ಬದಿಯಡ್ಕ: ಕುಂಬ್ಡಾಜೆ ಪಂಚಾಯತಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ದಿ.ಡಾ.ವೈ.ಕೆ ಕೇಶವ ಭಟ್ಟರ ಕೊಡುಗೆ ಅತ್ಯಮೂಲ್ಯ.ಕಾರ್ಯ ಬಾಹುಳ್ಯದ ನಡುವೆಯೂ ಬಿಡುವು ಮಾಡಿಕೊಂಡು ಜನರೊಂದಿಗೆ ಸ್ಪಂದಿಸುವ ವ್ಯಕ್ತಿತ್ವ ಅವರದು.ಅವರೊಬ್ಬ ಪ್ರಾತಃ ಸ್ಮರಣೀಯರು ಎಂದು ಅಗಲ್ಪಾಡಿ ಶಾಲೆಯ ನಿವೃತ್ತ ಶಿಕ್ಷಕ,ಸಂಘಟಕ ಉಪ್ಪಂಗಳ ರಾಮಚಂದ್ರ ಭಟ್ ಹೇಳಿದರು.
ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಏತಡ್ಕ ಸಮಾಜ ಮಂದಿರದಲ್ಲಿ ಜರಗಿದ ಗ್ರಂಥಾಲಯದ ಸಂಸ್ಥಾಪಕ ಡಾ.ವೈ.ಕೆ ಕೇಶವ ಭಟ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಸಂಸ್ಮರಣ ಭಾಷಣ ಮಾಡಿದರು.
ಮುಂದುವರಿದು ಅವರು ಡಾ.ಕೇಶವ ಭಟ್ಟರ ಸೇವೆಗಳನ್ನು ವಿವರವಾಗಿ ಸಭೆಯ ಮುಂದಿಟ್ಟರು.ಕನ್ನಡ ಭಾಷೆ, ಸಂಸ್ಕೃತಿ ಸಂವರ್ಧನೆಗೆ ಹೋರಾಡಿದರೂ ಇತರ ಭಾಷೆಗಳಲ್ಲಿ ನಿಪುಣರಾಗಿದ್ದರು.ಸಂಯೋಗ,ಸಂಪರ್ಕಗಳನ್ನು ಅವರಿಂದ ಕಲಿಯಬೇಕಿತ್ತು ಎಂದರು.ಅವರು ನಿಧನರಾಗಿ 21ವರ್ಷಗಳಾದರೂ ಅವರ ನೆನಪು ಸದಾ ಹಸಿರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಡಾ.ಕೇಶವ ಭಟ್ಟರ ಜೀವಿತಾವಧಿಯ ಸಾಧನೆಗಳನ್ನು ಕವನ ರೂಪದಲ್ಲಿ ಪ್ರಸ್ತುತಪಡಿಸಿದರು.
ಕು.ವೈಷ್ಣವಿ ಮತ್ತು ಕು.ಅತ್ರೇಯಿ ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.ಉಪಾಧ್ಯಕ್ಷ ವೈ.ಕೆ ಗಣಪತಿ ಭಟ್ ಸ್ವಾಗತಿಸಿ, ಕಾರ್ಯದಶರ್ಿ ಕೆ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.ಗಣರಾಜ ಕೆ ವಂದಿಸಿದರು.ಭಾಗವಹಿಸಿದ ಎಲ್ಲರೂ ದಿವಂಗತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


