ಎಂಡೋಸಲ್ಫಾನ್ ಸಂತ್ರಸ್ತರು ಮತ್ತೆ ಹೋರಾಟಕ್ಕೆ ಡಿ.10 ರಂದು ವಿಧಾನಸಭೆ ಮುಂದೆ ಸತ್ಯಾಗ್ರಹ
0
ಡಿಸೆಂಬರ್ 08, 2018
ಕಾಸರಗೋಡು: ಸರಕಾರ ನೀಡಿದ ಭರವಸೆಗಳನ್ನು ಪಾಲಿಸಬೇಕೆಂದು ಒತ್ತಾಯಿಸಿ ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ.
ಮಾನವಹಕ್ಕು ದಿನವಾದ ಡಿ.10 ರಂದು ಮಹಿಳೆಯರು, ಮಕ್ಕಳು ಸಹಿತ 200 ಕ್ಕಿಂತ ಅಧಿಕ ಎಂಡೋಸಲ್ಫಾನ್ ಸಂತ್ರಸ್ತರು ರಾಜ್ಯ ವಿಧಾನಸಭೆ ಮುಂದೆ ಸತ್ಯಾಗ್ರಹ ನಡೆಸಲಿದ್ದಾರೆ.
2017 ರಲ್ಲಿ ನಡೆದ ಪ್ರತ್ಯೇಕ ವೈದ್ಯಕೀಯ ಶಿಬಿರದಲ್ಲಿ ಪತ್ತೆಹಚ್ಚಲಾದ ಅರ್ಹ ಸಂತ್ರಸ್ತರನ್ನು ಪಟ್ಟಿಯಲ್ಲಿ ಒಳಪಡಿಸಿ ಉಚಿತ ಸೌಲಭ್ಯ ಒದಗಿಸಬೇಕು, 2011 ರಲ್ಲಿ ಪತ್ತೆಹಚ್ಚಿದ 1318 ಮಂದಿ ಪಟ್ಟಿಯಿಂದ ಹೊರತುಪಡಿಸಿದ 610 ಮಂದಿಗೆ ಸಹಾಯವೊದಗಿಸಬೇಕು, ಎಲ್ಲಾ ಸಂತ್ರಸ್ತರಿಗೂ 5 ಲಕ್ಷ ರೂ. ಹಾಗೂ ಜೀವನ ಪರ್ಯಂತ ಚಿಕಿತ್ಸೆ ನೀಡಬೇಕು, ಸುಪ್ರೀಂ ಕೋರ್ಟ್‍ನ ತೀರ್ಪು ಜಾರಿಗೊಳಿಸಬೇಕು, ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೇಂದ್ರ-ರಾಜ್ಯ ಸರಕಾರಗಳಿಗೆ ನೀಡಿದ ಆದೇಶಗಳನ್ನು ಪಾಲಿಸಬೇಕು, ಸಂತ್ರಸ್ತರ ಸಾಲಗಳನ್ನು ಮಾನದಂಡಗಳನ್ನು ಪರಿಗಣಿಸದೆ ಮನ್ನಾಗೊಳಿಸಬೇಕು, ಬಡ್ಸ್ ಶಾಲೆಗಳಿಗೆ ಸಹಾಯವೊದಗಿಸಬೇಕು, ಎಲ್ಲ ಸಂತ್ರಸ್ತರಿಗೂ ಪುನರ್ವಸತಿ ಕಲ್ಪಿಸಬೇಕು, ಜಿಲ್ಲೆಯ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟಿರುವ ಎಂಡೋಸಲ್ಫಾನ್ ಕೀಟನಾಶಕ ನಾಶಗೊಳಿಸಬೇಕು, ಸಂತ್ರಸ್ತರ ಕುಟುಂಬದ ಓರ್ವ ಸದಸ್ಯನಿಗೆ ಶಿಕ್ಷಣ ಅರ್ಹತೆ ಅನುಸರಿಸಿ ಉದ್ಯೋಗ ನೀಡಬೇಕು ಮುಂತಾದ ಬೇಡಿಕೆಗಳನ್ನು ಮುಂದಿರಿಸಿ ಎಂಡೋಸಲ್ಫಾನ್ ಸಂತ್ರಸ್ತರು ಮತ್ತೆ ಚಳವಳಿಗೆ ಮುಂದಾಗಿದ್ದಾರೆ.
ಎಂಡೋಸಲ್ಫಾನ್ ಸಂತ್ರಸ್ತರ ಜನಪರ ಒಕ್ಕೂಟದ ನೇತೃತ್ವದಲ್ಲಿ ನಡೆಯವ ಚಳವಳಿಯಲ್ಲಿ ಸರಕಾರದ ಭಾಗದಿಂದ ಸೂಕ್ತ ಕ್ರಮವುಂಟಾಗದಿದ್ದರೆ ಜನವರಿ 26 ರಿಂದ ಸೆಕ್ರೆಟರಿಯೇಟ್ ಮುಂದೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ. ಯುಡಿಎಫ್ ಸರಕಾರಾವಧಿಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪರವಾಗಿ ಚಳವಳಿಗೆ ಮುಂದಾಗಿದ್ದ ಎಲ್‍ಡಿಎಫ್ ಅಧಿಕಾರ ಲಭಿಸಿದ ಬಳಿಕ ಸಂತ್ರಸ್ತರನ್ನು ಅವಗಣಿಸುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿದೆ.





