗೋಡು: 2011ರಿಂದ ಕೇರಳದಲ್ಲಿ  7292 ಮಂದಿ ಮಕ್ಕಳು ನಾಪತ್ತೆಯಾಗಿದ್ದಾರೆ. ಇದು ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಅಂಕಿ ಅಂಶವಾಗಿದೆ. ಹೀಗೆ ಕಾಣೆಯಾದ ಮಕ್ಕಳ ಪೈಕಿ ಹೆಚ್ಚಿನವರು 9ರಿಂದ 17ರ ಮಧ್ಯೆ ಪ್ರಾಯದವರಾಗಿದ್ದಾರೆ. ಇನ್ನೊಂದೆಡೆ ಕೇರಳದಲ್ಲಿ ಪ್ರತಿ ತಿಂಗಳು ಸರಾಸರಿ 50 ರಷ್ಟು  ಮಂದಿ ಹೆಣ್ಮಕ್ಕಳು ನಾಪತ್ತೆಯಾಗುತ್ತಿರುವುದಾಗಿ ಲೆಕ್ಕಾಚಾರಗಳು ಸೂಚಿಸುತ್ತಿವೆ.
    2010ರಲ್ಲಿ  456 ಹೆಣ್ಮಕ್ಕಳು ಸೇರಿದಂತೆ 829 ಮಂದಿ ರಾಜ್ಯದಲ್ಲಿ  ನಾಪತ್ತೆಯಾಗಿದ್ದಾರೆ. 2011ರಲ್ಲಿ  546 ಹೆಣ್ಮಕ್ಕಳು ಒಳಗೊಂಡಂತೆ 942 ಮಕ್ಕಳು ಕಾಣೆಯಾಗಿದ್ದಾರೆ. 2012ರಲ್ಲಿ  605 ಹೆಣ್ಮಕ್ಕಳೂ ಸೇರಿದಂತೆ 1081 ಹಾಗೂ 2013ರಲ್ಲಿ  392 ಹೆಣ್ಮಕ್ಕಳು ಸೇರಿದಂತೆ 684 ಮಕ್ಕಳು ಮತ್ತು  2014ರಲ್ಲಿ  421 ಹೆಣ್ಮಕ್ಕಳು ಒಳಗೊಂಡಂತೆ 698 ಮಂದಿ ಮಕ್ಕಳು ಹಾಗೂ 2015ರಲ್ಲಿ  301 ಹೆಣ್ಮಕ್ಕಳು ಸೇರಿ 608 ಮಂದಿ ಮಕ್ಕಳು ನಾಪತ್ತೆಯಾಗಿದ್ದಾರೆ.
   2016 ಮತ್ತು  2017ರಲ್ಲಿ  ಈ ತನಕ ನಾಪತ್ತೆಯಾದ ಮಕ್ಕಳ ಲೆಕ್ಕಾಚಾರ ಹೊರಬರಲು ಬಾಕಿಯಿದೆ. ಅದೂ ಸೇರಿದರೆ ನಾಪತ್ತೆಯಾದ ಮಕ್ಕಳ ಸಂಖ್ಯೆ ಇನ್ನಷ್ಟು  ಹೆಚ್ಚಾಗಲಿದೆ. ಕೇರಳದಲ್ಲಿ  ಅತಿ ಹೆಚ್ಚು  ಮಕ್ಕಳು ನಾಪತ್ತೆಯಾಗಿರುವುದು ತಿರುವನಂತಪುರ ಜಿಲ್ಲೆಯಲ್ಲಾಗಿದೆ. ನಂತರದ ಸ್ಥಾನ ಮಲಪ್ಪುರಂ ಜಿಲ್ಲೆಗೆ ಸಂದಿದೆ.
   ಇದೇ ವೇಳೆ ಅವಯವ ವ್ಯಾಪಾರ, ಉಗ್ರಗಾಮಿ ಸಂಘಟನೆಗಳಿಗೆ ಸೇರ್ಪಡೆ, ಸೆಕ್ಸ್ ದಂಧೆ, ವಿದೇಶಗಳಿಗೆ ಬಾಲ ಕಾಮರ್ಿಕರನ್ನು  ಕಳುಹಿಸಿಕೊಡುವಿಕೆ, ನಕಲಿ ರೂಪದಲ್ಲಿ  ದತ್ತು  ಸ್ವೀಕಾರಕ್ಕಾಗಿ ಹೊರರಾಜ್ಯಗಳಿಗೆ ಸಾಗಾಟಲೈಂಗಿಕ ಬಳಕೆ, ಭಿಕ್ಷಾಟನೆಗೆ ಬಳಸಲು ಇತ್ಯಾದಿಗಳಿಗೆ ಮಕ್ಕಳನ್ನು  ಅಪಹರಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆಯ ವರದಿ ದೃಢಪಡಿಸಿದೆ.
   ರಾಜ್ಯದಲ್ಲಿ  ಅಪಾರ ಮಂದಿಯ ತಂಡದವರು ಭಿಕ್ಷಾಟನಾ ಜಾಲದವರಾಗಿ ಕಾರ್ಯವೆಸಗುತ್ತಿದ್ದಾರೆ. ಅವರು ಮಕ್ಕಳನ್ನು  ಅಪಹರಿಸಿ ಭಿಕ್ಷಾಟನೆಗಾಗಿ ಬಳಸುತ್ತಿದ್ದಾರೆ. ಆ ರೀತಿ ಭಿಕ್ಷಾಟಕರ ಕೈ ಸೇರಿದ ಹಲವು ಮಂದಿ ಮಕ್ಕಳನ್ನು  ಪೊಲೀಸರು ಪತ್ತೆಹಚ್ಚಿದ ಘಟನೆಗಳು ಹಲವೆಡೆಗಳಲ್ಲಿ  ನಡೆದಿವೆ.
   ಈ ಮಧ್ಯೆ ನಾಪತ್ತೆಯಾದ ಮಕ್ಕಳು ವರ್ಷಗಳಾದರೂ ಪತ್ತೆಯಾಗದೆ ಕಣ್ಣೀರು ಸುರಿಸುತ್ತಿರುವ ಅದೆಷ್ಟೋ ಹೆತ್ತವರು, ಕುಟುಂಬಗಳು ಕೇರಳದಲ್ಲಿವೆ.
   ಹೀಗೆ ಕೇರಳದಿಂದ ನಾಪತ್ತೆಯಾಗುವ ಮಕ್ಕಳನ್ನು  ಪತ್ತೆಹಚ್ಚಲು ರಾಜ್ಯ ಸರಕಾರವು ವಿಶೇಷ ಪೊಲೀಸ್ ತಂಡಕ್ಕೆ ರೂಪು ನೀಡಿದೆ. ಈ ಹಿಂದೆ ಕಾಸರಗೋಡು ಜಿಲ್ಲಾ  ಪೊಲೀಸ್ ವರಿಷ್ಠಾಕಾರಿಯಾಗಿ ಸೇವೆ ಸಲ್ಲಿಸಿದ್ದ  ಕನ್ನಡಿಗ ಐಪಿಎಸ್ ಅಧಿಕಾರಿ ಡಾ.ಎ.ಶ್ರೀನಿವಾಸ್ ಅವರನ್ನು  ಈ ವಿಶೇಷ ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
    ಮಕ್ಕಳ ಪತ್ತೆಕಾರ್ಯ ತ್ರಾಸದಾಯಕ : ಹಳೆಯ ಪ್ರಕರಣಗಳ ತನಿಖೆ ನಡೆಸುವುದು ಅತ್ಯಂತ ಕಷ್ಟಕರವಾಗಿದೆ. ಅದರಲ್ಲೂ  ಮಕ್ಕಳ ಪತ್ತೆಕಾರ್ಯ ಮತ್ತಷ್ಟು  ತ್ರಾಸದಾಯಕ ವಿಚಾರ. ಆದರೂ ತನಗಿತ್ತ  ಜವಾಬ್ದಾರಿಯನ್ನು  ಸಮರ್ಥವಾಗಿ ನಿರ್ವಹಿಸುವ ಮೂಲಕ ಮಕ್ಕಳ ಪತ್ತೆಗಾಗಿ ಅವಿರತ ಪ್ರಯತ್ನ  ನಡೆಸಲಾಗುವುದು ಎಂದು ಡಾ.ಎ.ಶ್ರೀನಿವಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಕ್ಕಳ ಬಗ್ಗೆ  ಅವರ ಹೆತ್ತವರು ಸದಾ ಜಾಗ್ರತೆ ವಹಿಸಬೇಕು. ಅವರ ಮೇಲೆ ಸದಾ ನಿಗಾಯಿರಿಸಬೇಕು. ಈ ನಿಟ್ಟಿನಲ್ಲಿ  ಹೆತ್ತವರು ಅಥವಾ ಪೋಷಕರು ತಮ್ಮ  ಹೊಣೆಗಾರಿಕೆಯನ್ನು  ಮರೆಯಬಾರದು ಎಂದು ಶ್ರೀನಿವಾಸ್ ಸಲಹೆ ನೀಡಿದ್ದಾರೆ.
   ಅಪ್ರಾಪ್ತರನ್ನು ಕೂಲಿಗೆ ಬಳಸಬೇಡಿ:
   ಜಿಲ್ಲೆ ಸಹಿತ ರಾಜ್ಯಾದ್ಯಂತ ಅಪ್ರಾಪ್ತ ಯುವಕ-ಯುವತಿಯರನ್ನು ಕೂಲಿಗಳಾಗಿ ಬಳಸುತ್ತಿರುವ ಬಗ್ಗೆ ವರದಿಗಳು ಬೊಟ್ಟು ಮಾಡುತ್ತಿವೆ. ಮನೆ, ಹೋಟೆಲ್, ಕೃಷಿ, ಕೈಗಾರಿಕೆ ಸಹಿತ ಹೆಚ್ಚಿನ ಎಲ್ಲಾ ವಿಭಾಗಗಳಲ್ಲಿ ಅಪ್ರಾಪ್ತರನ್ನು ಕೂಲಿಗಳಾಗಿ ಬಳಸುತ್ತಿರುವುದು ಕದ್ದುಮುಚ್ಚಿ ನಡೆಯುತ್ತಿದೆ. ಕಠಿಣ ಶಿಕ್ಷೆಗಳಿದ್ದರೂ ಜಾರಿಯಾಗುತ್ತಿಲ್ಲ ಮತ್ತು ಜಾರಿಗೆ ಪ್ರಯತ್ನಗಳೂ ನಡೆದಿಲ್ಲ. ಈ ಕಾರಣಗಳಿಂದ ಅಪ್ರಾಪ್ತರನ್ನು ಬಳಸಿಕೊಳ್ಳುವ ಬಗ್ಗೆ ಕಠಿಣ ನಿಲುವು ಅಗತ್ಯವಿದೆ.
   ಲೈಂಗಿಕ ಮತ್ತು ಮತಪರ ಶೋಷಣೆ:
   ಹೆಚ್ಚಾಗಿ ಮಕ್ಕಳನ್ನು ಲೈಂಗಿಕ ಮತ್ತು ಮತಪರ ಚಟುವಟಿಕೆಗಳಿಗೆ ಬಳಸುತ್ತಿರುವ ಬಗ್ಗೆಯೂ ವ್ಯಾಪಕ ಸಂಶಯಗಳು ಕಂಡುಬಂದಿವೆ. ವಿವಿಧ ಉಗ್ರ ಸಂಘಟನೆಗಳು ಮಕ್ಕಳನ್ನು ಅಸ್ತ್ರವಾಗಿ, ಭಾವೀ ಕಲಹಗಳಿಗೆ ಮಾಧ್ಯಮಗಳಾಗಿ ಮಕ್ಕಳನ್ನು ಬಳಸುತ್ತಿರುವ ಬಗ್ಗೆ ವರದಿಗಳಿವೆ. ಲೈಂಗಿಕವಾಗಿಯೂ ಅವರನ್ನು ದುರ್ಬಳಕೆಗೊಳಪಡಿಸಿ ತಪ್ಪು ದಾರಿಗೆ ಎಳಸುತ್ತಿರುವುದೂ ಕಂಡುಬಂದಿದೆ.
   ಏನಂತಾರೆ:
   ಮಕ್ಕಳ ನಾಪತ್ತೆ ಗಂಭೀರ ಪ್ರಕರಣವಾಗಿದ್ದು, ಇದರ ನಿರ್ವಹಣೆ ಸರಕಾರ, ಪೋಲೀಸ್, ಚೈಲ್ಡ್ಲೈನ್ ಗಳಿಗೆ ಮಾತ್ರ ಮೀಸಲಲ್ಲ. ನಾಗರಿಕ ಪ್ರಪಂಚದ ಪ್ರತಿಯೊಬ್ಬರೂ ಈ ನಿಟ್ಟಿನ ಜವಾಬ್ದಾರಿಯನ್ನು ಅರಿತುಕೊಳ್ಳುವ ಅಗತ್ಯವಿದ್ದು, ಮನಸ್ಸು ವಿಶಾಲಗೊಳಿಸಿ ಮಕ್ಕಳ ಶೋಷಣೆ, ದುರ್ಬಳಕೆ, ನಾಪತ್ತೆಯಾಗುವ ಸ್ಥಿತಿಯನ್ನು ಗುರುತಿಸಿ ಅಗತ್ಯ ಕ್ರಮಕ್ಕೆ ಕೈಜೋಡಿಸಬೇಕು.
                     ಜಿಲ್ಲಾ ಚೈಲ್ಡ್ಲೈನ್ ಅಧಿಕಾರಿ.ಕಾಸರಗೊಡು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries