ನಗರಗಳಲ್ಲಿ ಹಳೆ ಡೀಸೆಲ್ ಆಟೋರಿಕ್ಷಾಗಳಿಗೆ ನಿಷೇಧ
0
ಡಿಸೆಂಬರ್ 27, 2018
ತಿರುವನಂತಪುರ: ಹದಿನೈದು ವರ್ಷಗಳಿಗಿಂತಲೂ ಹಳೆಯದಾದ ಡೀಸೆಲ್ ಚಾಲಿತ ಆಟೋರಿಕ್ಷಾಗಳಿಗೆ ನಗರ ಪ್ರದೇಶಗಳಲ್ಲಿ ನಿಷೇಧ ಹೇರಲು ಸಾರಿಗೆ ಇಲಾಖೆಯು ನಿರ್ಧರಿಸಿದೆ. ಈ ಯೋಜನೆಯ ಮೊದಲ ಹಂತದಲ್ಲಿ ತಿರುವನಂತಪುರ, ಕೊಚ್ಚಿ ಮತ್ತು ಕಲ್ಲಿಕೋಟೆ ನಗರಗಳಲ್ಲಿ ಇಂತಹ ಡೀಸೆಲ್ ಚಾಲಿತ ಆಟೋರಿಕ್ಷಾಗಳ ಮೇಲೆ ನಿಷೇಧ ಹೇರಲು ಕ್ರಮ ಕೈಗೊಳ್ಳಲಾಗಿದೆ.
ಬಳಿಕ ಹಂತ ಹಂತವಾಗಿ ಇತರ ನಗರಗಳಿಗೂ ಯೋಜನೆಯನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ. 2020ರೊಳಗೆ ರಾಜ್ಯದ ಎಲ್ಲ ಆಟೋರಿಕ್ಷಾಗಳನ್ನು ಸಂಪೂರ್ಣವಾಗಿ ವಿದ್ಯುತ್ ಚಾಲಿತ ಆಟೋರಿಕ್ಷಾಗಳಾಗಿ ಮಾರ್ಪಡಿಸುವಂತೆ ಆದೇಶ ನೀಡಲಾಗಿದೆ. ಇಲ್ಲದಿದ್ದಲ್ಲಿ ಆಟೋರಿಕ್ಷಾಗಳನ್ನು ಡೀಸೆಲ್ ಬದಲು ಸಿಎನ್‍ಜಿ ಆಗಿ ಬದಲಾಯಿಸಬೇಕು. ಈ ಮೂಲಕ ವಾಯು ಮಾಲಿನ್ಯವನ್ನು ತಡೆಗಟ್ಟುವುದು ಸಾರಿಗೆ ಇಲಾಖೆಯ ಉದ್ದೇಶವಾಗಿದೆ.
ನಗರ ಪ್ರದೇಶಗಳಲ್ಲಿ ಇನ್ನು ಮುಂದೆ ಇ-ಆಟೋ (ವಿದ್ಯುತ್ ಚಾಲಿತ ಆಟೋರಿಕ್ಷಾ)ಗಳು ಅಥವಾ ಸಿಎನ್‍ಜಿ ಆಟೋರಿಕ್ಷಾಗಳಿಗೆ ಮಾತ್ರವೇ ಹೊಸ ಪರ್ಮಿಟ್ ನೀಡಲು ಸಾರಿಗೆ ಇಲಾಖೆಯು ತೀರ್ಮಾನಿಸಿದೆ. ಹತ್ತು ಇ-ಆಟೋ ನಿರ್ಮಾಣ ಸಂಸ್ಥೆಗಳ ಮೋಡೆಲ್‍ಗಳಿಗೆ ಮೋಟಾರ್ ವಾಹನ ಇಲಾಖೆಯು ಈಗಾಗಲೇ ಅಂಗೀಕಾರ ನೀಡಿದೆ.
ಸಾರ್ವಜನಿಕ ಸಂಸ್ಥೆಯಾದ ಕೇರಳ ಆಟೋಮೊಬೈಲ್‍ನ ಇ-ಆಟೋ ಶೀಘ್ರವೇ ಮಾರುಕಟ್ಟೆಗಿಳಿಯಲಿದೆ. ವಿದ್ಯುತ್ ಆಟೋರಿಕ್ಷಾಗಳಿಗೆ ರಾಜ್ಯ ಸರಕಾರವು 30,000ರೂ. ಗಳ ಸಬ್ಸಿಡಿಯನ್ನು ಕೂಡ ಘೋಷಿಸಿದೆ. ಇದರ ಹೊರತಾಗಿ ತೆರಿಗೆ ವಿನಾಯಿತಿ ನೀಡುವ ವಿಚಾರವು ಸರಕಾರದ ಪರಿಗಣನೆಯಲ್ಲಿದೆ.





