ಕುಂಬಳೆ: ಕೇರಳ ವಿಧಾಸಭೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮೂರು ಸ್ಥಾನಗಳಿದ್ದು, ಆಡಳಿತ ನಡೆಸುತ್ತಿರುವ ಎಡರಂಗ ಸರಕಾರದ ಪ್ರಧಾನ ಮಿತ್ರಪಕ್ಷವಾಗಿದೆ. ಜೆಡಿಎಸ್ ಶಾಸಕರ ಮಂತ್ರಿಗಿರಿಯ ಬದಲಾವಣೆಗೆ ಜೆಡಿಎಸ್ ವರಿಷ್ಠ ಎಚ್.ಡಿ ದೇವೆಗೌಡ ಸಮ್ಮಿತಿಸಿದ್ದು, ಶಾಸಕ ಕೃಷ್ಣನ್ ಕುಟ್ಟಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಸ್ತುತ ಕೇರಳದ ಮಂತ್ರಿಮಂಡಲದಲ್ಲಿ ಜೆಡಿಎಸ್ ಪಕ್ಷದ ಮ್ಯಾಥ್ಯೂ.ಟಿ.ತೋಮಸ್ ನೀರಾವರಿ ಸಚಿವರಾಗಿದ್ದು, ಅವರ ಬದಲಿಯಾಗಿ ಕೃಷ್ಣನ್ ಕುಟ್ಟಿ ಅವರನ್ನು ನೇಮಿಸಲು ಶಿಫಾರಸು ಮಾಡಲಾಗುವುದು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಮಾಜಿ ಮಂತ್ರಿ ಸಿ.ಕೆ ನಾನು ಸಹ ವಿಧಾನಸಭೆಯಲ್ಲಿ ಶಾಸಕರಾಗಿದ್ದು, ಕೃಷ್ಣನ್ ಕುಟ್ಟಿ ಅವರೊಂದಿಗೆ ಬೆಂಗಳೂರಿಗೆ ನಡೆದ ಪಕ್ಷ ವರಿಷ್ಠರ ಸಭೆಯಲ್ಲಿ ಹಾಜರಾಗಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೆಗೌಡ ಕರೆದಿದ್ದ ಸಭೆಯಲ್ಲಿ ಸಚಿವ ಮ್ಯಾಥ್ಯೂ.ಟಿ ತೋಮಸ್ ಗೈರುಹಾಜರಾಗಿದ್ದರು. ಎಡರಂಗ ಸರಕಾರವು ಎರಡೂವರೆ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಂತ್ರಿ ಸ್ಥಾನದ ಬದಲಾವಣೆಗೆ ಕೇರಳ ರಾಜ್ಯ ಜೆಡಿಎಸ್ ಶಾಸಕರು ವಿನಂತಿಸಿದ್ದರಿಂದ ವಿಶೇಷ ಸಭೆ ನಡೆದಿತ್ತು.


