ಶಾಲಾ ಮಧ್ಯಾಹ್ನದೂಟ ಯೋಜನೆ ಖಾಸಗೀಕರಣಕ್ಕೆ ಯತ್ನ ಅಡುಗೆ ಕಾರ್ಮಿಕ ಸಂಘಟನೆಗಳಿಂದ ಹೋರಾಟದ ಎಚ್ಚರಿಕೆ
0
ಡಿಸೆಂಬರ್ 06, 2018
ಕಾಸರಗೋಡು: ಶಾಲಾ ಮಧ್ಯಾಹ್ನದೂಟ ಯೋಜನೆಯ ವಿತರಣಾ ಉಸ್ತುವಾರಿಯನ್ನು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅಥವಾ ಇತರ ಏಜೆನ್ಸಿಗಳಿಗೆ ನೀಡುವ ಕುರಿತು ಪರಿಶೀಲಿಸಲಾಗುವುದು ಎಂಬ ಕೇರಳ ಹೈಕೋರ್ಟ್‍ನ ನಿರ್ದೇಶನದ ಹಿಂದೆ ಶಾಲಾ ಮಧ್ಯಾಹ್ನದೂಟ ಯೋಜನೆಯನ್ನು ಖಾಸಗೀಕರಣ ಗೊಳಿಸಲಿರುವ ಕ್ರಮಗಳು ನಡೆಯುತ್ತಿವೆ ಎಂದು ಆತಂಕಗೊಂಡು ಅಡುಗೆ ಕಾರ್ಮಿಕ ಸಂಘಟನೆಗಳು ಪ್ರಬಲ ಹೋರಾಟಕ್ಕಿಳಿದಿವೆ.
ಶಾಲೆಗಳಿಂದ ಮಧ್ಯಾಹ್ನದೂಟ ಯೋಜನೆಯನ್ನು ಹೊರತುಪಡಿಸುವುದರೊಂದಿಗೆ ಹತ್ತು ಸಾವಿರದಷ್ಟು ಮಂದಿ ಅಡುಗೆ ಕಾರ್ಮಿಕರು ಉದ್ಯೋಗರಹಿತರಾಗುವರು. ಅಲ್ಲದೆ ಮಧ್ಯಾಹ್ನದೂಟದ ಗುಣಮಟ್ಟ ಕೂಡ ಕುಸಿಯಲಿದೆ ಎಂದು ಸಂಘಟನೆಗಳು ಹೇಳಿವೆ. ರಾಜ್ಯ ಹೈಕೋರ್ಟ್ ಇತ್ತೀಚೆಗೆ ನೀಡಿದ ಆದೇಶದ ವಿರುದ್ಧ ಕೇರಳ ಸರಕಾರವು ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬೇಕು ಎಂದು ಅಡುಗೆ ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ.
ಶಾಲಾ ಮಧ್ಯಾಹ್ನದೂಟ ವಿತರಣೆಯ ಹೊಣೆಗಾರಿಕೆಯನ್ನು ಕೂಡ ವಹಿಸಬೇಕಾಗಿರುವುದರಿಂದ ಮುಖ್ಯ ಶಿಕ್ಷಕರಿಗೆ ಶಾಲೆಯ ಅಕಾಡೆಮಿಕ್ ವಿಷಯಗಳಲ್ಲಿ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಹಾಗೂ ಅನವಶ್ಯಕ ಕೆಲಸಗಳಿಂದ ಮುಖ್ಯ ಶಿಕ್ಷಕರನ್ನು ಹೊರತುಪಡಿಸಬೇಕು ಎಂದು ಒತ್ತಾಯಿಸಿ ಕೇರಳ ಖಾಸಗಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಪ್ರದೀಪ್ ಸೇರಿದಂತೆ ಕೆಲವು ಮಂದಿ ಶಿಕ್ಷಕರು, ಸಂಘಟನೆಗಳು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಹೈಕೋರ್ಟ್‍ನ ಜಸ್ಟೀಸ್ ಮುಹಮ್ಮದ್ ಮುಷ್ತಾಕ್ ಸರಕಾರದೊಂದಿಗೆ ಬದಲಿ ವ್ಯವಸ್ಥೆಗಳ ಕುರಿತು ಆಲೋಚಿಸುವಂತೆ ತಿಳಿಸಿದ್ದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಮ್ಯೂನಿಟಿ ಅಡುಗೆ ಶಾಲೆ ವ್ಯವಸ್ಥೆಗೊಳಿಸುವುದರ ಕುರಿತು ತಪಾಸಣೆ ನಡೆಸಬೇಕು ಎಂದು ರಾಜ್ಯ ಉಚ್ಛ ನ್ಯಾಯಾಲಯವು ಇದೇ ಸಂದರ್ಭ ನಿರ್ದೇಶಿಸಿದೆ. ಶಾಲಾ ಮಧ್ಯಾಹ್ನದೂಟ ಯೋಜನೆಗೆ ಸಂಬಂ„ಸಿದ ಕೆಲಸದೊತ್ತಡವು ಮುಖ್ಯ ಶಿಕ್ಷಕರಿಗೆ ಶಾಲೆಯ ವಿಷಯಗಳನ್ನು ಗಮನಿಸುವಲ್ಲಿ ಬಾಧÀಕವಾಗಿ ಪರಿಣಮಿಸುತ್ತಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಇನ್ನೊಂದೆಡೆ ಹಲವು ಶಾಲೆಗಳಲ್ಲಿ ಮಧ್ಯಾಹ್ನದೂಟದ ಗುಣಮಟ್ಟ ಕಡಿಮೆಯಾಗುತ್ತಿರುವುದು, ಮಧ್ಯಾಹ್ನದೂಟ ಕುರಿತಾದ ವಿಷಯಗಳು ವಿವಾದಕ್ಕೆಡೆಯಾಗಿರುವುದನ್ನು ಪ್ರಶ್ನಿಸಿ ರಕ್ಷಕರು ಕೂಡ ಹೈಕೋರ್ಟ್‍ನ ಮೇಟ್ಟಿಲೇರಿದ್ದರು. ಆದರೆ ಕೆಲವು ಶಾಲೆಗಳಲ್ಲಿ ಉಂಟಾದ ಘಟನೆಗಳ ಹೆಸರಿನಲ್ಲಿ ಮಧ್ಯಾಹ್ನದೂಟ ಯೋಜನೆಯನ್ನು ಖಾಸಗೀಕರಿಸಲು ನಡೆಸುತ್ತಿರುವ ಕ್ರಮದ ಅಂಗವಾಗಿ ಇಂತಹ ಬೇಡಿಕೆಯೊಂದಿಗೆ ಉಚ್ಛ ನ್ಯಾಯಾಲಯವನ್ನು ಸಂಪರ್ಕಿಸಿರುವುದಾಗಿ ಕೇರಳ ಸ್ಕೂಲ್ ವರ್ಕರ್ಸ್ ಅಸೋಸಿಯೇಶನ್‍ನ ರಾಜ್ಯಾಧ್ಯಕ್ಷ ಸುಜೋಬಿ ಜೋಸ್ ಹೇಳಿದ್ದಾರೆ.
ಸಮುದಾಯ ಅಡುಗೆ ಕೋಣೆ ವ್ಯವಸ್ಥೆ ಜಾರಿಗೊಳಿಸಿದ ತಮಿಳುನಾಡಿನಲ್ಲಿ ಆಹಾರದ ಗುಣಮಟ್ಟ ಕುರಿತು ಹಲವಾರು ದೂರುಗಳು ಬಂದಿದ್ದು, ಇದನ್ನು ಉಲ್ಲೇಖಿಸಿ ಸಂಘಟನೆಯ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ. ರಕ್ಷಕ ಶಿಕ್ಷಕ ಸಂಘಟನೆಯ ಸಹಭಾಗಿತ್ವವಿರುವ ಸಮಿತಿಯು ಪ್ರಸ್ತುತ ಈ ಯೋಜನೆಯನ್ನು ಶಾಲಾ ಮಟ್ಟದಲ್ಲಿ ಜಾರಿಗೊಳಿಸುತ್ತಿದೆ. ಶಿಕ್ಷಣ ಇಲಾಖೆಯು ಸಮರ್ಪಕ ನಿರ್ದೇಶನಗಳನ್ನು ನೀಡಿ ಯೋಜನೆಯನ್ನು ರಕ್ಷಕ ಶಿಕ್ಷಕ ಸಂಘಕ್ಕೆ ಪ್ರಾತಿನಿಧ್ಯ ನೀಡುವ ರೂಪಕ್ಕೆ ಬದಲಾಯಿಸಿರುವುದರಿಂದ ಗುಣಮಟ್ಟದ ಪ್ರಯೋಜನವನ್ನು ವಿದ್ಯಾರ್ಥಿಗಳಿಗೆ ನೀಡಲು ಸಾಧ್ಯವಾಗಿರುವುದಾಗಿ ಸುಜೋಬಿ ಜೋಸ್ ತಿಳಿಸಿದರು.
ಕೇಂದ್ರ ಸರಕಾರದ ಧನಸಹಾಯ : ಎಂಟನೇ ತರಗತಿ ವರೆಗೆ ಕೇಂದ್ರ ಸರಕಾರದ ಧನಸಹಾಯದೊಂದಿಗೆ ಮಧ್ಯಾಹ್ನದೂಟ ವಿತರಣಾ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಕೇರಳದಲ್ಲಿ 10,348 ಮಂದಿ ಅಡುಗೆ ಕಾರ್ಮಿಕರು ದಿನಕೂಲಿಗಳಾಗಿ ಕಾರ್ಯವೆಸಗುತ್ತಿದ್ದಾರೆ. 400 - 500ರೂ. ಪ್ರತಿದಿನದ ವೇತನವಾಗಿದೆ. 1985ರಿಂದ ಸಣ್ಣ ಆದಾಯಕ್ಕೆ ದುಡಿಯುತ್ತಿದ್ದ ಅಡುಗೆ ಕಾರ್ಮಿಕರಿಗೆ ಹಂತ ಹಂತವಾಗಿ ವೇತನ ಹೆಚ್ಚಿಸಲಾಯಿತು. ಮುಖ್ಯೋಪಾಧ್ಯಾಯರ ಮೂಲಕ ವೇತನ ವಿತರಣೆ ನಡೆಯುತ್ತಿತ್ತು. ಬಳಿಕ ಕಾರ್ಮಿಕರ ನಿರಂತರ ಬೇಡಿಕೆಯ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದೆ ಅಡುಗೆ ಕಾರ್ಮಿಕರ ವೇತನವನ್ನು ಶಿಕ್ಷಣ ಇಲಾಖೆಯು ನೇರವಾಗಿ ಬ್ಯಾಂಕ್ ಮೂಲಕ ವಿತರಿಸುವ ವಿಧಾನವನ್ನು ಅಸ್ತಿತ್ವಕ್ಕೆ ತಂದಿದೆ.




