ಸಶಸ್ತ್ರಸೇನಾ ಧ್ವಜ ದಿನಾಚರಣೆ ಸೈನಿಕನ ಅನುಭವ ಮಕ್ಕಳಿಗೆ ಸಿಗುವಂತಾಗಬೇಕು: ಜಿಲ್ಲಾ ಸಹಾಯಕ ದಂಡಾಧಿಕಾರಿ (ಎಡಿಎಂ)
0
ಡಿಸೆಂಬರ್ 08, 2018
ಕಾಸರಗೋಡು: ದೇಶ ಕಾಯುವ ಸೈನಿಕನ ಜ್ಞಾನ ಮತ್ತು ಅನುಭವ ಮಕ್ಕಳಿಗೆ ಲಭಿಸುವಂಥಾ ಅವಕಾಶಗಳು ಸಮಾಜದಲ್ಲಿ ಒದಗಬೇಕು ಎಂದು ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅಭಿಪ್ರಾಯಪಟ್ಟರು.
ಕಾಸರಗೋಡು ಜಿಲ್ಲಾ ಸೈನಿಕ ಕಲ್ಯಾಣ ಕಚೇರಿ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಸಶಸ್ತ್ರಸೇನಾ ಧ್ವಜ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಭಾವೈಕ್ಯ, ಸಂರಕ್ಷಣೆ ಕಾಯುವ ಸೈನಿಕನ ಬದುಕು ಸಾರ್ಥಕ.ಅಂಥವರ ಅಭ್ಯದಯಕ್ಕೆ ಸಮಾಜದ ದೇಣಿಗೆಯೂ ಧನ್ಯತೆಯನ್ನು ಪಡೆಯುತ್ತದೆ. ಆಡಳಿತೆ ಈ ನಿಟ್ಟಿನಲ್ಲಿ ಒದಗಿಸುವ ಕಲ್ಯಾಣನಿಧಿಸಹಿತ ಸಚವಲತ್ತುಗಳು ಪೂರಕ ಎಂದವರು ತಿಳಿಸಿದರು.
ಹೊರದೇಶಗಳ ದಾಳಿ ತಡೆಯುವಲ್ಲಿ ನಮ್ಮ ಸೈನಿಕರ ಆತ್ಮಸ್ಥೈರ್ಯ, ದೇಶದ ಒಳಗಿನ ಪಿಡುಗನ್ನು ನಿವಾರಿಸುವಲ್ಲಿ ಯೋಧರ ಯೋಗದಾನ ಸಣ್ಣದಲ್ಲ. ಇದೇ ವೇಳೆ ಕೇರಳದಲ್ಲಿ ಸಂಭವಿಸಿದ ಜಲದುರಂತದಲ್ಲಿ ಸಿಲುಕಿದವರನ್ನು ಸಂರಕ್ಷಿಸುವಲ್ಲಿ ಸೈನಿಕರ ಸಂದರ್ಭೋಚಿತ ಕಾರ್ಯಾಚರಣೆ ಪ್ರಪಂಚಕ್ಕೆ ಮಾದರಿಯಾದುದು ಎಂದು ನುಡಿದರು.
ಕಾಸರಗೋಡು ಸಹಕಾರಿ ಇಲಾಖೆ ಜೊತೆ ರಿಜಿಸ್ಟಾರ್ ಮಹಮ್ಮದ್ ನೌಷಾದ್ ಅವರು ಮಾತನಾಡಿ ಸೈನಿಕರ ಅನುಭವ ಶಾಲಾ ವಿದ್ಯಾರ್ಥಿಗಳಿಗೆ ಒದಗಿಸುವಂಥಾ ಸಮಾರಂಭಗಳೂ ನಡೆದಾಗ ಮಾತ್ರ ಸೈನ್ಯ ಧ್ವಜದಿನಾಚರಣೆಗಳು ಅರ್ಥಪೂರ್ಣವಾಗಬಲ್ಲುವು. ಮಕ್ಕಳಿಗೆ ಸೌಹಾರ್ದದ ಕುರಿತು ಮಾಹಿತಿ ನೀಡಲು ಸೈನಿಕರು ಮಾತ್ರ ಅರ್ಹರು. ಯಾವ ಸೈನಿಕನೂ ಹೃದಯದಿಂದ ಯುದ್ಧವನ್ನು ಬಯಸುವುದಿಲ್ಲ. ಅನಿವಾರ್ಯ ಪ್ರಸಂಗಗಳಲ್ಲಿ ಮಾತ್ರ ಕದನಕ್ಕೆ ತೆರಳುತ್ತಾನೆ. ನಮ್ಮ ಮಕ್ಕಳನ್ನು ಸೈನ್ಯದಲ್ಲಿ ಭರ್ತಿಗೊಳಿಸುವಲ್ಲಿ ಹೆತ್ತವರು ಒಳ್ಳೆಯ ವೇತನ, ಸೌಲಭ್ಯ ಗಮನಿಸುವ ಬದಲು, ದೇಶ ಕಾಯುವ ಹೊಣೆಯನ್ನು ಗೌರವಿಸಬೇಕು ಎಂದು ವಿವರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸೈನಿಕ ಮಂಡಳಿ ಉಪಾಧ್ಯಕ್ಷ, ನಿವೃತ್ತ ಬ್ರಿಗೇಡಿಯರ್ ಟಿ.ಸಿ.ಅಬ್ರಾಹಂ ವಹಿಸಿದ್ದರು. ಎನ್.ಇ.ಎಕ್ಸ್.ಅಧ್ಯಕ್ಷ ವಿ.ವಿ.ಪದ್ಮನಾಭನ್, ವಾಯುದಳ ಅಸೋಸಿಯೇಶನ್ ಅಧ್ಯಕ್ಷ ಅಧ್ಯಕ್ಷ ಪಿ.ಪಿ.ಸಹದೇವನ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸ್ನೇಹಲತಾ ಕೆ. ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಸೈನಿಕ ಕಲ್ಯಾಣ ಅಧಿಕಾರಿ ಜೋಸ್ ಟೋಮ್ಸ್ ಸ್ವಾಗತಿಸಿದರು. ವೆಲ್ ಫೇರ್ ಆರ್ಗನೈಸರ್ ಚಂದ್ರನ್ ಪಿ. ವಂದಿಸಿದರು.
ಸಮಾರಂಭ ಅಂಗವಾಗಿ ನಿವೃತ್ತ ಸೈನಿಕರ ಕಲ್ಯಾಣ ಯೋಜನೆಗಳ ಕುರಿತು ಜಾಗೃತಿ ವಿಚಾರಸಂಕಿರಣ ಜರುಗಿತು. ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸ್ನೇಹಲತಾ ಕೆ., ಜಿಲ್ಲಾ ಸೈನಿಕಕಲ್ಯಾಣ ಅಧಿಕಾರಿ ಜೋಸ್ ಟೋಮ್ಸ್ ತರಗತಿ ನಡೆಸಿದರು.
ಪುಷ್ಪಚಕ್ರ ಸಮರ್ಪಣೆ : ಕಾರ್ಯಕ್ರಮ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಪುಷ್ಪಚಕ್ರ ಸಲ್ಲಿಕೆ ನಡೆಯಿತು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಬ್ರಿಗೇಡಿಯರ್ ಟಿ.ಸಿ.ಅಬ್ರಾಹಂ, ಬ್ರಿಗೇಡಿಯರ್ ಕೆ.ಎನ್.ಪಿ.ನಾಯರ್ ಮೊದಲಾದವರು ಪುಷ್ಪಚಕ್ರ ಸಮರ್ಪಿಸಿದರು. ನಿವೃತ್ತ ಸೈನಿಕರು, ಕುಟುಂಬದ ಸದಸ್ಯರು ಸ್ಮಾರಕಕ್ಕೆ ಪುಷ್ಪಾರ್ಚನೆ ನಡೆಸಿದರು.




