ಶಬರಿಮಲೆ : ಕೇಂದ್ರ ಸರಕಾರಕ್ಕೆ ದೂರು ನೀಡಲು ಎನ್‍ಎಸ್‍ಎಸ್ ನಿರ್ಧಾರ
0
ಡಿಸೆಂಬರ್ 27, 2018
ತಿರುವನಂತಪುರ: ಶಬರಿಮಲೆ ವಿಷಯದಲ್ಲಿ ಕೇರಳ ಸರಕಾರದ ನಿಲುವಿನಲ್ಲಿ ಯಾವುದೇ ರೀತಿಯ ಬದಲಾವಣೆ ಉಂಟಾಗದಿದ್ದಲ್ಲಿ ಕೇಂದ್ರ ಸರಕಾರವನ್ನು ಸಮೀಪಿಸಿ ಸಮಗ್ರ ದೂರು ನೀಡಲಾಗುವುದು ಎಂದು ನಾಯರ್ ಸರ್ವೀಸ್ ಸೊಸೈಟಿ (ಎನ್‍ಎಸ್‍ಎಸ್)ಯ ಪ್ರಧಾನ ಕಾರ್ಯದರ್ಶಿ ಸುಕುಮಾರನ್ ನಾಯರ್ ಸ್ಪಷ್ಟಪಡಿಸಿದ್ದಾರೆ.
ಶಬರಿಮಲೆಗೆ ಎಲ್ಲ ಪ್ರಾಯದ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ನೀಡಲಾದ ತೀರ್ಪನ್ನು ಮರು ಪರಿಶೀಲಿಸಬೇಕೆಂದು ಸುಪ್ರೀಂಕೋರ್ಟ್‍ಗೆ ಸಲ್ಲಿಸಲಾದ ಅರ್ಜಿ ಮೇಲಿನ ತೀರ್ಪು ನಮಗೆ ಅನುಕೂಲಕರವಾಗದಿದ್ದಲ್ಲಿ ಆ ಕುರಿತಾದ ಮುಂದಿನ ಕ್ರಮಕ್ಕಾಗಿ ಎನ್‍ಎಸ್‍ಎಸ್ ಕೇಂದ್ರ ಸರಕಾರವನ್ನು ಸಮೀಪಿಸಲಿದೆ.
ಶಬರಿಮಲೆಯ ಆಚಾರ ಅನುಷ್ಠಾನಗಳನ್ನು ಸಂರಕ್ಷಿಸುವ ಜೊತೆಗೆ ಇತರ ಎಲ್ಲ ದೇಗುಲಗಳಲ್ಲಿರುವ ಆಚಾರ ಪದ್ಧತಿಗಳನ್ನು ಸಂರಕ್ಷಿಸಬೇಕೆಂಬುದೇ ನಾಯರ್ ಸರ್ವೀಸ್ ಸೊಸೈಟಿಯ ನಿಲುವಾಗಿದೆ. ದೇವರ ಮೇಲಿನ ನಂಬುಗೆಯನ್ನು ಸಂರಕ್ಷಿಸುವುದೇ ಆಚಾರ ಅನುಷ್ಠಾನಗಳ ಉದ್ದೇಶವಾಗಿದೆ. ಈ ವಿಚಾರದಲ್ಲಿ ಎನ್‍ಎಸ್‍ಎಸ್ ಯಾವುದೇ ರೀತಿಯ ರಾಜಕೀಯ ಹಿತಾಸಕ್ತಿ ಹೊಂದಿಲ್ಲ. ಯಾವುದೇ ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡುವ ಸಂಘಟನೆ ನಮ್ಮದಲ್ಲ ಎಂದು ಸುಕುಮಾರನ್ ನಾಯರ್
ಸ್ಪಷ್ಟಪಡಿಸಿದ್ದಾರೆ.
ಶಬರಿಮಲೆಗೆ ಯುವತಿಯರು ಪ್ರವೇಶಿಸಲೆತ್ನಿಸಿದಾಗ ಅದು ಭಕ್ತರಲ್ಲಿ ತೀವ್ರ ಆತಂಕ ಸೃಷ್ಟಿಯಾಗುವಂತೆ ಮಾಡುತ್ತಿದೆ. ಭಕ್ತರ ಮನಸ್ಸನ್ನು ಅರಿತುಕೊಳ್ಳಲು ರಾಜ್ಯ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲವೆಂದು ಅವರು ಅಭಿಪ್ರಾಯಪಟ್ಟರು. ಶಬರಿಮಲೆಯ ವಿಷಯದಲ್ಲಿ ಕೇರಳ ಸರಕಾರವು ಕೇವಲ ಹಿಂದೂ ವಿರೋಧಿ ಧೋರಣೆಯನ್ನು ಅನುಸರಿಸಿದಂತೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ವಿವರವಾದ ಮಾಹಿತಿಯನ್ನು ನೀಡಲಾಗುವುದು ಎಂದು ಎನ್‍ಎಸ್‍ಎಸ್‍ನ ಪ್ರಧಾನ ಕಾರ್ಯದರ್ಶಿ ತಿರುವನಂತಪುರದಲ್ಲಿ ತಿಳಿಸಿದ್ದಾರೆ.





