ಪಾಶ್ಚಾತ್ಯ ದೇಶದಲ್ಲೂ ಭಾರತೀಯ ಸಂತ ಪರಂಪರೆಗೆ ವಿಶೇಷ ಮೆರಗು ತಂದವರು ತನ್ಮೂಲಕ ಭಾರತಕ್ಕೂ ಪ್ರಪಂಚದಾತ್ಯಂತ ಗೌರವದ ಸ್ಥಾನ ಬರಲು ಕಾರಣರಾದವರು ಸ್ವಾಮಿ ವಿವೇಕಾನಂದರು. ಅಂದು ಅಮೇರಿಕಾದ ನೆಲದಲ್ಲಿ ನಿಂತು ಪ್ರಾಚೀನ - ಅವರ್ಾಚೀನಗಳ ಸಂಗಮವೆನಿಸುವಂತಹ ಅವರ ಭಾಷಣ ಭಾರತದ ಜನ ಮಾನಸಕ್ಕೆ ಇಂದಿಗೂ ನಿತ್ಯ ನೂತನ. ಈ ಭಾಷಣದಿಂದಲೇ ಪ್ರಪಂಚವೂ ಭಾರತದ ಕಡೆಗೆ ಬೆರಗುಗಣ್ಣುಗಳಿಂದ ನೋಡಲು ಪ್ರಾರಂಭಿಸಿದ್ದು ಎಂದರೆ ಸುಳ್ಳಾಗಲಾಗದು. ಇವತ್ತಿಗೂ ಪಾಶ್ಚಾತ್ಯ ದೇಶಗಳಲ್ಲಿ ನಮ್ಮ ಸಂತಪರಂಪರೆಯ ಮುಕುಟಮಣಿ ನಿಸ್ಸಂಶಯವಾಗಿಯೂ ವಿವೇಕಾನಂದರೆೇ. ಅವರು ಸಾಧಿಸಿದ ಮಹತ್ ಸಾಧನೆಗಳಲ್ಲಿ ಮುನ್ನೆಲೆಗೆ ನಿಲ್ಲುವುದು ಹಾಗು ಗಮನಾರ್ಹವಾದುದು ಎಂದರೆ ಶ್ರೀ ರಾಮಕೃಷ್ಣ ಪರಮಹಂಸ ಪ್ರಣೀತವಾದ ಸರ್ವಧರ್ಮ ಸಮನ್ವಯ ದೃಷ್ಠಿಯನ್ನು ಪ್ರಸಾರ ಮಾಡುತ್ತಾ ಪೂರ್ವ, ಪಶ್ಚಿಮ ದೇಶಗಳ ನಡುವೆ ಭವ್ಯವಾದ ಬಾಂಧವ್ಯ ಸೇತುವನ್ನು ಬೆಳೆಸಿ ವಿಶ್ವಮೈತ್ರಿಗೆ ಅಂಕುರಾರ್ಪಣವನ್ನು ಮಾಡಿ ಪ್ರಪಂಚದ ಹೃದಯವನ್ನು ಸಂಕುಚಿತ ಬುದ್ಧಿಯಿಂದ ಪಾರು ಮಾಡಲು ತನ್ನ ಜೀವಿತವನ್ನೆೇ ತೇಯ್ದವರು. ಅದೂ ಕೂಡ ಒಬ್ಬ ಪ್ರಖರ ಹಿಂದುವಾದಿಯಾಗಿ. ಅಸಹಿಷ್ಣುತೆ, ಮತೀಯವಾದ, ಭಯೋತ್ಪಾದನೆ ಇತ್ಯಾದಿ ಲೋಕ ದುರಿತ ವಿಚಾರಗಳು ಹಿಂದುವಾದವನಿಗೆ ಸಾಧ್ಯವೇ ಇಲ್ಲ. ಸಾಮರಸ್ಯ ಜೀವನವೇ ಪ್ರತಿ ಹಿಂದುವಿನ ಹೃದಯಾಂತರಾಳದ ಭಾವನೆ. ಇದನ್ನು ಪ್ರಪಂಚಕ್ಕೆ ತೋರಿಸಿಕೊಟ್ಟವರೇ ವಿವೇಕಾನಂದರು. ಭಾರತಕ್ಕೆ ವ್ಯಾಪಾರಿಗಳಾಗಿ, ದೇಶಭ್ರಷ್ಟರಾಗಿ, ನಿರ್ಗತಿಕರಾಗಿ ಬಂದ ಎಲ್ಲರಿಗೂ ಆಶ್ರಯನೀಡಿ ಸುಖ ಜೀವನಕ್ಕೆ ಅನುವುಮಾಡಿಕೊಟ್ಟದ್ದೆೇ ನಮ್ಮ ಈ ಸನಾತನ ಹಿಂದು ಪರಂಪರೆ. ಇಂತಹ ನಮ್ಮ ಭವ್ಯ ಭಾರತಲ್ಲಿ ಹಿಂದು ಜೀವನ ಪದ್ಧತಿಯಲ್ಲಿದ್ದ ಹಲವು ಮೌಢ್ಯಗಳನ್ನು ತೊಡೆದು ಹಾಕಲು ಶ್ರಮಿಸಿದ ಸ್ವಾಮೀಜಿಯವರು ಸಮುದ್ರವು ತನ್ನೊಳಗಿದ್ದ ಕೊಳೆಯನ್ನು ತಾನೇ ತೊಳೆದುಕೊಂಡು ದಡಕ್ಕೆಸೆಯುವಂತೆ ದೇಶಕಟ್ಟುವಲ್ಲಿ ತಮನ್ನು ತಾವು ತೊಡಗಿಸಿಕೊಂಡರು. ಸಂತರೆಂದರೆ ಕೇವಲ ಜಪತಪಾದಿಗಳು, ಸಿದ್ಧಿಸಾಧನೆಗಳು ಇತ್ಯಾದಿಗಳನ್ನು ಮಾಡುವವರೇ ಹೊರತು ಬೇರೇನು ಅಲ್ಲ ಎನ್ನುವ ಕಾಲಘಟ್ಟದಲ್ಲಿ ದೇಶದಿಂದ ಈಶನೆಡೆಗೆ ಎಂಬ ಕಲ್ಪನೆಯನ್ನು ಕೊಟ್ಟವರೇ ಸ್ವಾಮೀಜಿಯವರು. ಒಂದಷ್ಟು ವರ್ಷಗಳ ಕಾಲ ನಿಮ್ಮ ಎಲ್ಲಾ ದೇವರುಗಳನ್ನು ತೆಗೆದು ಸಮುದ್ರಕ್ಕೆಸಿಯಿರಿ. ದೀನದಲಿತರ ಸೇವೆಯೊಂದಿಗೆ ಭಾರತವನ್ನು ಕಟ್ಟುವ ಕೆಲಸ ಮಾತ್ರ ನಮ್ಮದಾಗಲಿ. ಏಳಿ, ಎದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ ಎಂದದ್ದಕ್ಕಲ್ಲವೇ ಅವರನ್ನು ವೀರಸನ್ಯಾಸಿ ಎಂದದ್ದು. ಆದರೆ ನಾವುಗಳು ಇಂತಹ ಭವ್ಯವಾದ ಪರಂಪರೆಯ ಕೊಂಡಿಯಿಂದ ನಿಧಾನಕ್ಕೆ ಕಳಚಿಕೊಳ್ಳುತ್ತಿದ್ದೇವೇನೋ ಎನಿಸುತ್ತಿದೆ. ಸ್ವಾತಂತ್ರ್ಯಕಾಲ ಘಟ್ಟದಲ್ಲಿ ಬಿಳಿಯರು ದೇಶ ಬಿಟ್ಟು ಹೋಗುವಾಗ ಅವರ ಪಳೆಯುಳಿಕೆಯ ಒಂದಷ್ಟು ನೆಹರೂ ಪ್ರಣೀತ ವ್ಯಕ್ತಿಗಳಿಂದ ಆಳ್ವಿಕೆ ಮಾಡಿಸಿಕೊಂಡ ಕಾರಣದಿಂದ ಪಾಶ್ಚಾತ್ಯ ದೃಷ್ಠಿಕೋನದ ಕನ್ನಡಕವನ್ನು ಧರಿಸಿಕೊಂಡು ಭಾರತವನ್ನು ನೋಡುವುದನ್ನು ನಿಲ್ಲಿಸಿ ತಥಾಕಥಿತ ಬುದ್ಧಿ ಜೀವಿಗಳನ್ನು ದೂರವಿಟ್ಟು ನಮ್ಮ ತನವನ್ನು ನಾವು ಉಳಿಸಿಕೊಂಡೆವಾದರೆ ವಿವೇಕಾನಂದರ ಕನಸು ನನಸು ಮಾಡುವಲ್ಲಿ ನಮ್ಮ ಪರಿಶ್ರಮವೂ ಇದ್ದರೆ ಭಾರತವೂ ಪ್ರಪಂಚಕ್ಕೆ ಎಲ್ಲಾ ರೀತಿಯಲ್ಲಿಯೂ ದೊಡ್ಡಣ್ಣನಾಗಿ ಮೆರೆಯುವುದರಲ್ಲಿ ಸಂಶಯವೇ ಇಲ್ಲ. ಆದರೆ ಇದಕ್ಕೆ ನಾವೆಲ್ಲ ತಯಾರಾಗಬೇಕಷ್ಟೆ. ಪಕ್ಕದ ಮನೆಯಲ್ಲಿ ವಿವೇಕಾನಂದರು ಹುಟ್ಟಲ್ಲಿ ಆದರೆ ನಮ್ಮ ಮನೆಯಲ್ಲಿ ಬೇಡ ಎಂಬ ಸಂಕುಚಿತ ಭಾವನೆಯಲ್ಲಿ ಕುಳಿತದ್ದೇ ಆದರೆ ನಮ್ಮದು ಭಂಡತನದ ಬಾಳಾದೀತೇ ಹೊರತು ಮತ್ತೇನೂ ಆಗುವುದಿಲ್ಲ. ಇನ್ನಾದರೂ ನಾವು ಯೋಚಿಸೋಣ, ನಮ್ಮತನವನ್ನು ನಾವು ಉಳಿಸಿಕೊಳ್ಳೋಣ.
ಎಸ್.ಎಮ್. ಉಡುಪ
ಕುಂಟಾರು
9495905275



