HEALTH TIPS

ಚೈಲ್ಡ್‍ಲೈನ್ ನೊಂದ ಮಕ್ಕಳ ಹೊಂಗಿರಣ-ಎಸ್.ಐ.ಸಿಬಿನ್ ಜೋಯ್

ಬದಿಯಡ್ಕ: ಬಾಲ್ಯದಲ್ಲಿ ಮಕ್ಕಳ ಮನೋವಿಕಾಸಕ್ಕೆ ಹೆತ್ತವರು ತುಂಬುವ ಉತ್ತಮ ಆಲೋಚನೆಗಳು ನಾಳೆಯ ಉನ್ನತ ಚಿಂತನೆಯುಳ್ಳ ಪ್ರಜೆಗಳನ್ನು ಸಮಾಜಕ್ಕೆ ನೀಡುತ್ತದೆ. ಸರಿಯಾದ ವಿದ್ಯಾಭ್ಯಾಸ ಹಾಗೂ ಜೀವನ ಮೌಲ್ಯಗಳನ್ನು ಕಲಿತು ಬೆಳೆಯುವ ಮಕ್ಕಳು ಸರಿದಾರಿಯಲ್ಲಿ ಮುನ್ನಡೆಯುತ್ತಾರೆ. ಆಧುನಿಕ ಸಮಾಜದಲ್ಲಿ ಸಾಮಾಜಿಕ ಪಿಡುಗುಗಳಿಗೆ, ಆಮಿಷಗಳಿಗೆ ಪುಟ್ಟ ಮನಸುಗಳು ಬಲಿಯಾಗದಂತೆ ಸಂರಕ್ಷಿಸಬೇಕಾದ ಅಗತ್ಯವಿದೆ ಎಂದು ಆದೂರು ಪೋಲೀಸ್ ಠಾಣಾಧಿಕಾರಿ ಸಿಬಿನ್ ಜೋಯಿ ಹೇಳಿದರು. ಭಾರತ ಸರಕಾರದ ಮಿನಿಸ್ಟ್ರಿ ಓಫ್ ವಿಮೆನ್ ಆಂಡ್ ಚೈಲ್ಡ್ ಡೆವಲಪ್‍ಮೆಂಟ್, ಜಿಲ್ಲಾ ಚೈಲ್ಡ್ ಲೈನ್ ಹಾಗೂ ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಮುಳ್ಳೇರಿಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಮುಳ್ಳೇರಿಯ ಶ್ರೀ ಗಣೇಶ ಕಲಾಮಂದಿರದಲ್ಲಿ ಏರ್ಪಡಿಸಲಾದ ಬಾಲೋತ್ಸವಂ-2018 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚೈಲ್ಡ್ ಲೈನ್ ನೊಂದ ಮಕ್ಕಳ ಬಾಳಲ್ಲಿ ಹೊಂಗಿರಣವನ್ನು ಬೀರುವ ಪ್ರಯತ್ನ ಮಾಡುತ್ತಿದೆ. ಮಕ್ಕಳ ಪಾಲಿನ ಸಂರಕ್ಷಕನಂತೆ ಮಕ್ಕಳ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡುತ್ತಿದೆ ಎಂದ ಅವರು ಬಾಲಕಾರ್ಮಿಕ ಸಮಸ್ಯೆಯಿಂದ ಮಕ್ಕಳನ್ನು ರಕ್ಷಿಸಿ ಸರಿಯಾದ ವಿದ್ಯಾಭ್ಯಾಸ ದೊರೆಯುವಂತೆ ಮಾಡುವುದು, ಲೈಂಗಿಕ ರಾಕೆಟ್ ಬಲೆಯಲ್ಲಿ ಸಿಲುಕದಂತೆ ಜಾಗೃತಿ ಮೂಡಿಸುವ ಹಾಗೂ ಭಿಕ್ಷಾಟನಾ ಮಾಫಿಯಾಗಳ ಹಿಡಿತದಿಂದ ಮಕ್ಕಳನ್ನು ದೂರ ಸರಿಸುವ ಉತ್ತಮವಾದ ಕೆಲಸಗಳನ್ನು ಚೈಲ್ಡ್ ಲೈನ್ ಮಾಡುತ್ತಿದೆ ಎಂದು ಅವರು ತಿಳಿಸಿದರು. ಚೈಲ್ಡ್ ಲೈನ್ ನಿರ್ದೇಶಕ ವಿಕಸನ ಅಬ್ದುಲ್ ರಹಮಾನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಂಗನಾಥ ಶೆಣೈ, ಪ್ರಾಂಶುಪಾಲ ವೇಣುಗೋಪಾಲ್, ಉದಯ ಕುಮಾರ್, ಚೈಲ್ಡ್ ಲೈನ್ ಅಧ್ಯಕ್ಷೆ ಆಯಿಷತ್ ಆಫೀಸ, ಚೈಲ್ಡ್ ಲೈನ್ ಸದಸ್ಯೆ ರಮ್ಯಾ ಎನ್ ಶುಭಾಶಂಸನೆಗೈದರು. ಮೆರವಣಿಗೆಯ ಮೆರುಗು ಕಾರ್ಯಕ್ರಮದ ಅಂಗವಾಗಿ ಆಕರ್ಷಕ ಮೆರವಣಿಗೆಯು ಸಿಂಗಾರಿ ಮೇಳ, ವಿವಿಧ ಕಲಾರೂಪಗಳು ಹಾಗೂ ಜಾಗೃತಿ ಸಂದೇಶದೊಂದಿಗೆ ಮುಳ್ಳೇರಿಯ ಪೇಟೆಯಲ್ಲಿ ಸಾಗಿ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಗೆ ಆಗಮಿಸಿತು. ಎನ್‍ಎಸ್‍ಎಸ್ ಘಟಕ ಮತ್ತು ಸ್ಕೌಟ್-ಗೈಡ್ ಜಿವಿಎಚ್‍ಎಸ್‍ಎಸ್ ಮುಳ್ಳೇರಿಯ, ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಮುಳ್ಳೇರಿಯ ಹಾಗೂ ಚೈಲ್ಡ್ ಲೈನ್ ಪದಾಧಿಕಾರಿಗಳು ಹಾಗೂ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries