ಉಪ್ಪಳ: ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ 70ನೇ ವರ್ಷದ ಗಣರಾಜ್ಯೋತ್ಸವವನ್ನು ನಮ್ಮ ಸಂವಿಧಾನ, ರಾಷ್ಟ್ರಭಕ್ತಿ ಇತ್ಯಾದಿ ವಿಷಯಗಳ ಕುರಿತಂತೆ ಶಾಲಾ ವಿದ್ಯಾರ್ಥಿಗಳಿಗೆ ಭಾಷಣ, ದೇಶಭಕ್ತಿಗೀತೆ, ಚಿತ್ರರಚನೆ, ರಸಪ್ರಶ್ನೆ ಇತ್ಯಾದಿಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಪ್ರಜಾತಂತ್ರದ ಜಾಗೃತಿ ಮೂಡಿಸುವ ಪ್ರಯತ್ನದೊಂದಿಗೆ ಆಚರಿಸಲಾಯಿತು.
ಬೆಳಿಗ್ಗೆ ಶಾಲಾ ಆಡಳಿತ ಸಮಿತಿ ಅಧ್ಯಕ್ಷ ರಾಮಚಂದ್ರ ಚೆರುಗೋಳಿ ಧ್ವಜಾರೋಹಣಗೈದು, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಮ್ಮ ಹಕ್ಕು ಹಾಗೂ ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು. ಶಾಲಾ ಆಡಳಿತಾಧಿಕಾರಿ ಕಮಲಾಕ್ಷ ಎಂ ಭಾರತದ ಸಂವಿಧಾನ ರಚನೆಯ ಘಟನಾವಳಿಗಳನ್ನು ವಿವರಿಸಿದರು. ಶಾಲಾ ಮಾತೃಕ್ಷೇಮಸಮಿತಿ ಅಧ್ಯಕ್ಷೆ ಆಶಾ ಜಯಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕಿ ವಾರಿಜಾ ಅವರು ದೇಶಭಕ್ತಿಯ ಪ್ರಾಧಾನ್ಯತೆಯನ್ನು ಹಾಡಿನ ಮೂಲಕ ವ್ಯಕ್ತಪಡಿಸಿ, ಹಿತನುಡಿಗಳನ್ನಾಡಿದರು.
ವಿದ್ಯಾರ್ಥಿಗಳ ನಿತ್ಯಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಿಕ್ಷಕ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಶಿಕ್ಷಕಿ ಮಮತಾ ವಂದಿಸಿದರು. ಶಿಕ್ಷಕಿ ರೇಶ್ಮಾ ಎಸ್. ನಿರೂಪಿಸಿದರು.


