ಜ್ಯೋತಿಯಿಂದ ಧರ್ಮ ವಿರೋಧಿಗಳಿಗೆ ಉತ್ತರ : ಯೋಗಾನಂದ ಸರಸ್ವತಿ
0
ಡಿಸೆಂಬರ್ 27, 2018
ಮಂಜೇಶ್ವರ: ಜ್ಯೋತಿಯ ಶಕ್ತಿ ಅಂಧಕಾರ ನೀಗಿಸುತ್ತದೆ ಮಾತ್ರವಲ್ಲ ಧರ್ಮ ವಿರೊಧಿಗಳನ್ನು ಭಸ್ಮವು ಮಾಡಬಹುದು ಎಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಹೇಳಿದರು.
ಅಯ್ಯಪ್ಪ ಕರ್ಮ ಸಮಿತಿಯ ನೇತೃತ್ವದಲ್ಲಿ ಮಂಜೇಶ್ವರದ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಿಂದ ಬುಧವಾರ ಆರಂಭಗೊಂಡ ಕನ್ಯಾಕುಮಾರಿ ವರೆಗೆ 795 ಕಿ.ಮೀ. ದೂರಕ್ಕೆ ನಡೆದ ಅಯ್ಯಪ್ಪ ಜ್ಯೋತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ವಿಶೇಷ ಪೂಜೆಯ ಬಳಿಕ ಜ್ಯೋತಿ ಪ್ರಜ್ವಲನೆಗೊಳಿಸಿ ಹೊಸಂಗಡಿ ಪೇಟೆಯಲ್ಲಿ ಅವರು ಮಾತನಾಡಿದರು.
ಉತ್ತರಕಾಶಿ ಕಪಿಲಾಶ್ರಮದ ಶ್ರೀ ರಾಮಚಂದ್ರ ಸ್ವಾಮೀಜಿ ಮಾತನಾಡಿ ಕೇರಳದ ನಾಸ್ತಿಕ ಎಡರಂಗ ಸರಕಾರ ಹಿಂದುಗಳನ್ನು ವಿಭಜಿಸಿ ಆಡಳಿತ ನಡೆಸುತ್ತಿದೆ. ಹಿಂದೂಗಳ ಆಚಾರವನ್ನು, ನಂಬಿಕೆಯನ್ನು, ಭಕ್ತ ಸಮೂಹವನ್ನು ಪ್ರಶ್ನಿಸುವ ಪಿಣರಾಯಿಯ ಉದ್ದಟತನ ಕಮ್ಯೂನಿಸಂನ ನಾಶಕ್ಕೆ ಅಡಿಗಲ್ಲಾಗಿದೆ ಎಂದರು. ನಂಬಿಕೆಯನ್ನು ಅಧಿಕಾರದ ಮದದಿಂದ ದಬ್ಬಾಳಿಕೆಯಿಂದ ನಾಶ ಮಾಡಲು ಪ್ರಯತ್ನಿಸುತ್ತಿರುವ ಎಡರಂಗ ಸರಕಾರಕ್ಕೆ ಅಯ್ಯಪ್ಪ ಸದ್ಬುದ್ಧಿ ನೀಡಲಿ. ಇಲ್ಲವಾದಲ್ಲಿ ಅಯ್ಯಪ್ಪ ಭಕ್ತರ ಶಾಪಕ್ಕೆ ಸರಕಾರ ತನ್ನ ಅಸ್ತಿತ್ವ ಸ್ವಯಂ ನಾಶ ಆಗಲಿದೆ ಎಂದರು.
ಮಾಡ ಸಂಜೀವ ಗುರುಸ್ವಾಮಿ, ಉದಯ ಪವಳ ಗುರುಸ್ವಾಮಿ, ಆರ್‍ಎಸ್‍ಎಸ್ ಮುಖಂಡ ಗೋಪಾಲ್ ಚೆಟ್ಟಿಯಾರ್, ಪ್ರಮೀಳಾ ಸಿ.ನಾೈಕ್ ಉಪಸ್ಥಿತರಿದ್ದರು. ಹರಿಶ್ಚಂದ್ರ ಎಂ, ಪದ್ಮನಾಭ ಕಡಪ್ಪರ, ಸುರೇಶ್ ಶೆಟ್ಟಿ ಪರಂಕಿಲ, ಭರತ್ ಕನಿಲ, ಅವಿನಾಶ್ ಬಡಾಜೆ, ಯಸ್ಪಾಲ್ ಉದ್ಯಾವರ, ಜ್ಯೋತಿ ಪ್ರಕಾಶ್, ಗಿರಿಜಾ ಬಂಗೇರ ನೇತೃತ್ವ ನೀಡಿದರು. ಶ್ರೀ ಅಯ್ಯಪ್ಪ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ನವೀನ್‍ರಾಜ್ ವಂದಿಸಿದರು.






