ಕುಂಬಳೆ: ಕೀರ್ತನಾ ಕುಟೀರದ 10ನೇ ವರ್ಷದಹರಿಕಥಾ ಮಹೋತ್ಸವ ಹರಿಕಥಾ ನವಾಹದ ಸಮಾರೋಪ, ಕೀರ್ತನ ಕಸ್ತೂರಿ ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಕಾರ್ಯಕ್ರಮ ಇಂದು ಅಪರಾಹ್ನ 3 ರಿಂದ ಕಣಿಪುರ ಶ್ರೀಕ್ಷೇತ್ರ ಪರಿಸರದಲ್ಲಿ ನಡೆಯಲಿದೆ.
ತಂತ್ರವರ್ಯ ಉಳಿಯತ್ತಾಯ ವಿಷ್ಣು ಆಸ್ರದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಹಿರಿಯ ಮೃದಂಗ ವಿದ್ವಾನ್ ಬಾಬು ರೈ ಅವರಿಗೆ ಕೀರ್ತನ ಕಸ್ತೂರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹರಿಕಥಾ ಪರಿಷತ್ತು ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ, ಕವಿ, ಸಾಹಿತಿ, ನಿವೃತ್ತ ಬಾನುಲಿ ನಿಲಯ ನಿದರ್ೇಶಕ ವಸಂತಕುಮಾರ್ ಪೆರ್ಲ ಹಾಗೂ ಖ್ಯಾತ ಪ್ರಸೂತಿ ತಜ್ಞೆ ಡಾ. ಶಾಂಭವಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು, ನಾಟ್ಯ ವಿದುಷಿಃ ವಿದ್ಯಾಲಕ್ಷ್ಮೀ ಕುಂಬಳೆ ಹಾಗೂ ಖ್ಯಾತ ಚಿತ್ರಕಲಾ ಶಿಲ್ಪಿ ಎಂ.ಜಿ.ಕೆ.ಆಚಾರ್ಯ ಕುಂಬಳೆ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಕಾರ್ಯಕ್ರಮದ ವೇದಿಕೆಯಲ್ಲಿ ಮೊತ್ತಮೊದಲ ಬಾರಿಗೆ ಹರಿಕಥಾ ಸಂಕೀರ್ತನಾ ಸಂಬಂಧಿಯಾದ ಜಾಲತಾಣ(ವೆಬ್ ಸೈಟ್) ಅನಾವರಣಗೊಳಿಸಲಾಗುವುದು.
ಹರಿಕಥಾ ನವಾಹದ ಸಮಾರೋಪದಂಗವಾಗಿ ಬೆಳಿಗ್ಗೆ 10 ರಿಂದ12.30ರ ವರೆಗೆ ಕುಮಾರಿಯರಾದ ಶಾಂಭವಿ, ವೈಭವಿ, ಶ್ರದ್ದಾ ನಾಯರ್ಪಳ್ಳ, ಧನ್ಯಶ್ರೀ, ದಿವ್ಯಶ್ರೀ ಅವರಿಂದ "ಹರಿಕಥಾ ಭಾವ-ವೈಭವ" ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ.ಕಲಾರತ್ನ ಶಂ.ನಾ.ಅಡಿಗರು ಸಮನ್ವಯಕಾರರಾಗಿ ಭಾಗವಹಿಸುವರು. ಅಪರಾಹ್ನ 2 ರಿಂದ ಶ್ರದ್ದಾ ಗುರುದಾಸ್ ಮಂಗಳೂರು ಹಾಗೂ ಗಾಯತ್ರೀ ಅವರಿಂದ ಹರಿಕಥಾ ಸಂಕೀರ್ತನೆ ನಡೆಯಲಿದೆ. ಸಮಾರೋಪ ಸಭಾ ಕಾರ್ಯಕ್ರಮದ ಬಳಿಕ ಕಲಾರತ್ನ ಶಂ.ನಾ.ಅಡಿಗರಿಂದ ಹರಿಕಥಾ ಸಂಕೀರ್ತನೆ, ಬಳಿಕ ಮಂಗಲಾಚರಣೆಯೊಂದಿಗೆ ನವಾಹ ಸಂಪನ್ನಗೊಳ್ಳಲಿದೆ.


