ಹಠಾತ್ ಸಂಚಾರ ಮೊಟಕುಗೊಳಿಸಿದ ಬಸ್ ಗಳು- ಸಂಕಷ್ಟಕ್ಕೊಳಗಾಗಿ ಪರದಾಡಿದ ಪ್ರಯಾಣಿಕರು
ಬದಿಯಡ್ಕ: ಜಿಲ್ಲಾ ಕೇಂದ್ರಸ್ಥಾನವಾದ ಜಿಲ್ಲಾಧಿಕಾರಿಗಳ ಕಾಯರ್ಾಲಯದ ಸಮೀಪದಲ್ಲೇ ಹಾದುಹೋಗುವ ಕಾಸರಗೋಡು-ಮಾನ್ಯ-ಮುಂಡಿತ್ತಡ್ಕ ರಸ್ತೆಯ ಬಸ್ ಸೇವೆಗಳು ಗುರುವಾರ ಬೆಳಿಗ್ಗೆ 11ರ ವೇಳೆ ಹಠಾತ್ ಸಂಚಾರ ಮೊಟಕುಗೊಳಿಸಿದ್ದರಿಂದ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೊಳಗಾದರು.
ಕಾಸರಗೋಡಿನ ವಿದ್ಯಾನಗರದಿಂದ ಮಾನ್ಯದ ವರೆಗೆ ಈ ರಸ್ತೆಯ ಕಾಮಗಾರಿಯು ನಡೆಯುತ್ತಿದ್ದು, ವಿದ್ಯಾನಗರದಿಂದ ಕಲ್ಲಕಟ್ಟದ ತನಕ ರಸ್ತೆಯನ್ನು ಅಗೆದು ಮೊದಲ ಹಂತವಾಗಿ ಜಲ್ಲುಹುಡಿಗಳನ್ನು ಹಾಕಿ ಕಳೆದೆರಡು ವಾರಗಳಿಂದ ಕಾಮಗಾರಿ ನಿಲ್ಲಿಸಲಾಗಿತ್ತು. ಆದರೆ ಗುರುವಾರ ಯಾವ ಮುನದಸೂಚನೆಯೂ ಇಲ್ಲದೆ ಹಠಾತ್ ಮತ್ತೆ ಕಾಮಗಾರಿಯನ್ನು ಆರಂಭಿಸಲು ವಿದ್ಯಾನಗರದಲ್ಲಿ ರಸ್ತೆ ಸಂಚಾರ ನಿರ್ಬಂಧಿಸಿದ್ದರಿಂದ 11.30ರ ವೇಳೆಗೆ ಬಸ್ ಸಂಚಾರ ಮೊಟಕುಗೊಳಿಸಬೇಕಾಗಿ ಬಂತೆಂದು ಬಸ್ ಸಿಬ್ಬಂದಿಗಳು ತಿಳಿಸಿದ್ದಾರೆ.
ಈ ಹಿಂದೆ ವಿದ್ಯಾನಗರ-ಪನ್ನಿಪ್ಪಾರೆ-ಕೋಪ ರಸ್ತೆಯ ಮೂಲಕ ಸಮಾನಾಂತರ ಬದಲಿ ಬಸ್ ಸಂಚಾರಕ್ಕೆ ತಾತ್ಕಾಲಿಕ ಪರವಾನಿಗೆ ನೀಡಿದ್ದ ಸಾರಿಗೆ ಇಲಾಖೆ ಗುರುವಾರದಿಂದ ಅಂತಹ ತಾತ್ಕಾಲಿಕ ಪರವಾನಿಗೆ ನೀಡದಿರುವುದರಿಂದ ಬಸ್ ಸಂಚಾರ ನಡೆಸಲು ವ್ಯವಸ್ಥೆಗಳಿಲ್ಲದೆ ಸಂಚಾರ ಮೊಟಕುಗೊಂಡಿತು.
ಜಿಲ್ಲಾ ಕೇಂದ್ರಸ್ಥಾನ, ವಿವಿಧಶಾಲಾ ಕಾಲೇಜುಗಳು, ವ್ಯಾಪಾರ ವ್ಯವಹಾರಗಳಿಗೆ ದಿನನಿತ್ಯ ಸಾವಿರಕ್ಕಿಂತಲೂ ಮಿಕ್ಕಿನ ಜನಸಾಮಾನ್ಯರು ಸಂಚರಿಸುವ ಜಿಲ್ಲಾ ಪಂಚಾಯತಿ ರಸ್ತೆಯೊಂದು ಜನರಿಗೆ ಕಿರುಕುಳ ನೀಡುವ ರೀತಿಯಲ್ಲಿ ಮಾರ್ಪಟ್ಟಿರುವುದು ಅಧಿಕಾರಿ ವರ್ಗದ, ಆಳುವವರ ಭ್ರಷ್ಟ, ಸ್ವಾರ್ಥಪರ, ಜನವಿರೋಧಿ ನೀತಿಯ ಸಂಕೇತವೆಂಬ ಮಾತುಗಳು ಕೇಳಿಬಂದಿದೆ.
ಶುಕ್ರವಾರದಿಂದ ಪನ್ನಿಪ್ಪಾರ ಕೋಪ ರಸ್ತೆಯಲ್ಲಿ ಈ ಹಿಂದಿನಂತೆ ತಾತ್ಕಾಲಿಕ ಸಂಚಾರದ ಅನುಮತಿಗೆ ಸಾರಿಗೆ ಅಧಿಕೃತರು ಕ್ರಮ ಕೈಗೊಂಡರೆ ಬಸ್ ಸಂಚಾರ ನಡೆಸಬಹುದೆಂದು ಖಾಸಗೀ ಬಸ್ ಮಾಲಕರು ವಿಜಯವಾಣಿಗೆ ತಿಳಿಸಿದ್ದಾರೆ.

