ಆತ್ಮಸ್ಥೈರ್ಯವನ್ನು ಮಕ್ಕಳಲ್ಲಿ ತಾಯಂದಿರು ತುಂಬಬೇಕು-ಚೈತ್ರಾ ಕುಂದಾಪುರ
0
ಡಿಸೆಂಬರ್ 09, 2018
ಪೆರ್ಲ: ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಿಗೆ ಸರಿ ಸಮಾನವಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.ಮಹಿಳಾ ಸಂಘಟನೆಗಳು ಸಾಮಾಜಿಕ ಚಿಂತನೆ, ಶಿಸ್ತುಬದ್ದ ನೆಲೆಗಟ್ಟಿನೊಂದಿಗೆ ಸಾಮಾಜಿಕ ಜವಾಬ್ದಾರಿಗಳನ್ನು ಹೆಗಲ ಮೇಲೇರಿಸಿ ಸಮಾಜದ ಕೊಂಡಿಯಾಗ ಬೇಕೆಂದು ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೇಳಿದರು.
ಅವರು ಶನಿವಾರ ಸ್ತ್ರೀಯರ ಸವಲತ್ತುಗಳು,ಮಹಿಳಾ ಸಂಘಟನೆ, ಹಾಗೂ ಮಹಿಳಾ ಹಕ್ಕುಗಳನ್ನು ತಿಳಿಯಪಡಿಸುವ ಸಲುವಾಗಿ ಮಾತೃ ಶಕ್ತಿ ಪೆರ್ಲ ಆಶ್ರಯದಲ್ಲಿ ಪೆರ್ಲ ಶ್ರೀ ಸತ್ಯ ನಾರಾಯಣ ಶಾಲೆಯಲ್ಲಿ ಶನಿವಾರ ನಡೆದ ಮಹಿಳಾ ಚೇತನ ವಿನೂತನ ಕಾರ್ಯಕ್ರಮದ ಸಮಾರೋಪ ಸಮಾರಂಭದ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು.
ಸೈದ್ಧಾಂತಿಕವಾಗಿ ಮಹಿಳೆಯರ ಮೇಲೆ ತುಳಿತ ನಡೆಯುತ್ತಿದೆ.ಸ್ತ್ರೀಯು ತನಗಾಗುವ ಅನ್ಯಾಯವನ್ನು ಖಂಡಿಸುವ ಮತ್ತು ಅದರ ವಿರುದ್ಧ ಧ್ವನಿಯಾಗಬೇಕು. ಅನ್ಯಾಯಕ್ಕೊಳಗಾದ ಸ್ತ್ರೀಯನ್ನು ಮಹಿಳಾ ಸಂಘಟನೆಗಳು ಬೆಂಬಲಿಸಿ ನ್ಯಾಯ ಒದಗಿಸಲು ಪ್ರಯತ್ನಿಸಬೇಕು.ಕೆಲವೊಂದು ಚಲನ ಚಿತ್ರಗಳು ಭಾರತೀಯ ಸಂಸ್ಕೃತಿಯಲ್ಲಿ ಸಂಪ್ರದಾಯದ ಕೊಂಡಿಯನ್ನು ಕಳಚಿ ಹೊರ ಬರುವುದೇ ಸ್ತ್ರೀ ಸಬಲೀಕರಣ ಎಂಬ ಸಂದೇಶ ನೀಡುವ ರೀತಿಯಲ್ಲಿ ಚಿತ್ರೀಕರಿಸಿ ಸ್ತ್ರೀಯರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಸಿವೆ. ಸ್ವಾತಂತ್ರ್ಯ, ಸ್ವೇಚ್ಛಾಚಾರದ ಹೆಸರಿನಲ್ಲಿ ತುಂಡುಡುಗೆಯೊಂದಿಗೆ ಸಮಾಜಕ್ಕೆ ಧುಮುಕುವ ಯತ್ನ ಸರಿಯಲ್ಲ.ಭಾರತೀಯ ಸಂಸ್ಕೃತಿ, ಉಡುಗೆ ತೊಡುಗೆ ಆಭರಣಗಳು ಅಂತಃಸತ್ವವನ್ನು ಗಟ್ಟಿಪಡಿಸುವ ಈಶ್ವರೀ ಶಕ್ತಿಯ ಆಯುಧಗಳೇ ಹೊರತು ಬಂಧನವಲ್ಲ.ಸವಾಲುಗಳಿಗೆ ಎದೆಗುಂದದೆ ಜಾಗೃತರಾಗಿ ಆತ್ಮಸ್ಥೈರ್ಯದೊಂದಿಗೆ ಪ್ರಶ್ನಿಸಿ, ಎದುರಿಸುವ ತಾಕತ್ತನ್ನು ತಾಯಂದಿರು ಮಕ್ಕಳಲ್ಲಿ ಬೆಳೆಸಬೇಕು.ವಿಶೇಷ ಗೌರವವಿರುವ ಪೆರ್ಲದ ಮಣ್ಣಲ್ಲಿ ಸುದೃಢ ಸಂಕಲ್ಪದೊಂದಿಗೆ ಹುಟ್ಟಿದ ಮಾತೃಶಕ್ತಿ ಸಂಘಟನೆ ಬೆಳೆದು ಸ್ತ್ರೀಯರ ಶಬ್ಧವಾಗಿ ಸಮಾಜಕ್ಕೆ ನವ ಚೇತನವನ್ನು ಮೂಡಿಸಲಿ ಎಂದರು.
ಎಣ್ಮಕಜೆ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷೆ ರೂಪವಾಣಿ ಆರ್.ಭಟ್ ಅಧ್ಯಕ್ಷತೆ ವಹಿಸಿದರು.ಮುಖ್ಯ ಅತಿಥಿ ಧಾರ್ಮಿಕ ಮುಖಂಡರಾದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಮಾತನಾಡಿ, ಮಾತೃ ಧರ್ಮವನ್ನು ಪರಿ ಪಾಲಿಸುವುದರೊಂದಿಗೆ ಬಾರತ ಮಾತೆಯ ಚರಣಗಳಿಗೆ ನಮಿಸುವ ಸಂಸ್ಕೃತಿ ಹಿಂದು ಸಂಸ್ಕೃತಿಯದ್ದಾಗಿದೆ.ತೀರ್ಥ ಸಮಾನವಾದ ನದಿ, ಬೆಟ್ಟಗಳನ್ನು ತಾಯಂದಿರ ಹೆಸರಲ್ಲಿ ಕರೆಯಲಾಗುತ್ತಿದೆ.ಎಂದಿಗೂ, ಯಾವ ರೀತಿಯಲ್ಲೂ ಇಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿಲ್ಲ.ಪ್ರಕೃತ ಚರ್ಚಾ ವಿಷಯವಾಗಿರುವ ಲಿಂಗ ಸಮಾನತೆ ಸುಪ್ರೀಂ ಕೋರ್ಟ್ ತಲಪಿದೆ.ದೇಶದ ಭದ್ರ ಅಡಿಪಾಯ, ಅಧ್ಯಾತ್ಮಿಕ ವಿಚಾರ, ಧಾರ್ಮಿಕ ಚಿಂತನೆ ಆಯಾ ಪ್ರದೇಶಕ್ಕನುಗುಣವಾಗಿ ವ್ಯತ್ಯಸ್ಥವಾಗಿರುತ್ತದೆ.ನಾಸ್ತಿಕ ಮೂಲ ಭೂತವಾದಿಗಳು ಆಚಾರ ಅನುಷ್ಠಾನಗಳ ಸಂಪೂರ್ಣ ನಿರ್ಮೂಲನೆಯ ಸಂಕಲ್ಪದೊಂದಿಗೆ ಅಧರ್ಮ ಮಾರ್ಗ ಅನುಸರಿಸುತ್ತಿದೆ.ವಿದೇಶಿ ದುಷ್ಟ ಕೂಟಗಳ ಆರ್ಥಿಕ ಬೆಂಬಲದೊಂದಿಗೆ ಭಾರತದ ಸಂಸ್ಕೃತಿಯ ಅಡಿಪಾಯವಾದ ಆಂತರಿಕ, ಸಾಂಸ್ಕಾರ ಪರಂಪರೆಗಳ ಮೇಲೆ ನಿರಂತರ ಆಕ್ರಮಣ ನಡೆಯುತ್ತಿದೆ. ಅಂತಹ ದುಷ್ಟ ಶಕ್ತಿಗಳನ್ನು ಕೇರಳದಲ್ಲಿ ತಲೆಯೂರಲು ಮಾತ್ರವಲ್ಲ ಕಾಲಿರಿಸಲು ಬಿಡಬಾರದು.ಲಿಂಗ ಸಮಾನತೆಯ ನೆಪದಲ್ಲಿ ನಾಸ್ತಿಕರಿಗೆ ಭದ್ರತೆ ಒದಗಿಸಿ, ಪವಿತ್ರ ದೇವಾಲಯಕ್ಕೆ ಕೊಂಡೊಯ್ಯುವ ಹೀನಾಯ ಪ್ರಯತ್ನಗಳು ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ದೇಶದ ಸಂಸ್ಕಾರ, ಭವ್ಯ ಪರಂಪರೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪೆರ್ಲದ ಮಾತೆಯರು ಸ್ಥಾಪಿಸಿದ ಮಾತೃ ಶಕ್ತಿ ಸಂಘಟನೆ ಮಾದರಿಯಾಗಿ ಮಿಂಚಿ ಹೊರ ಹೊಮ್ಮಲಿ ಎಂದರು.
ಮಾತೃ ಶಕ್ತಿ ಸಂಘಟನೆ ಪ್ರಧಾನ ಮಂತ್ರಿ ಜೀವನ್ ಸುರಕ್ಷಾ ಯೋಜನೆಯ 10 ವರ್ಷಗಳ ಪ್ರೀಮಿಯಂ ಬ್ಯಾಂಕ್ ಗಳಿಗೆ ಪಾವತಿಸುವ 50 ಫಲಾನುಭವಿಗಳಿಗೆ ನೀಡುವ ಬಾಂಡ್ ವಿತರಣೆಗೆ ಚಾಲನೆ ನೀಡಲಾಯಿತು.ನಿವೃತ್ತ ಸೈನಿಕರು ಹಾಗೂ ಸಾಧಕಿಯರನ್ನು ಗೌರವಿಸಲಾಯಿತು.ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಶಿಭೂಷಣ್ ಶಾಸ್ತ್ರಿ, ಉಕ್ಕಿನಡ್ಕ ಆಯುರ್ವೇದ ನಿರ್ದೇಶಕಿ ಡಾ.ಸ್ವಪ್ನಾ ಜೆ., ಬ್ಲಾಕ್ ಪಂಚಾಯಿತಿ ಸದಸ್ಯೆ ಸವಿತಾ ಬಾಳಿಕೆ ಉಪಸ್ಥಿತರಿದ್ದರು.
ರತ್ನಮಾಲಾ ಪ್ರಾರ್ಥಿಸಿದರು. ಸಂಘಟನೆಯ ಶ್ಯಾಮಲಾ ಆರ್.ಭಟ್ ಪತ್ತಡ್ಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.ನಳಿನಿ ಸೈಪಂಗಲ್ಲು ವಂದಿಸಿದರು.ಸ್ನೇಹ ಬಾಳಿಕೆ ನಿರೂಪಿಸಿದರು
ಬೆಳಗ್ಗೆ 10ಗಂಟೆಗೆ ಶ್ರೀ ಸತ್ಯ ನಾರಾಯಣ ವಿದ್ಯಾ ಸಂಸ್ಥೆ ವ್ಯವಸ್ಥಾಪಕ ಶ್ರೀಕೃಷ್ಣ ವಿಶ್ವಾಮಿತ್ರ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೀಪ ಬೆಳಗಿದಂತೆ ಹೇಗೆ ಕತ್ತಲು ದೂರವಾಗಿ ಬೆಳಕು ಆವರಿಸಿಕೊಳ್ಳುವುದೋ ಅದೇ ರೀತಿ ಸಾಮಾಜಿಕ, ಸಮಾಜಮುಖಿ ಸಂಘಟನೆಗಳಿಂದ ಸಮಾಜದ ಅಂಧಕಾರ ನೀಗಿ ಬೆಳಕು ತುಂಬಿ ಸಮಾಜದ ಶ್ರೇಯೋಭಿವೃದ್ಧಿಗೆ ಕಾರಣವಾಗುವುದು.ಸಮಾಜವನ್ನು ಮುನ್ನಡೆಸುವಲ್ಲಿ ಮಹಿಳೆಯರ ಪಾತ್ರ ಹಿರಿದು. ಪ್ರಸ್ತುತ ಹಲವಾರು ಸಂಘಟನೆಗಳಿದ್ದು ಅವುಗಳನ್ನು ಮುನ್ನಡೆಸಲು ಒಗಟ್ಟು ಅಗತ್ಯ. ಮಕ್ಕಳಿಗೆ ಎಳವೆಯಿಂದಲೇ ಉತ್ತಮ ರೀತಿಯ ಸಂಸ್ಕಾರದ ಜೊತೆಗೆ ಸಂಸ್ಕೃತಿ, ಪರಂಪರೆ, ಮಾನವೀಯ ಮೌಲ್ಯಗಳನ್ನು ಕಲಿಸುವಲ್ಲಿ ಶಿಕ್ಷಕರು ಮತ್ತು ಪಾಲಕರು-ಪೋಷಕರು ಹೆಚ್ಚಿನ ಆಸಕ್ತಿ ವಹಿಸಬೇಕು.ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮಾತೆಯೂ ಮುತುವರ್ಜಿ ವಹಿಸಬೇಕು ಎಂದರು.
ಆರ್ಥಿಕ ಸಾಕ್ಷರತಾ ತರಬೇತುದಾರ ಕೃಷ್ಣ ಕೆ. ಕೇಂದ್ರ ಸರಕಾರದ ನಾನಾ ಯೋಜನೆಗಳ ಮಾಹಿತಿ ನೀಡಿದರು.ದೇಶ ಭಕ್ತಿ ಗೀತೆ, ಪ್ರಬಂಧ, ರಸಪ್ರಶ್ನೆ ಮೊದಲಾಗಿ ಸ್ಪರ್ಧೆಗಳು ನಡೆದವು. ಮಧ್ಯಾಹ್ನ ಆಧುನಿಕ ಸಮಾಜದಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು ವಿಷಯದ ಕುರಿತಾಗಿ ಲೇಖಕಿ, ಬರಹಗಾರ್ತಿ ಕೃಷ್ಣ ವೇಣಿ ಕಿದೂರು, ಮಂಗಳೂರು ವಿಭಾಗ ದುರ್ಗಾ ವಾಹಿನಿ ಸಂಯೋಜಕಿ ವಿದ್ಯಾ ಮಲ್ಯ, ಕೇರಳ ರಾಜ್ಯ ಮೊಗೇರ ಸರ್ವೀಸಸ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಗಿರಿಜಾ ತಾರನಾಥ್ ಕುಂಬಳೆ, ವಿವೇಕಾನಂದ ಕಾಲೇಜು ಉಪನ್ಯಾಸಕಿ ಶೋಭಿತಾ ಸತೀಶ್ ನೇತೃತ್ವದಲ್ಲಿ
ವಿಚಾರ ಗೋಷ್ಠಿ ನಡೆಯಿತು.
ಸಂಜೆ ರಾಷ್ಟ್ರ ದೇವೋಭವ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯ ಪ್ರಸ್ತುತಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್, ಲತಾ ನಾಗರಾಜ್, ಶುಭಾಮಣಿ ಚಂದ್ರಶೇಖರ್ ನಿರ್ದೇಶನ ಹಾಗೂ ಪ್ರಖರ ವಾಗ್ಮಿ ಅಂಕಣಕಾರ ಆದರ್ಶ ಗೋಖಲೆ ಕಾರ್ಕಳ ನಿರೂಪಣೆಯಲ್ಲಿ ಭಾರತೀಯ ಸಂಸ್ಕೃತಿ, ಮೌಲ್ಯ, ಋಷಿ , ನದಿ, ಪುಣ್ಯಕ್ಷೇತ್ರ, ಯೋಗ, ಗೋಪರಂಪರೆಯ ಚಿಂತನೆ ಹಾಗೂ ಜಾಗೃತಿಯ ನುಡಿ ನಾದ ನಾಟ್ಯಾಮೃತ ಪುಣ್ಯಭೂಮಿ ಭಾರತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.




