ಕುಂಬಳೆ ಹೋಲಿ ಫ್ಯಾಮಿಲಿ ಶಾಲಾ ವಾರ್ಷಿಕೋತ್ಸವ
0
ಫೆಬ್ರವರಿ 18, 2019
ಕುಂಬಳೆ: ಕುಂಬಳೆ ಹೋಲಿ ಫ್ಯಾಮಿಲಿ ಶಾಲಾ ವಾರ್ಷಿಕೋತ್ಸವ ಫೆ.21 ರಂದು ಜರಗಲಿದೆ.
ಸುದೀರ್ಘ ಅವಧಿಯ ಮುಖ್ಯೋಪಾಧ್ಯಾಯಿನಿಯಾಗಿ ಸೇವೆಗೈದ ವಂದನೀಯ ಸಿ.ಹಿಲ್ಡಾ ಕ್ರಾಸ್ತಾ ಹಾಗು ಶಿಕ್ಷಕಿ ಮೇರಿ ಕ್ರಾಸ್ತಾ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಗುವುದು. ಅಲ್ಲದೆ ವಿಶೇಷ ಸಾಧನೆಗೈದ ಪೂರ್ವ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು.
ಸಿ.ಹಿಲ್ಡಾ ಕ್ರಾಸ್ತಾ ಅವರು ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ, ಕಾರುಣ್ಯ ಯೋಜನೆ, ಹೈಟೆಕ್ ವ್ಯವಸ್ಥೆ, ಆಟದ ಮೈದಾನದ ದುರಸ್ತೀಕರಣ, ಸುಸಜ್ಜಿತ ಪಾಕ ಶಾಲೆ ಇವೇ ಮೊದಲಾದ ಕಾರ್ಯಗಳನ್ನು ನಿರ್ವಹಿಸಿ ಶಾಲೆಯ ಪ್ರಗತಿಗಾಗಿ ದುಡಿದಿರುವರು. ಶಿಕ್ಷಕಿ ಮೇರಿ ಕ್ರಾಸ್ತಾ ಅವರು ಪಾಠ, ಪಾಠೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದವರು. ಇವರು ಒಂದನೇ ತರಗತಿಯ ಅಮ್ಮ ಟೀಚರ್ ಎಂದೇ ಹೆಸರು ಗಳಿಸಿರುವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಬಂಧಗಳನ್ನು ಮಂಡಿಸಿದ ಡಾ. ವಾಣಿಶ್ರೀ ಬಿ., ಜಪಾನಿನಲ್ಲಿ ಜರಗಿದ ಅಂತಾರಾಷ್ಟ್ರೀಯ ಪ್ರಬಂಧ ಮಂಡನೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ಸ್ಪರ್ಧಿ ನಿತೀಶ್ ಕುಂಬಳೆ, ಚಾರ್ಟೆಡ್ ಅಕೌಂಟೆಂಟ್‍ಗೆ ತತ್ಸಮಾನವಾದ ಐ.ಸಿ.ಡಬ್ಲ್ಯೂ ತರಬೇತಿಯ ನಾಲ್ಕೂ ಹಂತದ ಪರೀಕ್ಷೆಗಳನ್ನು ಮೊದಲ ಪ್ರಯತ್ನದಲ್ಲಿಯೇ ಪೂರ್ಣಗೊಳಿಸಿದ ವಿಘ್ನೇಶ್, ದಿ ಎಲಿಫಂಟ್ ಕಂಪೆನಿ ಎಂಬ ಆಂಗ್ಲ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ ಬಂಡೂಲ ಎಂಬ ಕೃತಿಯ ಲೇಖಕಿ ರಾಜಶ್ರೀ ಕುಳಮರ್ವ, ಮನಶಾಸ್ತ್ರ ಅಧ್ಯಯನದಲ್ಲಿ ಎಂ.ಡಿ. ಪದವಿ ಪಡೆದ ಕಾವ್ಯಶ್ರೀ ಕುಳಮರ್ವ, ಎಂ.ಎ. ಕನ್ನಡ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಪಡೆದ ಸುಶ್ಮಿತ, ಇದೀಗಲೇ ಅಂತಾರಾಷ್ಟ್ರೀಯ ಕರಾಟೆ ಪಟುವಾಗಿ ಮಿಂಚುತ್ತಿರುವ ಹತ್ತನೇ ತರಗತಿ ವಿದ್ಯಾರ್ಥಿನಿ ಶೈನಿದಾಸ್ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸಮ್ಮಾನಿಸಲಾಗುವುದು.

