ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಮಿನಿ ಕ್ಯಾಂಪೂರಿ ವೇದಿಕೆಯಲ್ಲಿ ಧಾಮರ್ಿಕ ಸಂತರ ಮಾರ್ಗದರ್ಶನ
ಸಹಭಾಳ್ವೆ, ಸಮಭಾವ, ಶಿಸ್ತಿಗೆ ಒಕ್ಕೊರಲ ಹೇಳಿಕೆ
ಕುಂಬಳೆ: ಶುಕ್ರವಾರದಿಂದ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಆವರಣದಲ್ಲಿ ಪ್ರಾರಂಭಗೊಂಡ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಮಿನಿ ಕ್ಯಾಂಪೂರಿಯ ಉದ್ಘಾಟನಾ ಸಮಾರಂಭದ ವೇದಿಕೆ ಹಲವು ವೈಶಿಷ್ಯ್ಯಗಳಿಗೆ ಸಾಕ್ಷಿಯಾಯಿತು.ಈ ಪೈಕಿ ಹಿಂದೂ-ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳ ಮಹಾನ್ ಸಂತರು ಭಾಗವಹಿಸಿ ಮಾರ್ಗದರ್ಶನ ಆಶೀರ್ವಚನ ನೀಡಿದ್ದು ವಿಶಿಷ್ಟವಾಗಿ ದಾಖಲಿಸಲ್ಪಟ್ಟಿತು.
ಕ್ಯಾಂಪೂರಿ ಕಾರ್ಯಕ್ರಮದಲ್ಲಿ ಸಂಪುಟ ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಪ್ರಪಂಚದಲ್ಲಿ ಭಾರತ ದೇಶ ಅತ್ಯಂತ ಶ್ರೇಷ್ಟ ಎಂದು ಋಷಿಮುನಿಗಳು ಸಾರಿ ಹೇಳಿದ್ದಾರೆ. ಪ್ರಸ್ತುತ ಭಾರತೀಯರು ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳುವ ಮೂಲಕ ದೇಶವನ್ನು ಜಗತ್ತಿನ ಶಿಖರಕ್ಕೇರಿಸಬೇಕು ಎಂದು ತಿಳಿಸಿದರು. ಸಹಿಷ್ಣುತೆ, ಔದಾರ್ಯತೆ ಹಾಗೂ ಸೌಹಾರ್ದತೆಗೆ ಮಾದರಿಯಾಗಿರುವ ಭಾರತದಲ್ಲಿ ರಾಷ್ಟ್ರಪ್ರೇಮ ಜಾಗೃತವಾಗಬೇಕು. ಬದುಕಿನಲ್ಲಿ ಶಿಸ್ತು ಎಂಬುದು ವ್ಯಕ್ತಿಯ ಸಂತೋಷಕ್ಕೆ ಮಾತ್ರವಲ್ಲದೆ ಇತರರ ಸಂತಸಕ್ಕೂ ಕಾರಣವಾಗುತ್ತದೆ. ಲೋಕಾ ಸಮಸ್ತಾ ಸುಖಿನೋ ಭವಂತು ಎಂಬ ಉಕ್ತಿಯಂತೆ ಭಾರತದ ದೇಶ ಸಮಸ್ತರ ಏಳಿಗೆಯನ್ನೂ ಬಯಸುತ್ತದೆ. ಜಗತ್ತಿನ ಯಾವ ಮೂಲೆಯ ಒಳ್ಳೆಯತನ್ವನ್ನು ಸ್ವೀಕರಿಸುವ ಮಹಾನ್ ಗುಣ ಭಾರತಕ್ಕಿದೆ ಎಂದು ಅವರು ತಿಳಿಸಿದರು. ಕೇಂದ್ರ ಸರಕಾರವು ಸ್ವಚ್ಚತೆಯ ಬಗ್ಗೆ ಭಾರೀ ಜನಜಾಗೃತಿಗೆ ತೊಡಗಿಕೊಂಡಿದೆ. ಆದರೆ ಸ್ಕೌಟ್ಸ್ ಚಳವಳಿಯ ಮೂಲ ಪರಿಕಲ್ಪನೆಯ ಹಿಂದೆ ಇದೇ ಸ್ವಚ್ಚತೆಯ ಲಕ್ಷ್ಯದ ಬಗ್ಗೆ ಮಹತ್ವ ನೀಡಲಾಗಿದೆ ಎಂದು ಅವರು ನೆನಪಿಸಿದರು.
ಕಾಸರಗೋಡು ವಲಯ ಕ್ರೈಸ್ತ ದೇವಾಲಯಗಳ ಪ್ರಧಾನ ಧರ್ಮಗುರು, ಬೇಳ ಶೋಕಮಾತಾ ದೇವಾಲಯದ ಧರ್ಮಗುರುಗಳೂ ಆದ ಫಾದರ್ ಜೋನ್ ವಾಸ್ ಮಾತನಾಡಿ, ವಿದ್ಯಾಥರ್ಿ ದೆಸೆಯ ಸ್ಕೌಟ್ ಜೀವನ ಸಾಹಸಮಯ ಜೀವನದ ಪಾಠವನ್ನು ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅನುಭವದಿಂದ ಜೀವನದ ಪಾಠ ಕಲಿಯುವಂತೆ ಸ್ಕೌಟ್ನಲ್ಲಿ ಸಂಘ ಜೀವನದಿಂದ ಸಹೋದರತೆಯ ಮಹತ್ವವೂ ತಿಳಿಯುತ್ತದೆ. ವಿವಿಧ ಕುಟುಂಬದಿಂದ, ವರ್ಗದಿಂದ, ವಿವಿಧ ಮತ ಭಾಷೆಗಳ ಮಕ್ಕಳು ಒಟ್ಟಾಗಿ ಸೇರುವ ಅವಕಾಶವಿರುವ ಕ್ಯಾಂಪುರಿಯ ನ್ನು ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.
ಪ್ರಸಿದ್ದ ಇಸ್ಲಾಂ ಧರ್ಮ ಯುವ ಪಂಡಿತ ಕುಂಬೋಳ್ ಸಯ್ಯದ್ ಕೆ.ಎಸ್. ಶಮೀಮ್ ತಂಙಳ್ ಉಪಸ್ಥಿತರಿದ್ದು ಮಾತನಾಡಿ, ಇಂದಿನ ಮಕ್ದಳೇ ಮುಂದಿನ ಜನಾಂಗ ಎನ್ನುವಂತೆ ಆರೋಗ್ಯಕರ ನಾಗರಿಕನಿಂದ ಆರೋಗ್ಯಕರ ರಾಷ್ಟ್ರ ನಿಮರ್ಾಣ ಸಾಧ್ಯ. ತಾನು ಕಲಿತ ಶಿಕ್ಷಣ ಇನ್ನೊಬ್ಬನ ಬದುಕಿಗೂ ಸಹಾಯವಾದಲ್ಲಿ ಮಾತ್ರ ಶಿಕ್ಷಣದ ಮೌಲ್ಯ ಹೆಚ್ಚುತ್ತದೆ ಎಂದು ತಿಳಿಸಿದರು. ಪರೋಪಕಾರ ಹಾಗೂ ಸ್ವಾರ್ಥ ರಹಿತ ಜೀವನವನ್ನು ಪಠ್ಯದಲ್ಲಿ ಕಲಿಸಲಾರರು ಬದಲಾಗಿ ಇಂತಹ ಕ್ಯಾಂಪ್ಗಳಲ್ಲಿ ಅದು ಸಿಗುತ್ತದೆ ಎಂದು ತಿಳಿಸಿದರು.




