ಪೇರಾಲ್‍ನಲ್ಲಿ ಪಿ.ಬಿ.ಅಬ್ದುಲ್ ರಝಾಕ್ ಸಂಸ್ಮರಣೆ ಪಿ.ಬಿ.ಅಬ್ದುಲ್ ರಝಾಕ್ ಅಪೂರ್ವ ಜನಪ್ರತಿನಿಧಿ : ಪುಂಡರೀಕಾಕ್ಷ
0
ಡಿಸೆಂಬರ್ 11, 2018
ಕುಂಬಳೆ: ಜನರ ಕ್ಷೇಮಕ್ಕಾಗಿ ಮಾತ್ರ ಜನಪ್ರತಿನಿಧಿಯಾಗಿ ನಿರಂತರ ಕಾರ್ಯವೆಸಗಿದ ಒಬ್ಬ ಅಪೂರ್ವ ವ್ಯಕ್ತಿ ದಿ.ಪಿ.ಬಿ.ಅಬ್ದುಲ್ ರಝಾಕ್ ಎಂದು ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಹೇಳಿದರು.
ಅವರು ಪೇರಾಲು ಸರಕಾರಿ ಕಿರಿಯ ಬುನಾದಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಶಾಸಕರಾಗಿದ್ದು ಅಗಲಿದ ದಿ.ಪಿ.ಬಿ.ಅಬ್ದುಲ್ ರಝಾಕ್ ಅವರ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಮಗೆ ಲಭಿಸುತ್ತಿದ್ದ ಶಾಸಕರ ಗೌರವಧನವನ್ನೂ ತನ್ನ ವಿಧಾನಸಭಾ ಕ್ಷೇತ್ರದ ಜನರ ಕ್ಷೇಮ ಕಾರ್ಯಗಳಿಗಾಗಿ ವಿನಿಯೋಗಿಸಿದ್ದ ಅವರು ತಮ್ಮ ಕೊನೆಯ ದಿನದ ವರೆಗೆ ಜಾತಿಮತ ಭೇದವಿಲ್ಲದೆ ತಮ್ಮ ಅನಾರೋಗ್ಯವನ್ನೂ ಕಡೆಗಣಿಸಿ ಕ್ರಿಯಾಶೀಲರಾಗಿದ್ದರು ಎನ್ನುವುದರ ಜೊತೆಗೆ ಮಾಜಿ ಶಾಸಕರೊಂದಿಗಿನ ತಮ್ಮ ಉತ್ತಮ ಬಾಂಧವ್ಯವನ್ನು ನೆನಪಿಸಿಕೊಂಡರು.
ಕುಂಬಳೆ ಗ್ರಾಮ ಪಂಚಾಯತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರಿಫ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷರುಗಳಾದ ಚಂದ್ರಿಕಾ, ಮೊಹಮ್ಮದ್, ಪಿ.ಎಸ್.ಮೊಹಮ್ಮದ್ ಹಾಜಿ, ಎಂ.ಎ.ಮೊಹಮ್ಮದ್, ಕಾಸರಗೋಡು ಸರಕಾರಿ ಕಾಲೇಜಿನ ಉಪನ್ಯಾಸಕ ರಿಯಾಸ್, ಮೂಸಾ ನಿಸಾಮಿ ಮೊದಲಾದವರು ಶಾಸಕರು ಪೇರಾಲಿನ ಜನತೆಗಾಗಿ ಮತ್ತು ಶಾಲೆಗಾಗಿ ಮಾಡಿದ ಮಹದುಪಕಾರವನ್ನು ಸ್ಮರಿಸುತ್ತಾ ಮಾತನಾಡಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಬಿ.ಎ. ಪೇರಾಲು ಸ್ವಾಗತಿಸಿ, ಹರಿಪ್ರಿಯ ಟೀಚರ್ ವಂದಿಸಿದರು.





