ಮಾ.23ರಂದು ವಿಶ್ವ ಕ್ಷಯರೋಗ ನಿಯಂತ್ರಣ ದಿನ - ಸಾಮೂಹಿಕ ಓಟದಲ್ಲಿ ಭಾಗಿಯಾಗುವ ಪಿ.ಟಿ.ಉಷಾ
0
ಮಾರ್ಚ್ 17, 2019
ಕಾಸರಗೋಡು: ವಿಶ್ವ ಕ್ಷಯರೋಗ ನಿಯಂತ್ರಣ ದಿನಾಚರಣೆ ಅಂಗವಾಗಿ ಕಾಸರಗೋಡಿನಲ್ಲಿ ಭಾರತದ ಚಿನ್ನದ ಜಿಂಕೆ ಪಿ.ಟಿ.ಉಷಾ ಓಟ ನಡೆಸಲಿದ್ದಾರೆ.
ಕ್ಷಯರೋಗ ನಿಯಂತ್ರಣ ಸಂಬಂಧ ನಡೆಯುವ ಮರಥಾನ್ (ಸಾಮೂಹಿಕ ಓಟ)ದಲ್ಲಿ ಅವರು ಭಾಗವಹಿಸುವರು. ಮಾ.23ರಂದು ಬೆಳಗ್ಗೆ ಕಾಸರಗೋಡು ಜನರಲ್ ಆಸ್ಪತ್ರೆ ಬಳಿ ಆರಂಭಗೊಳ್ಳುವ ಸಾಮೂಹಿಕ ಓಟ ಹೊಸಬಸ್ ನಿಲ್ದಾಣ ಬಳಿ ಸಮಾರೋಪಗೊಳ್ಳಲಿದೆ. ಎನ್.ಎಸ್.ಎಸ್. ಸ್ವಯಂಸೇವಕರು, ಕಾಲೇಜು ವಿದ್ಯಾರ್ಥಿಗಳು, ನೆಹರೂ ಯುವ ಕೇಂದ್ರ ಯೂತ್ ಕ್ಲಬ್ ಕಾರ್ಯಕರ್ತರು, ಕುಟುಂಬಶ್ರೀ, ಸಾಕ್ಷರತಾ ಮಿಷನ್ ಕಾರ್ಯಕರ್ತರು ಸಹಿತ ವಿವಿಧ ವಲಯದ ಮಂದಿ ಭಾಗವಹಿಸುವರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ಹಸುರು ನಿಶಾನೆ ತೋರುವರು. ಓಟದ ನಂತರ ನೂತನ ಬಸ್ ನಿಲ್ದಾಣಬಳಿ ನಡೆಯುವ ಸಭಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು. ಪಿ.ಟಿ.ಉಷಾ ಮುಖ್ಯ ಅತಿಥಿಯಾಗಿರುವರು. ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಪಿ.ದಿನೇಶ್ ಕುಮಾರ್ ಅಧ್ಯಕ್ಷತೆ ವಹಿಸುವರು. ಸೀನಿಯರ್ ಫಿಸಿಶಿಯನ್, ಮಾಜಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಬಿ.ಎಸ್.ರಾವ್ ಅವರನ್ನು ಅಭಿನಂದಿಸಲಾಗುವುದು. ಮಾರಕ ಟಿ.ಬಿ.(ಮಲ್ಟಿ ಡ್ರಗ್ ರೆಸಿಸ್ಟೆನ್ಸ್ ಟಿ.ಬಿ.)ಯಿಂದ ಚಿಕಿತ್ಸೆಯ ಮೂಲಕ ಗುಣಮುಖರಾದ ಜಿಲ್ಲೆಯ ಮೊದಲ ವ್ಯಕ್ತಿಯನ್ನು ಗೌರವಿಸಲಾಗುವುದು.
ಬಾಯಿಯ ಮೂಲಕ ಹರಡುವ ಕ್ಷಯರೋಗವನ್ನು ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸಲಾಗುವುದು. ಜಿಲ್ಲೆಯಲ್ಲಿ ಸೂಕ್ತ ಕ್ರಮಗಳಹಿನ್ನೆಲೆಯಲ್ಲಿ ಕ್ಷಯರೋಗ ಬಾಧೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಟಿ.ಪಿ.ಆಮಿನಾ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕ್ಷಯರೋಗ ದಿನಾಚರಣೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಜಿಲ್ಲಾಆರೋಗ್ಯ ಅಧಿಕಾರಿಗಳಾದ ಡಾ.ಎ.ಟಿ.ಮನೋಜ್, ಡಾ.ಕೆ.ಕೆ.ಶಾಂಟಿ, ಜಿಲ್ಲಾ ಸಮಾಜನೀತಿ ಅಧಿಕಾರಿ ಬಿ.ಭಾಸ್ಕರನ್ ಮೊದಲಾದವರು ಉಪಸ್ಥಿತರಿದ್ದರು.

