ಸ್ನೇಹ ಮತ್ತು ಕ್ಷಮೆ ಜೀವನದ ಮೂಲಮಂತ್ರವಾಗಿರಲಿ: ಅನಿತಾ ಯಾದವ್
0
ಡಿಸೆಂಬರ್ 26, 2018
ಬದಿಯಡ್ಕ:ಸ್ನೇಹ ಮತ್ತು ಕ್ಷಮಾಶೀಲತೆ ಮನುಷ್ಯನ ಜೀವನದ ಸೂತ್ರವಾದಾಗ ಬದುಕಿನಲ್ಲಿ ಸಂತೃಪ್ತಿಯ ಬೆಳಕು ಮೂಡುತ್ತದೆ. ಸ್ನೇಹ ಮತ್ತು ಕ್ಷಮೆಯ ಮೂಲಕ ಲೋಕವನ್ನು ಗೆಲ್ಲಬಹುದು. ಯೇಸು ಜನರಿಗೆ ಸ್ನೇಹದ ಪಾಠವನ್ನು ಕ್ಷಮೆಯ ಸಂದೇಶವನ್ನೂ ನೀಡಿದ್ದಾನೆ. ಆದರೆ ಮನುಷ್ಯನ ಮನಸ್ಸಿನಲ್ಲಿ ಆ ಭಾವನೆಗಳು ಗಟ್ಟಿಗೊಂಡಾಗ ಮಾತ್ರ ಸೌಹಾರ್ಧತೆ ಮೂಡುತ್ತದೆ. ಆದುದರಿಂದ ಎಲ್ಲಾ ಹಬ್ಬಗಳನ್ನೂ ಏಕತೆಯ ಮನೋಭಾವಗಳೊಂದಿಗೆ ಸ್ವೀಕರಿಸಬೇಕು ಎಂಬ ಭಾವನೆಯಿಂದ ಅಕಾಡೆಮಿಯು ಕ್ರಿಸ್ಮಸ್ ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಅನಿತಾ ಯಾದವ್ ಅಭಿಪ್ರಾಯಪಟ್ಟರು.
ಅವರು ಬದಿಯಡ್ಕ ಕಾಡಮನೆಯಲ್ಲಿರುವ ಪ್ರಶಾಂತ್ ಭವನ್ ಪುನರ್ವಸತಿ ಕೇಂದ್ರದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಮಂಗಳವಾರ ಆಯೋಜಿಸಿದ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಅಧ್ಯಕ್ಷ ಫ್ರಭಾಕರ ಕಲ್ಲೂರಾಯ ಬನದಗದ್ದೆ ಅವರು, ಜಾತಿ ಧರ್ಮಗಳ ಬೇಧವಿಲ್ಲದೆ ಮಾಡುವ ಹಬ್ಬಗಳ ಆಚರಣೆಯು ಸೌಹಾರ್ಧತೆಯನ್ನು ಬೆಳೆಸುತ್ತದೆ. ಯಾವುದೇ ಒಂದು ಮತೀಯರ ಆಚರಣೆಯನ್ನು ಒಂದಾಗಿ ಆಚರಿಸುವ ವಿಶಾಲ ಮನಸ್ಕತೆ ಸಮಾಜದಲ್ಲಿ ಒಗ್ಗಟ್ಟು ಮತ್ತು ಶಾಂತಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಅಕಾಡಮಿ ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್, ಶ್ಯಾಮಲಾ ಬದಿಯಡ್ಕ, ವಸಂತ ಬಾರಡ್ಕ, ಬಿಜು ಅಬ್ರಹಾಂ ಉಪಸ್ಥಿತರಿದ್ದು ಶುಭಹಾರೈಸಿದರು. ಪ್ರಶಾಂತ್ ಭವನದ ನಿರ್ದೇಶಕ ರವ.ಮ್ಯಾಥ್ಯೂಸ್ ಸಾಮ್ಯುವೆಲ್, ಎನ್.ಜೆ.ವಿಲ್ಸನ್, ಮಾಥ್ಯು ಜೋರ್ಜ್, ವಿಜಯ್ ಡಾನಿಯಲ್, ನವೋಮಿ ವಿಲ್ಸನ್, ಸೋನಿಯಾ ಸಾಜನ್ ಅಶ್ವಿನ್ ಯಾದವ್ ಉಪಸ್ಥಿತರಿದ್ದರು. ಪ್ರೈಸಿ, ಏಂಜಲ್ ಐರಿನ್ ಪ್ರಾರ್ಥನೆ ಹಾಡಿದರು. ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿ ನಿತಿನ್ ವಂದಿಸಿದರು.ಈ ಸಂದರ್ಭ ಕ್ರಿಸ್ಮಸ್ ಆಚರಣೆಗೆ ಬೇಕಾಗುವ ಆಹಾರಸಾಮಾಗ್ರಿಗಳನ್ನು ಆಶ್ರಮಕ್ಕೆ ನೀಡಲಾಯಿತು ಮತ್ತು ಕ್ರಿಸ್ಮಸ್ ಕೇಕ್ ಹಂಚಲಾಯಿತು.


