ಶಿರಸಿಯಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ಅರ್ಥಾಂತರಂಗ-12 ಯಶಸ್ವಿ ಕಾರ್ಯಕ್ರಮ
0
ಮಾರ್ಚ್ 15, 2019
ಕುಂಬಳೆ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು ನಡೆಸಿಕೊಂಡು ಬರುತ್ತಿರುವ ಯಕ್ಷಗಾನ ಸರಣಿ ಕಾರ್ಯಕ್ರಮಗಳ ಮುಂದುವರಿಕೆಯಾಗಿ ಅರ್ಥಾಂತರಂಗ 12 ಕಾರ್ಯಕ್ರಮ ಇತ್ತೀಚೆಗೆ ಪ್ರಬೋಧ ಯಕ್ಷಬಳಗ ಶಿರಸಿ ಸಂಸ್ಥೆಯ ಸಹಯೋಗದೊಂದಿಗೆ ಹಾಗೂ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು ಇದರ ಸಹಕಾರದೊಂದಿಗೆ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಯೋಗಮಂದಿರ ಶಿರಸಿಯಲ್ಲಿ ಯಶಸ್ವಿಯಾಗಿ ಜರಗಿತು.
ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ನಾಗರಾಜ ಜೋಷಿ ಸೋಂದಾ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ತಾಳಮದ್ದಳೆ ಹಾಗೂ ಯಕ್ಷಗಾನದಿಂದ ವ್ಯಕ್ತಿಯ ಬದುಕಿನ ಉನ್ನತಿಗೂ ನೆರವಾಗುತ್ತದೆ. ನಮ್ಮ ಕಲೆಗಳು ಸಂಸ್ಕøತಿಯ ಜೀವಾಳ. ಕಲೆಯನ್ನು ಆಸ್ವಾದಿಸುತ್ತಲೇ ಅನೇಕರು ಬಹು ಸಾಧನೆಯನ್ನು ಮಾಡಿದವರು ಇದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದವರು ಹಮ್ಮಿಕೊಂಡಿರುವ ಅರ್ಥಾಂತರಂಗ ಸರಣಿಕಾರ್ಯಕ್ರಮ ಅರ್ಥವತ್ತಾಗಿದೆ. ಅರ್ಥಗಾರಿಕೆಯ ಒಳತೋಟಿಗಳನ್ನು ಕಲಿಯಲು ಇದು ಮಾರ್ಗದರ್ಶಿ ಎಂದು ಅಭಿಪ್ರಾಯಪಟ್ಟರು.
ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ನೆಬ್ಬೂರು ಭಾಗವತ, ಶಿರಸಿ ಯೋಗ ಮಂದಿರದ ಮಾಜಿ ಅಧ್ಯಕ್ಷ ಡಿ.ಜಿ.ಹೆಗಡೆ ಭೈರಿ, ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು, ರಾಧಾಕೃಷ್ಣ ಕಲ್ಚಾರ್, ಹರೀಶ ಬಳಂತಿಮೊಗರು ಉಪಸ್ಥಿತರಿದ್ದರು. ಮಂಜುನಾಥ ಗೊರೆಮನೆ ಪ್ರಾಸ್ಥಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ರೀನಿವಾಸ ಮತ್ತಿಘಟ್ಟ ನಿರ್ವಹಿಸಿದರು.
ಖ್ಯಾತ ತಾಳಮದ್ದಳೆ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರ ನಿರ್ದೇಶನ ಹಾಗೂ ನಿರ್ವಹಣೆಯಲ್ಲಿ ಜರಗಿದ ಅರ್ಥಾಂತರಂಗದಲ್ಲಿ ಆಶು-ಸಂಭಾಷಣೆಯ ಆಯಾಮಗಳು, ಅನಿಸಿಕೆ, ಅವಲೋಕನ, ಸಂವಾದ ವಿಷಯವನ್ನೊಳಗೊಂಡ ಸಂವಾದಗಳು ಪ್ರಸ್ತುತಿಗೊಂಡಿತು. ಕೆ.ಗೋವಿಂದ ಭಟ್ ಅವರಿಂದ ಹಂಸಧ್ವಜನ ಪೀಠಿಕೆ ಹಾಗೂ ಸ್ವಗತ, ಈಶ್ವರಪ್ರಸಾದ ಧರ್ಮಸ್ಥಳ ಹಾಗೂ ಗೋವಿಂದ ಭಟ್ಟರಿಂದ ಸುಧನ್ವಾರ್ಜುನ ಸಂಭಾಷಣೆ, ರಾಧಾಕೃಷ್ಣ ಕಲ್ಚಾರ್ ಹಾಗೂ ಹರೀಶ ಬಳಂತಿಮೊಗರು ಅವರಿಂದ ಕೃಷ್ಣ ದೂರ್ವಾಸ ಸಂಭಾಷಣೆ, ರಾಮ ಭರತ ಸಂಭಾಷಣೆ ಮಂಡಿಸಲಾಯಿತು. ಹಿಮ್ಮೇಳದಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಅಡೂರು ಲಕ್ಷ್ಮೀನಾರಾಯಣ, ಚಂದ್ರ ಶೇಖರ ಸರಪಾಡಿ ಭಾಗವಹಿಸಿದ್ದರು.




