ಮೆಕಾಲೆ ಶಿಕ್ಷಣದಿಂದ ಭಾರತೀಯರು ಹೊರಬೇಕು-ವಿನೋದ್ ಕುಮಾರ್ ಬಿದುರಿ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಅಭಿಪ್ರಾಯ ಹಂಚಿಕೆ
0
ಡಿಸೆಂಬರ್ 08, 2018
ಉಪ್ಪಳ : ಮನುಷ್ಯನಿಗೆ ತಾಯಿ ಮತ್ತು ಮಾತೃಭೂಮಿ ಶ್ರೇಷ್ಟ. ಅಂತೆಯೇ ಮಾತೃಭಾಷೆಗೂ ಗೌರವ ಸಲ್ಲಿಸುವುದು ಅಗತ್ಯ. ಅದನ್ನು ಬೆಳೆಸಿಕೊಳ್ಳಬೇಕು. ತಂದೆತಾಯಿಯನ್ನು ಪ್ರೀತಿಸದೇ ಇದ್ದಲ್ಲಿ ಲೋಕಜ್ಞಾನ ಸಿಗದು. ಭಾಷೆಯನ್ನು ಗೌರವಿಸದೇ ಹೋದಲ್ಲಿ ಸಂಸ್ಕøತಿಯ ಪರಿಚಯವೇ ಆತನಿಗಿರದು, ಆದ್ದರಿಂದ ಭಾಷೆ ಎನ್ನುವುದು ಮನುಷ್ಯನ ಗುಣಮಟ್ಟವನ್ನು ಅಳೆಯುವ ಸಾಧನ ಎಂದು ಕಟೀಲು ಶ್ರೀ ಕ್ಷೇತ್ರದ ಅನುವಂಶಿಕ ಅರ್ಚಕ ಅನಂತಪದ್ಮನಾಭ ಅಸ್ರಣ್ಣ ಅವರು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಗಾಯತ್ರೀ ಮಂಟಪದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ವಿಭಿನ್ನತೆ ಏಕತೆಯನ್ನು ಸಾಧಿಸುತ್ತದೆ. ಇದನ್ನು ಈ ಕಾರ್ಯಕ್ರಮ ತೋರಿಸಿಕೊಟ್ಟಿದೆ ಎಂದು ಅವರು ತಿಳಿಸಿದರು. ಕಾಸರಗೋಡು ಮೂರು ನಾಡಿನ ನಂಟು. ಕನ್ನಡ , ತುಳು ಹಾಗೂ ಮಲೆಯಾಳಿಗರ ನಾಡಾಗಿ ವಿಭಿನ್ನ ರೀತಿಯಲ್ಲಿ ಪ್ರಸಿದ್ಧಿ ಪಡೆದಿರುವುದು ಹೆಮ್ಮೆ. ಕನ್ನಡ ಭಾಷೆ ಸಾಹಿತ್ಯದ ಮೂಲಕ ಪ್ರೌಢಿಮ ಭಾಷೆಯೆನಿಸಿದೆ. ಸಂಸ್ಕøತಕ್ಕೆ ತುಲ್ಯವಾಗಿದೆ ಕನ್ನಡ ನುಡಿ. ಕನ್ನಡ ಭಾಷೆಯ ಕಲಿತು ಸಾಧಕರಾಗಿ ಉತ್ತುಂಗಕ್ಕೇರಿ ಕೊನೆಗೆ ಮೂಲವಸ್ತುವನ್ನು ಮರೆತು ಬಿಡುತ್ತಾರೆ. ಇಂತಹ ಸಾಹಿತಿಗಳು ಹೆಚ್ಚಾಗಿರುವುದು ದುರಂತ. ಹೀಗಾಗದಂತೆ ಸಾಹಿತಿಗಳು ಜಾಗರೂಕರಾಗಿರಬೇಕು. ಮೂಲ ಮರೆಯದೆ ಸಾಧಕರಾಗಿದ್ದರೆ ಮಾತ್ರ ಸಾಹಿತಿಗಳಿಗೆ ಧ್ಯೇಯ. ಸಾಹಿತಿಗಳು ದೈವ ದೇವರುಗಳ ಬಗ್ಗೆ ಟೀಕೆ ಮಾಡುವುದು ಹೆಚ್ಚುತ್ತಿದೆ. ಇದಾಗದಂತೆ ಸಾಹಿತಿಗಳು ಭಾಷೆಯ ಬಗ್ಗೆ ಹೆಚ್ಚಿನ ಅಧ್ಯಯನವನ್ನು ನಡೆಸುವುದು ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟರು.
ಗಡಿನಾಡ ಸಾಂಸ್ಕøತಿಕ ಸಾಹಿತ್ತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿಂದುಸ್ಥಾನ್ ಸ್ಕೌಟ್ ಮತ್ತು ಗೈಡ್ ಭಾರತದ ಸರಕಾರದ ಮುಖ್ಯ ಆಯುಕ್ತ ನ್ಯಾಯವಾದಿ.ವಿನೋದ್ ಕುಮಾರ್ ಬಿದುರಿ ನವದೆಹಲಿ ಅವರು ಮಾತನಾಡಿ, ವಸುದೈವ ಕುಟುಂಬಕಂ ಎನ್ನುವ ಸಂಸ್ಕøತಿ ಭಾರತೀಯರದ್ದು, ಇಡೀ ಪ್ರಪಂಚವೇ ಒಂದು ಮಾರುಕಟ್ಟೆ ಎನ್ನುವ ನೀತಿ ವಿದೇಶಿಗರದ್ದಾಗಿದೆ. ಈ ನೀತಿಯಿಂದ ಭಾರತೀಯತೆಗೆ ಧಕ್ಕೆಯಾಗುತ್ತಿದೆ. ಯುವ ಪೀಳಿಗೆಯು ಹಿರಿಯರನ್ನು ಗೌರವಿಸುವ, ಸಂಸ್ಕಾರಯುತ ಜೀವನಶೈಲಿಯನ್ನು ಮುನ್ನಡೆಸುವರಾಗಬೇಕೆಂದು ಹೇಳಿದರು. ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಯನ್ನು ಕೇಂದ್ರ ಸರಕಾರದ ಕಾರ್ಯದರ್ಶಿಗಳ ಮುಂದಿಡುವುದಾಗಿ ಅವರು ತಿಳಿಸಿದರು. ದೇಶದ ಹಲವು ರಾಜ್ಯ, ಪ್ರದೇಶಗಳಿಗೆ ತೆರಳಿರುವ ತಾನು ಕರಾವಳಿಯ ಭಾಗವಾದ ಮಂಗಳೂರು, ಮಂಜೇಶ್ವರ, ಕಾಸರಗೋಡಿನಲ್ಲಿ ಹೆಚ್ಚಿನ ಜನಸ್ನೇಹ, ಪ್ರೀತಿಯೊಂದಿಗೆ ದೈವತ್ವದ ದರ್ಶನವಾಗಿದೆ ಎಂದರು. ಮೆಕಾಲೆ ಶಿಕ್ಷಣದ ಮೂಲಕ ಭಾರತೀಯ ಶಿಕ್ಷಣ ಪದ್ಧತಿಗೆ ಧಕ್ಕಯುಂಟಾಗಿದೆ. ಇದು ಮುಂದಾದರೂ ಬದಲಾಗಬೇಕು ಎಂದು ತಿಳಿಸಿದರು.
ಗಡಿನಾಡು ಕನ್ನಡ ರಾಜ್ಯೋತ್ಸವ ಆಯ್ಕೆ ಸಮಿತಿ ಗೌರವ ಸಲಹೆಗಾರ ಪ್ರದೀಪ ಕಲ್ಕೂರ ಅವರು ಅಶಯ ಭಾಷಣವನ್ನು ಮಾಡಿದರು. ಅವರು ಮಾತನಾಡಿ ಆಂಗ್ಲ ಭಾಷೆ ವ್ಯಾಮೋಹ ಇರಲಿ. ಆದರೆ ಆಂಗ್ಲ ಸಂಸ್ಕøತಿಯದ್ದಲ್ಲ. ವಿಕೃತ ಚಿಂತನೆಗಳೊಂದಿಗೆ ಗೊಂದಲಗಳನ್ನುಂಟು ಮಾಡುವುದೇ ಆಧುನಿಕ ನಾಗರಿಕತೆಯ ಮೂಲೋದ್ದೇಶವಾಅಗುತ್ತಿದೆ ಎಂದರು. ಶಿಕ್ಷಣ ಪ್ರಸ್ತುತ ಬಡವಾಗುತ್ತಿದೆ, ಮಕ್ಕಳು ಜಡವಾಗುತ್ತಿದ್ದಾರೆ. ವ್ಯಾಪಾರೀಕರಣದ ಗುಂಗಿನಲ್ಲಿ ಇಂಗ್ಲೀಷೀಕರಣವೆಂಬ ಭ್ರಮೆಯಲ್ಲಿ ಬಾಳುವಂತಾಗಿದೆ. ಜನ ಮನಸ್ಸಿನ ಭಾವನೆಗಳು ಬತ್ತುತ್ತಿದೆ. ಜಡತ್ವದಿಂದ ದಿನದೂಡುವಂತಾಗಿದೆ. ಮಾತೃಸಂಸ್ಕøತಿ ಹೊರಟು ಹೋಗುತ್ತಿದೆ. ಇದರ ಅರಿವನ್ನುಂಟು ಮಾಡುವ ಪ್ರಯತ್ನವನ್ನು ರಾಜ್ಯೋತ್ಸವ ದಿನಾಚರಣೆಯ ಮೂಲಕ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭ ಸಾಹಿತಿ ಶಾ.ಎಂ.ಕೃಷ್ಣರಾಯ, ಹಿರಿಯ ಪತ್ರಕರ್ತ ಸಾಹಿತಿ ಮಲಾರ್ ಜಯರಾಮ ರೈ, ಹಿರಿಯ ದೈವ ಕಲಾವಿದ ಕುಟ್ಟಿ ಬಜಕೂಡ್ಲು, ಹರಿದಾಸ್ ಜಯಾನಂದ ಕುಮಾರ್ ಹೊಸದುರ್ಗ, ಸಮಾಜಸೇವಕ ಮುನಿಯಾಲು ಉದಯ ಶೆಟ್ಟಿ, ರಂಗಭೂಮಿ ಕಲಾವಿದ ತೋನ್ಸೆ ವಿಜಯ್‍ಕುಮಾರ್ ಶೆಟ್ಟಿ, ಕ್ರೀಡಾ ಅಂಕಣಕಾರ ಎಸ್.ಜಗದೀಶ್ಚಂದ್ರ ಅಂಚನ್, ಸಮಾಜಸೇವಕ ಮೊಹಮ್ಮದ್ ಆಸಿಫ್ ಸವಣೂರು, ಕೊಡವ ಜಾನಪದ ನೃತ್ಯ ಕಲಾವಿದೆ ಸುಳ್ಳಿಮಾಡ ಗೌರಿ ನಂಜಪ್ಪ ಮಡಿಕೇರಿ ಅವರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ, ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಅಂಧೇರಿ ಕನ್ನಡ ಸಂಘ ಹಾಗೂ ಸ್ನೇಹಾಲಯ ಮಂಜೇಶ್ವರ ಸಂಸ್ಥೆಯನ್ನು ಕನ್ನಡ ರಾಜ್ಯೋತ್ಸವ ಅಂಗವಾಗಿ ಗೌರವಿಸಲಾಯಿತು.
ಗಡಿನಾಡು ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸ್ಕೌಟ್ ಮತ್ತು ಗೈಡ್‍ನ ಕೇರಳ ರಾಜ್ಯ ಕಾರ್ಯದರ್ಶಿ ಅಝೀಝ್ ಅಬ್ದುಲ್ಲ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ, ಜನಾರ್ಧನ ಹಂದೆ, ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಾಹುಲ್ ಹಮೀದ್, ಉದ್ಯಮಿಗಳಾದ ಕೃಷ್ಣ ಶೆಟ್ಟಿ, ಯು.ಕೆ.ಯೂಸುಫ್ ಉಪ್ಪಳ, ಗಡಿನಾಡು ಜಾನಪದ ಪರಿಷತ್ತು ಅಧ್ಯಕ್ಷ ಅಬ್ದುಲ್ಲ ರಹಿಮಾನ್ ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದರು.
ಇದೇ ವೇಳೆ ರಿಶಬ್ ಶೆಟ್ಟಿ ನಿರ್ದೇಶನದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಲನಚಿತ್ರದಲ್ಲಿ ಅಭಿನಯಿಸಿದ ಕಾಸರಗೋಡಿನ ಕಲಾವಿದರನ್ನು ಗೌರವಿಸಲಾಯಿತು.
ಪುರುಷೋತ್ತಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಅಜೀಶಾ ಯಾದವ್ ಪ್ರಾರ್ಥಿಸಿದರು. ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿದರು. ವಿದ್ಯಾರ್ಥಿನಿ ಅಜಿಶ ಪ್ರಾರ್ಥನೆ ಹಾಡಿದರು, ಕರ್ನಾಟಕ ಜಾನಪದ ಅಕಾಡೆಮಿ, ಗಡಿನಾಡ ಘಟಕದ ಕೋಶಾಧಿಕಾರಿ ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಹರಿದಾಸ್ ಜಯಾನಂದ ಕುಮಾರ್ ಅವರ ಶಿಷ್ಯವರ್ಗದವರಿಂದ ದಾಸ ಸಂಕೀರ್ತನೆ ನಡೆಯಿತು. ಬಳಿಕ ಆರ್ಯಭಟ ಪ್ರಶಸ್ತಿ ಪುರಸ್ಕøತ ಜಗದೀಶ ಆಚಾರ್ಯ ಪುತ್ತೂರು ಇವರ ನೇತೃತ್ವದ ಕಲಾಸಿಂಧು ಬಳಗದವರಿಂದ ಸಂಗೀತ ಕಾರ್ಯಕ್ರಮ ಮನಸೂರೆಗೊಂಡಿತು. ಹಾಡುಗಾರಿಕೆಯಲ್ಲಿ ಗಣೇಶ್ ಕುಳಾಯಿ ಹಾಗೂ ವಿದ್ಯಾ ಸುವರ್ಣ , ಕೀ ಬೋರ್ಡ್‍ನಲ್ಲಿ ಪುರುಷೋತ್ತಮ, ತಬಲಾದಲ್ಲಿ ಅಶೋಕ್, ರಿದಂ ಪ್ಯಾಡ್‍ನಲ್ಲಿ ಪ್ರಭಾಕರ್, ವಯಲಿನ್‍ನಲ್ಲಿ ದೇವರಾಜ್ ಹೊಸಬೆಟ್ಟು ಸಹಕರಿಸಿದರು.ಬಳಿಕ ಬೊಳಿಕೆ ತಂಡದಿಂದ ಜಾನಪದ ನೃತ್ಯ, ಬಹುಭಾಷಾ ಕವಿಗೋಷ್ಠಿ ನಡೆಯಿತು.
ವೀಡಿಯೋ ನೋಡಿ...






