ಮಂಜೇಶ್ವರ: ಮುಸ್ಲಿಂ ಯೂತ್ ಲೀಗ್ ಸಂಘಟಿಸುತ್ತಿರುವ ಯುವಜನ ಯಾತ್ರೆ ಇಂದಿನಿಂದ(ಶನಿವಾರ) ಆರಂಭವಾಗಲಿದೆ. ಕೋಮುವಾದ ರಹಿತ ಭಾರತ, ಹಿಂಸೆ ರಹಿತ ಕೇರಳ ಎಂಬ ಘೋಷವಾಕ್ಯದಡಿ ಆರಂಭಗೊಳ್ಳಲಿರುವ ಯಾತ್ರೆಯನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಖ್ಯಸ್ಥ ಪಾಣಕ್ಕಾಡ್ ಸಯ್ಯಿದ್ ಹೈದರಾಲಿ ಶಿಹಾಬ್ ತಂಙಳ್ ಇಂದು ಉದ್ಘಾಟಿಸಲಿದ್ದಾರೆ.
ಮಂಜೇಶ್ವರದ ಉದ್ಯಾವರಿಂದ ಪ್ರಾರಂಭವಾಗುವ ಯಾತ್ರೆಗೆ ಇಂದು ಮಧ್ಯಾಹ್ನ 3.30 ಕ್ಕೆ ಚಾಲನೆ ಸಿಗಲಿದೆ. ಮುಸ್ಲಿಂ ಯೂತ್ ಲೀಗ್ ಅಧ್ಯಕ್ಷ ಸಯ್ಯಿದ್ ಮನ್ವರ್ ಅಲಿ ಶಿಹಾಬ್ ತಂಞಳ್ ಯಾತ್ರೆಯನ್ನು ಮುನ್ನಡೆಸಲಿದ್ದಾರೆ. ಪ್ರಧಾನ ಕಾರ್ಯದಶರ್ಿ ಪಿ.ಕೆ ಫಿರೋಸ್ ಉಪ ನಾಯಕತ್ವದಲ್ಲಿ ಯಾತ್ರೆ ಕೇರಳದಾದ್ಯಂತ ಮುನ್ನಡೆಯಲಿದೆ ಎಂದು ಐಯುಎಂಎಲ್ ಜಿಲ್ಲಾಧ್ಯಕ್ಷ ಎಂ.ಸಿ.ಕಮರುದ್ದೀನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಚಾರ ಯಾತ್ರೆಯ ರಾಜ್ಯದ 14 ಜಿಲ್ಲೆಗಳಲ್ಲಿ ಸಂಚರಿಸಲಿದೆ, ಡಿ.24 ರಂದು ಯುವಜನ ಯಾತ್ರೆ ತಿರುವನಂತಪುರದಲ್ಲಿ ಸಮಾಪ್ತಿಯಾಗಲಿದೆ.
ಭ್ರಷ್ಟಾಚಾರ ಮತ್ತು ಕೇಂದ್ರದ ನರೇಂದ್ರ ಮೋದಿ ಸರಕಾರದ ಮತಾಂಧ ನಿಲುವಿನ ಬಗ್ಗೆ ಯಾತ್ರೆ ಅರಿವು ಮೂಡಿಸಲಿದ್ದು ರಾಜ್ಯ ಸರಕಾರದ ಲಂಚಕೋರತನ ಮತ್ತು ಸ್ವಜನ ಪಕ್ಷಪಾತ ನೀತಿ ವಿರುದ್ಧ ದನಿ ಮೊಳಗಿಸಲಿದೆ ಎಂದು ಯೂತ್ ಲೀಗ್ ಜಿಲ್ಲಾಧ್ಯಕ್ಷ ಅಶ್ರಫ್ ಎಡನೀರು ಹೇಳಿದ್ದಾರೆ. ಬಿಜೆಪಿ ಮತ್ತು ಸಿಪಿಎಂ ಪಕ್ಷಗಳ ಜನ ವಿರೋಧಿ ನಿಲುವಿನ ಬಗ್ಗೆ ಜನರಿಗೆ ಮನವರಿಕೆ ಮಾಡಲಾಗುವುದು. ಇದೇ ಸಂದರ್ಭ ಎರಡೂ ಪಕ್ಷಗಳ ಶಬರಿಮಲೆ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಗ್ಗೆ ಬೆಳಕು ಚೆಲ್ಲಲಾಗುವುದು ಎಂದಿದ್ದಾರೆ. ಶಬರಿಮಲೆಯು ಬಿಜೆಪಿಗೆ ಸುವರ್ಣವಕಾಶವಾಗಿದೆ ಎಂಬಂತೆ ಬಿಂಬಿಸಲಾಗುತ್ತಿದ್ದು, ಸಮಾಜದ ಧ್ರುವೀಕರಣದಲ್ಲಿ ತೊಡಗಿದೆ ಎಂದು ಆರೋಪಿಸಿದರು. ಪ್ರಥಮ ಹಂತದಲ್ಲಿ ಯಾತ್ರೆಯು ಎರಡು ದಿನಗಳ ಕಾಲ ಕಾಸರಗೋಡು ಜಿಲ್ಲೆಯಲ್ಲಿ ಸಂಚರಿಸಲಿದೆ, ವಿವಿದೆಡೆಗಳಿಂದ ಸಾವಿರಕ್ಕೂ ಮಿಗಿಲಾದ ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಶ್ರಫ್ ಹೇಳಿದರು. ಭಾನುವಾರ ಕುಂಬಳೆಯಲ್ಲ ಸಾರ್ವಜನಿಕ ಸಭೆ ನಡೆಯಲಿದ್ದು, ಸೋಮವಾರ ಯಾತ್ರೆ ಉದುಮ ತಲುಪಿಲಿದೆ.

