ರಂಗಸಿರಿಯಿಂದ ಬಲಿಯೇಂದ್ರ ಪರ್ಬ ಆಚರಣ
ಬದಿಯಡ್ಕ: ತುಳುನಾಡಿನ ಪ್ರಾಚೀನ ಸಂಸ್ಕೃತಿಯ ಪ್ರತೀಕವಾದ ಬಲಿಯೇಂದ್ರ ಹಬ್ಬ ಮಣ್ಣಿನ ಸಮೃದ್ದತೆಯ ಸಂಕೇತವಾಗಿದೆ. ಆಚಾರ-ಅನುಷ್ಠಾನಗಳ ವಿಸ್ಮೃತಿ ಅಪಾಯಕಾರಿಯಾಗಿದ್ದು, ವಿನಾಶಕ್ಕೆ ಕಾರಣವಾಗುವುದು ಎಂದು ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ತಿಳಿಸಿದರು.
ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ದೀಪಾವಳಿಯ ಶುಭ ಸಂದರ್ಭದಲ್ಲಿ ಮಂಗಳವಾರ ಬದಿಯಡ್ಕ ಗ್ರಾ.ಪಂ. ಕಚೇರಿ ಪರಿಸರದಲ್ಲಿ ಆಯೋಜಿಸಿದ್ದ ಬಲಿಯೇಂದ್ರ ಪರ್ಬವನ್ನು ಶ್ರದ್ದಾ ಭಕ್ತಿಯಿಂದ ಅಣಿಗೊಳಿಸಿದ ಬಲಿಯೇಂದ್ರ ಸಂಕೇತದ ಎದುರು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಕುಂಬ್ಡಾಜೆ ಗ್ರಾಮಪಂಚಾಯತ್ ಉಪಾಧ್ಯಕ್ಷ ಆನಂದ ಮವ್ವಾರ್ ಅವರು ಬಲಿಯೇಂದ್ರ ಪರ್ಬದ ಮಹತ್ವವನ್ನು ವಿವರಿಸಿದರು. ಮುಂದಿನ ವರ್ಷ ಜನರ ಸಹಕಾರ ದೊರೆತರೆ ಕುಂಬ್ಡಾಜೆ ಪಂಚಾಯತಿನಲ್ಲೂ ಬಲಿಯೇಂದ್ರ ಹಬ್ಬವನ್ನು ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದರು. ತುಳುನಾಡಿನ ಪ್ರತಿ ಗ್ರಾಮಗಳಲ್ಲೂ ಸಾರ್ವಜನಿಕ ಬಲಿಯೇಂದ್ರ ಪರ್ಬ ನಡೆಯಬೇಕು, ಪ್ರತಿ ಮನೆಗಳಲ್ಲೂ ಬಲಿಯೇಂದ್ರನನ್ನು ಕರೆಯಬೇಕು ಎಂಬ ಸಂಘಟಕರ ಆಶಯಕ್ಕೆ ಆನಂದ ಮವ್ವಾರು ದನಿಗೂಡಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಪತ್ರಕರ್ತ ಪುರುಷೋತ್ತಮ ಭಟ್ ಅವರು ಮಾತನಾಡಿ, ತೌಳವ ಜಾನಪದೀಯ ಸಂಸ್ಕೃತಿಯು ಪ್ರಕೃತಿಯೊಂದಿಗೆ ನೇರ ಸಂಬಂಧಗಳನ್ನು ಹೊಂದಿದ್ದು, ಸಕಲ ಜೀವಜಾಲಗಳ ಶ್ರೇಯಸ್ಸಿನ ಚಿಂತನೆ ಅಡಗಿದೆ ಎಂದು ತಿಳಿಸಿದರು. ಸ್ವಾತಂತ್ರ್ಯಾನಂತರದ ಸುಧೀರ್ಘ ಇತಿಹಾಸದಲ್ಲಿ ಗಡಿನಾಡಿನನ ಕನ್ನಡಿಗರು ಮತ್ತು ತುಳುವರನ್ನು ಪ್ರತ್ಯೇಕಿಸುವ ಯತ್ನಗಳು ಆಳುವ ವರ್ಗದಿಂದ ವ್ಯಕ್ತವಾಗುತ್ತಿದೆ. ಭಾಷೆ, ಸಂಸ್ಕೃತಿಗಳ ಮೇಲೆ ರಾಜಕೀಯ ಪ್ರಭಾವಗಳನ್ನು ಬಳಸುವ ಮೂಲಕ ಸಂಸ್ಕೃತಿ ನಾಶಕ್ಕೆಯತ್ನಿಸಲಾಗುತ್ತಿದ್ದು, ಜಾಗೃತ ಸಮಾಜ ಶ್ರದ್ದಾ ಭಕ್ತಿಯಿಂದ ಪರಂಪರೆಯನ್ನು ಉಳಿಸುವ ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಹೊಸ ತಲೆಮಾರಿಗೆ ಈ ಬಗೆಗಿನ ಜಾಗೃತಿ ಮೂಡಿಸುವ ಯತ್ನಗಳಾಗಬೇಕು ಎಂದು ತಿಳಿಸಿದರು.
ರಂಗಸಿರಿ ವೇದಿಕೆಯ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಅಧ್ಯಕ್ಷತೆ ವಹಿಸಿದ್ದರು. ರಂಗಸಿರಿ ವೇದಿಕೆಯ ಕಾರ್ಯದಶರ್ಿ ಶ್ರೀಶಕುಮಾರ ಪಂಜಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಡಾ.ನರೇಶ್ ಮುಳ್ಳೇರಿಯ ವಮದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ, ಪ್ರಗತಿಪರ ಕೃಷಿಕ, ಸಂಶೋಧಕ ಚಂದ್ರಶೇಖರ ಏತಡ್ಕ, ನಿವೃತ್ತ ಪ್ರಾಂಶುಪಾಲ ಮೈರ್ಕಳ ನಾರಾಯಣ ಭಟ್, ಕೇಶವ ಪ್ರಸಾದ್, ಬೊಲ್ಪು ಸಂಘಟನೆಯ ಸುಂದರ ಬಾರಡ್ಕ, ಸೌಮ್ಯಾಪ್ರಸಾದ್, ಜಿ.ಕೆ.ಚಾರಿಟೇಬಲ್ವ ಟ್ರಸ್ಟ್ ಸಂಚಾಲಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಮೊದಲಾದವರು ಉಪಸ್ಥಿತರಿದ್ದರು.
ದಾಸವಾಳ, ಕೇಪಳ, ಚೆಂಡುಹೂ, ಪಾರೆ ಹೂ ಮೊದಲಾದ ಕಾಡುಹೂಗಳಿಂದ ಮಾಲೆಗಳಿಂದ, ಹಣತೆಗಳಿಂದ ಅಲಂಕರಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಂಗಸಿರಿಯ ಪುಟಾಣಿಗಳಾದ ಅಭಿಜ್ಞಾ ಬಿ.ಭಟ್, ಶ್ರೀಜಾ ಉದನೇಶ್, ಅಭಿರಾಮ ಕೆ, ಶಿವಾನಿ ಶಂಕರ್, ಚಿನ್ಮಯಕೃಷ್ಣ, ವಿಶಾಲಾಕ್ಷಿ ಪೊಟ್ಟಿಪಳ್ಳ, ಪ್ರಣಮ್ಯ, ಕವಿತಾ ನಾಟಿಕೇರಿ, ಕಿಶನ್ ಅಗ್ಗಿತ್ತಾಯ ಮೊದಲಾದವರು ನೃತ್ಯ, ಗೀತ, ಕವನವಾಚನ ಮೊದಲಾದ ಕಾರ್ಯಕ್ರಮಗಳು ನಡೆದವು. ಬಳಿಕ ಬಲೀಂದ್ರ ಲೆಪ್ಪುನಿ ಕಾರ್ಯಕ್ರಮ ನಡೆಯಿತು. ಅಪಾಯರಹಿತ, ಶಬ್ದಮಾಲಿನ್ಯವಿಲ್ಲದ ಪಟಾಕಿಗಳು ಕಣ್ಮನಗಳನ್ನು ರಂಜಿಸಿತು. ಸಾಲುಸಾಲು ಹಣತೆಗಳ ಬೆಳಕಿನಲ್ಲಿ ನಡೆದ ಕಾರ್ಯಕ್ರಮ ಅನಿರ್ವಚನೀಯ ಅನುಭವವನ್ನು ನೀಡಿತು. ವಿಶೇಷವಾಗಿ ಮಕ್ಕಳು ಹಾಗೂ ಮಹಿಳೆಯರ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಮೆರಗನ್ನು ನೀಡಿತಲ್ಲದೆ ತುಳುನಾಡು ಕಾಸರಗೋಡಿನಲ್ಲಿ ಪ್ರತಿ ಗ್ರಾಮಗಳಲ್ಲಿ ಇನ್ನು ಮುಂದೆ ಮತ್ತೆ ಬಲೀಂದ್ರಪರ್ಬದ ವೈಭವ ಮರುಕಳಿಸಬೇಕು ಎಂಬ ಸಂದೇಶವನ್ನು ನೀಡಿತು.
