HEALTH TIPS

ಸಮರಸ ಈ ಹೊತ್ತಿಗೆ-ಹೊಸ ಹೊತ್ತಗೆ-2

ಸಮರಸ ಸುದ್ದಿ ಕಳೆದ ಭಾನುವಾರದಿಂದ ಆರಂಭಿಸಿರುವ ಪುಸ್ತಕ ಸಮೀಕ್ಷೆ ಈ ಹೊತ್ತಿಗೆ-ಹೊಸ ಹೊತ್ತಗೆ ಅಂಕಣ ಬರಹದ ಎರಡನೇ ಭಾಗದಲ್ಲಿ ಇಂದು ಪುಸ್ತಕ: ನಾನು ಸನ್ಯಾಸಿಯಾಗಲು ಹೊರಟಿದ್ದೆ ಲೇಖಕರು: ಮಂಜುನಾಥ ಕಾಮತ್ *ಸನ್ಯಾಸಿಯಾಗಲು ಹೊರಟವನನ್ನು ಕಂಡಾಗ?... ಲೇಖಕಿ_ಚೇತನಾ ಕುಂಬಳೆ ಕೆಲವು ತಿಂಗಳ ಹಿಂದೆ ಗೆಳೆಯನ ವಾಟ್ಸಪ್ ಸ್ಟೇಟಸ್ ನಲ್ಲಿ ಹಾಕಿದ್ದ 'ದಾರಿ ತಪ್ಪಿಸು ದೇವರೇ ' ಪುಸ್ತಕ ನನ್ನ ಗಮನ ಸೆಳೆಯಿತು. ಲೇಖಕರು ಮಂಜುನಾಥ್ ಕಾಮತ್. ಹೊಸ ಪರಿಚಯ. ಅಷ್ಟರ ವರೆಗೆ ಈ ಹೆಸರು ಕೇಳಿರಲಿಲ್ಲ. ಆ ಶೀರ್ಷಿಕೆಯಂತು ತುಂಬ ಕಾಡಿತು. ಒಮ್ಮೆ ಓದಬೇಕೆಂಬ ಕುತೂಹಲ. ಕೂಡಲೇ ಮಂಗಳೂರಿನ ನವಕರ್ನಾಟಕಕ್ಕೆ ಹೋಗಿ ಪುಸ್ತಕ ತಗೊಂಡು ಬಂದು ಓದಿದೆ. ಅದೊಂದು ನೆನಪಿನ ಬುತ್ತಿ. ಅನುಭವ ಕಥನ. ಅವರ ಸರಳವಾದ ಭಾಷಾ ಶೈಲಿ ತುಂಬ ಇಷ್ಟವಾಯಿತು. ಒಂದೊಂದು ಅನುಭವಗಳನ್ನು ಬಿಚ್ಚಿಡುತ್ತಿದ್ದಂತೆ ಅವರ ಜೊತೆಗಿದ್ದ ಕಾಳಿಂಗ(ಬೈಕ್)ನೂ ಇಷ್ಟವಾದ. ಅದರ ನಂತರ ಇತ್ತೀಚೆಗೆ ಅವರ ಇನ್ನೊಂದು ಪುಸ್ತಕ 'ನಾನು ಸನ್ಯಾಸಿಯಾಗಲು ಹೊರಟಿದ್ದೆ' ಬಿಡುಗಡೆಗೊಂಡಿತು. ತಕ್ಷಣ ಮಂಗಳೂರಿಗೆ ಹೋದಾಗ ಎಲ್ಲೂ ಈ ಪುಸ್ತಕ ಸಿಗ್ಲಿಲ್ಲ. ಬಿಡುಗಡೆಯಾದ ಒಂದೇ ವಾರದಲ್ಲಿ ಪ್ರತಿಗಳು ಖಾಲಿಯಾಗಿತ್ತು. ಪುಸ್ತಕದ ಬೇಡಿಕೆಯನ್ನು ಕಂಡು ನಿಜಕ್ಕೂ ವಿಸ್ಮಯಗೊಂಡೆ. ಕೊನೆಗೆ ಮಂಜುನಾಥ ಸರ್ ನ್ನೆ ಸಂಪರ್ಕಿಸಿ ಪುಸ್ತಕ ತರಿಸಿ ಓದಿ ಮುಗಿಸಿದೆ. ಅದೊಂದು ವಿಶಿಷ್ಟ ಕಾರ್ಯಕ್ರಮವಾಗಿತ್ತು.ಅದು ಉಡುಪಿಯ ಸುವರ್ಣ ನದಿ, ಆ ನದಿಯ ಡಾಮಲ್ಲಿ ನೂರಾರು ಬೆಳಕು ಚೆಲ್ಲುವ ಹಣತೆಗಳು, ಹುಣ್ಣಿಮೆಯ ರಾತ್ರಿ, ನಾದ ಮಣಿನಾಲ್ಕೂರು ಅವರ ಮನ ಸೆಳೆವ 'ಕತ್ತಲ ಹಾಡುಗಳು', ಹರಿವ ನದಿಗೆ ಮಂಗಳಮುಖಿಯರಿಂದ ಗಂಗಾರತಿಯ ನಡುವೆ, ಮಂಜುನಾಥ ಕಾಮತ್ ಅವರ 'ನಾನು ಸನ್ಯಾಸಿಯಾಗಲು ಹೊರಟಿದ್ದೆ' ಪುಸ್ತಕ ಲೋಕಾರ್ಪಣೆಗೊಂಡಿತು. ನಿಜಕ್ಕೂ ಇದೊಂದು ವಿಭಿನ್ನ ಕಾರ್ಯಕ್ರಮ... ಅವರು ಎಂ.ಜಿ.ಎಂ. ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರು, ಅವರ ಹವ್ಯಾಸವೇ ಅದು ತಿರುಗಾಡೋದು,ಬರೆಯೋದು.ಆದರೆ ಅದಕ್ಕೊಂದು ನಿರ್ಧಿಷ್ಟ ಲಕ್ಷ್ಯವಿದೆ. ಅವರದ್ದು ಹೆಚ್ಚಾಗಿ ಒಂಟಿ ಪಯಣ. ಒಂದು ಕಡೆ ಹೋಗ್ಬೇಕನಿಸಿದ ಕೂಡಲೇ ಹೊರಟು ಬಿಡುವವರು.. ಅದಕ್ಕೆ ಅವರಿಗೆ ಪೂರ್ವ ಯೋಜನೆಗಳ ಅಗತ್ಯವೇ ಇರುವುದಿಲ್ಲ... ಅದೆಷ್ಟೋ ದಿನಗಳಿಂದ, ತಿಂಗಳುಗಳಿಂದ ಹಾಕಿದ ಯೋಜನೆಗಳು ಕಾರಣಾಂತರಗಳಿಂದ ಕೆಲವೊಮ್ಮೆ ನಡೆಯದೇ ಉಳಿಯುತ್ತವೆ. ಹಾಗಿರುವಾಗ ಪೂರ್ವ ಯೋಜನೆಗಳಿಲ್ಲದ ಅದೆಷ್ಟೋ ಪ್ರಯಾಣಗಳು ಯಶಸ್ವಿಯಾಗಿವೆ, ಭಿನ್ನ ಅನುಭವಗಳನ್ನು ನೀಡಿವೆ. ಅಂಥ ಪ್ರಯಾಣದ ಅನುಭವಗಳನ್ನು ಲೇಖಕರು ಸ್ವಾರಸ್ಯವಾಗಿ ಈ ಪುಸ್ತಕದಲ್ಲಿ ತೆರೆದಿಡುತ್ತಾರೆ... ಅವರ ಬರಹ ಅದೆಷ್ಟು ಸೆಳೆಯುತ್ತವೆಯೆಂದರೆ ಅವರ ಪ್ರಯಾಣದುದ್ದಕ್ಕೂ ನಾವೂ ಅವರೊಂದೀಗಿದ್ದೇವೇನೋ ಅನಿಸಿಬಿಡುತ್ತದೆ. ಅದೆಷ್ಟೊ ದೂರ ಕಾಳಿಂಗನೊಂದಿಗೆ ಹೋದದ್ದೂ ಇದೆ. ಅವನನ್ನು ಬಿಟ್ಟು ಒಂಟಿಯಾಗಿ ತಿರುಗಿದ್ದೂ ಇದೆ. ಎಷ್ಟೊ ದೂರ ಪಾದಯಾತ್ರೆ ಮಾಡಿದ ಅನುಭವಗಳೂ ಇವೆ. ಹಾಗೆ ಈ ಸಲ ಸನ್ಯಾಸಿಯಾಗಲು ಹೊರಟ ನಮ್ಮ ಲೇಖಕರು ಉತ್ತರ ಭಾರತದ ಪ್ರವಾಸ ಮಾಡಿ ಬಂದ ಅನುಭವಗಳನ್ನು ನಮ್ಮ ಮುಂದೆ ಬಿಚ್ಚುತ್ತಾರೆ. ಇಲ್ಲಿ ಇಂದಿರಾ ನಗರದ ಏಳನೇ ಅಡ್ಡ ರಸ್ತೆಯಲ್ಲಿ ನಡೆದ ಒಂದು ಘಟನೆಯ ನೆನಪಿನೊಂದಿಗೆ ಮೊದಲ ಅಧ್ಯಾಯ ಆರಂಭವಾಗುತ್ತದೆ. ಬೆಂಗಳೂರಿನಿಂದ ಬಂದ ಗೆಳೆಯರೊಂದಿಗೆ ಮೂಡಬಿದಿರೆಯ ಸಾವಿರ ಕಂಬದ ಬಸದಿ, ಮಾಳದ ಜಲಪಾತ, ಪರ್ಪೆಲ್ ಗುಹೆ, ಹೀಗೆ ವಿವಿಧ ಕಡೆ ತಿರುಗಾಡಿದ ಅನುಭವಗಳನ್ನು ರಸವತ್ತಾಗಿ ವಿವರಿಸುತ್ತಾರೆ. ಅದರ ಮಧ್ಯೆ ಹುಡುಗಿಯೊಬ್ಬಳೊಂದಿಗಿನ ಒಡನಾಟ, ಹಕ್ಕಿಗಳ ರೆಕ್ಕೆಗಳನ್ನು, ಚಿಪ್ಪುಗಳನ್ನು ಆಯ್ದು ಕೊಟ್ಟು ಅವಳ ತುಟಿಯಲ್ಲಿ ಅರಳುವ ನಗುವನ್ನು ಕಾಣಲು ಹಂಬಲಿಸುವುದು, ಮೋಡಗಳನ್ನು ನೋಡಿ ಮೈಮರೆಯುವುದು, ಕೊನೆಗೆ ಆ ಹುಡುಗಿ ಸಿಗರೇಟು ಸೇದುವ ಕಾರಣಕ್ಕೆ ಆಕೆಯನ್ನು ದೂರ ಮಾಡಿದ ಪ್ರಸಂಗವಿದೆ. ಅನಿರೀಕ್ಷಿತವಾಗಿ ಬಹುಕಾಲದ ಜೋಗ ನೋಡಬೇಕೆಂಬ ಆಸೆಯನ್ನು ನೆರವೇರಿಸಿಕೊಳ್ಳುತ್ತಾರೆ, ಜೋಗದ ಸೌಂದರ್ಯದಲ್ಲಿ ಮೈಮರೆಯುತ್ತಾರೆ, ಜೋಗದ ಗುಂಡಿಗಿಳಿಯುತ್ತಾರೆ, ಅದರ ತುದಿಗೆ ಹೋಗುತ್ತಾರೆ, ಅಲ್ಲಿ ಸಾಯಲು ಬಂದ ಹುಡಗನನ್ನು ಬದುಕಿಗೆ ಕೈಹಿಡಿದು ಕರೆತರುತ್ತಾರೆ. ಅಲ್ಲಿಂದ, ಅವರು ಉತ್ತರ ಭಾರತದ ಪ್ರವಾಸ ಮಾಡುತ್ತಾರೆ, ಯಮುನೋತ್ರಿ, ಗಂಗೋತ್ರಿ, ಕೇದಾರ,ಬದರಿನಾಥಕ್ಕೆ ಹೋದದ್ದು, ಅಲ್ಲಿ ಅನುಭವಿಸಿದ ಚಳಿಯ ತೀವ್ರತೆ, ಅಲ್ಲಿ ಕನ್ನಡಿಗರನ್ನು ಕಂಡ ಖುಷಿ, ದೇವರ ದರ್ಶನಕ್ಕೂ ಕಾಯದೆ, ಕಷ್ಟದಲ್ಲಿದ್ದ ಕುಟುಂಬಕ್ಕೆ ಸಹಾಯ ಮಾಡಿದ ಸಂದರ್ಭವನ್ನು ವಿವರಿಸುತ್ತಾರೆ. ಕಾರ್ಣಿಕವಾದ ಪಂಜುರ್ಲಿಯ ಕತೆ ಹೇಳುತ್ತಾರೆ, ಕೊಳೆಗೋರಿಯ ಗುಡಿಸಲಲ್ಲಿ ಅರಳಿದ ಪ್ರೇಮ ಎಂಬ ಹುಡುಗಿಯನ್ನು ತೋರಿಸುತ್ತಾರೆ,ಹೀಗೆ ಬದುಕಿನಲ್ಲಿ ಸಾಧನೆಗೈದ ಕೆಲವು ವ್ಯಕ್ತಿಗಳನ್ನು ನಮಗೆ ಪರಿಚಯಿಸುತ್ತಾರೆ, ಸಾಮಾಜಿಕ ಜಾಲತಾಣಗಳಿಂದಾಗುವ ವಂಚನೆಯನ್ನು ಉದಾ: ಸಹಿತ ವಿವರಿಸಿ, ಸಮಾಜಕ್ಕೆ ಎಚ್ತರಿಕೆ ನೀಡುತ್ತಾರೆ. ಸಾಣೂರಿನ ಹಳೆ ಸೇತುವೆ ಮೇಲೆ 'ಓದುಗರು',ವಾಟ್ಸಪ್ ಬಳಗದಿಂದ ನಡೆಸಿದ 'ಶರಸೇತು ಬಂಧ' ತಾಳಮದ್ದಳೆ ನಡೆಸಿದ ಪ್ರಸಂಗದ ಮೂಲಕ ಮುಸ್ಲಿಂ.ಹಿಂದುಗಳ ನಡುವಿನ ಅನ್ಯೋನ್ಯತೆಯನ್ನು ಕಾಣಬಹುದು. ಒಬ್ಬ ಹುಡುಗಿಯ ಮೂಲಕ ಸತ್ತವರ ಬೂದಿಯಲ್ಲಿ ಹುಡುಕಿ ಸಿಕ್ಕುವ ಚಿನ್ನದಿಂದ ಬದುಕು ಕಟ್ಟಿಕೊಳ್ಳುವ ಜನರೂ ನಮ್ಮ ನಡುವೆ ಇದ್ದಾರೆ ಎನ್ನುವುದನ್ನು ಸಾಕ್ಷಿ ಸಮೇತ ವಿವರಿಸುತ್ತಾರೆ. ಚಿಕಮಗಳೂರಿನಲ್ಲಿರುವ ದತ್ತಪೀಠ/ ಬಾಬ ಬುಡನ್ ಗಿರಿ ಎಂಬ ಹೆಸರಿನ ಸುತ್ತ ಇರುವ ಸಮಸ್ಯೆಯನ್ನು ಹೇಳುತ್ತಾರೆ. ಕಾಶಿಗೆ ಹೋದವರು ತಾಜ್ ಮಹಲ್, ಮಥುರೆ, ವೃಂದಾವನ, ಅಯೋಧ್ಯೆ ಹೀಗೆ ಹಲವು ಸ್ಥಳಗಳಿಗೆ ಭೇಟಿ ನೀಡುತ್ತಾರೆ.. ನಡುರಾತ್ರಿಯಲ್ಲಿ ಆ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಅಲೆದದ್ದು, ದಾರಿ ತಪ್ಪಿದ್ದು, ಎಲ್ಲವನ್ನು ವಿವರಿಸುತ್ತಾರೆ. ಹರಿಶ್ಚಂದ್ರ ಘಾಟ್, ಮಣಿಕರ್ಣಿಕಾ ಘಾಟ್ ಗಳ ಕಿರು ಮಾಹಿತಿ ನೀಡುತ್ತಾರೆ. ಅಲ್ಲಿ ಕಂಡ ವಿಚಿತ್ರ ದೃಶ್ಯಗಳನ್ನು ಸೆರೆ ಹಿಡಿಯುತ್ತಾರೆ. ಸಾವಿನಲ್ಲೂ ಸೆಲ್ಫಿ, ಫೊಟೊ ತೆಗೆದು ಸಂಭ್ರಮಿಸುವುದನ್ನು ಕಂಡು ಅಚ್ಚರಿ ಪಡುತ್ತಾರೆ. ಹೋದಲ್ಲೆಲ್ಲ ಹೊಸ ಅನುಭವಗಳನ್ನು ಪಡೆಯುತ್ತಾರೆ, ಎಣಿಸದ ಘಟನೆಗಳನ್ನು ಎದುರಿಸುತ್ತಾರೆ, ಸಹಾಯ ಮಾಡಿದ, ಸ್ನೇಹ ಸಂಬಂಧಗಳನ್ನು ಬೆಳೆಸಿದ, ಮಾನವೀಯತೆಗೆ ಸಾಕ್ಷಿಯಾದ, ಉಮೇಶ್ಚಂದ್ರ ಪಾಲ್, ಪ್ರೇಮ್, ಜಥಿನ್ ಠಾಕುರ್ ಮೊದಲಾದವರನ್ನು ನೆನೆದುಕೊಳ್ಳುತ್ತಾರೆ, ಅಲ್ಲಲ್ಲಿ ಸಂದರ್ಭೋಚಿತವಾಗಿ ಚಿತ್ರಗಳನ್ನೂ ಬರವಣಿಗಯೊಂದಿಗೆ ಜೋಡಿಸುತ್ತಾರೆ, ರೈಲಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದ್ದು, ಫೈನ್ ಕಟ್ಟಿದ್ದು, ದೂದ್ ಸಾಗರ್ ಜಲಪಾತವನ್ನು ಕಣ್ತುಂಬಿಕೊಂಡದ್ದು ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಅವರ ಪ್ರಯಾಣಗಳು ಹೀಗೆ ಮುಂದುವರಿಯಲಿ, ಹೊಸ ಹೊಸ ಅನುಭವಗಳು ಅವರ ಬರವಣಿಗೆಗೆ ಸ್ಫೂರ್ತಿಯಾಗಲಿ.... ಇನ್ನೊಂದು ಹೊಸ ಪುಸ್ತಕದ ನಿರೀಕ್ಷೆಯೊಂದಿಗೆ... ಚೇತನಾ ಕುಂಬ್ಳೆ FEED BACK WITH: samarasasudhi@gmail.com

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries