ಬಜಕೂಡ್ಲು ಶ್ರೀ ಏರೋಟಿ ದೈವಸ್ಥಾನ ಕಾಂಕ್ರೀಟ್ ರಸ್ತೆ ಉದ್ಘಾಟನೆ
0
ಮಾರ್ಚ್ 11, 2019
ಪೆರ್ಲ: ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸನಿಹದ ಶ್ರೀ ಏರೋಟಿ ಧೂಮಾವತೀ ಮತ್ತು ಪರಿವಾರ ದೈವಗಳ ದೈವಸ್ಥಾನಕ್ಕೆ ತೆರಳುವ ಕಾಂಕ್ರೀಟ್ ರಸ್ತೆಯ ಉದ್ಘಾಟನಾ ಸಮಾರಂಭ ಬಜಕೂಡ್ಲಿನಲ್ಲಿ ನಡೆಯಿತು. ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ಶಾರದಾ ವೈ, ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ರಸ್ತೆ, ಶುದ್ಧ ಕುಡಿಯುವ ನೀರು, ವಸತಿ ಸಹಿತ ಮೂಲ ಸೌಕರ್ಯ ಅಭಿವೃದ್ಧಿಗೊಂಡಾಗ ಮಾತ್ರ ನಾಡಿನ ಅಭಿವೃದ್ದಿ ಸಾಧ್ಯ. ಮೂಲಸೌಕರ್ಯ ವೃದ್ಧಿಗೆ ಪಂಚಾಯತ್ ಹೆಚ್ಚಿನ ಆದ್ಯತೆ ನೀಡುತ್ತಿದೆ. ಊರಿನ ಜನರ ಸಹಕಾರ ಇದ್ದರೆ ಮಾತ್ರ ಸರಕಾರಿ ಕೆಲಸ ಶೀಘ್ರ ಪೂರ್ತಿಗೊಳ್ಳಲು ಸಾಧ್ಯ. ಬಜಕೂಡ್ಲಿನ ದೈವಸ್ಥಾನಕ್ಕೆ ತೆರಳುವ ರಸ್ತೆಗೆ ಜಾಗ ಬಿಟ್ಟುಕೊಡುವುದರ ಜತೆಗೆ ಶ್ರಮದಾನದ ಕಾರ್ಯಗಳನ್ನು ನಡೆಸಿಕೊಡುವ ಮೂಲಕ ಊರವರ ಸಹಕಾರ ಶ್ಲಾಘನೀಯ ಎಂದು ತಿಳಿಸಿದರು.
ಗ್ರಾ.ಪಂ. ಸದಸ್ಯ ಹನೀಫ್ ನಡುಬೈಲು ಅಧ್ಯಕ್ಷತೆ ವಹಿಸಿ ಮಾತನಾಡಿ, 16ನೇ ಬಜಕೂಡ್ಲು ವಾರ್ಡಿನ ಸಮಗ್ರ ಅಭಿವೃದ್ಧಿ ಗಮನದಲ್ಲಿರಿಸಿ ಹಲವಾರು ಸರಕಾರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿದ್ದು, ಇದಕ್ಕೆ ಮುಂದೆಯೂ ಜನರ ಸಹಕಾರ ಯಾಚಿಸುವುದಾಗಿ ತಿಳಿಸಿದರು. ರಸ್ತೆ ನಿರ್ಮಾಣಕ್ಕೆ ಜಾಗ ಉದಾರವಾಗಿ ನೀಡಿದ ಬಜಕೂಡ್ಲು ರಾಮಣ್ಣ ಮಾಸ್ಟರ್ ಹಾಗೂ ಬಾಬು ಮೂಲ್ಯ ಬಜಕೂಡ್ಲು ಅವರನ್ನು ಈ ಸಂದರ್ಭ ಗೌರವಿಸಲಾಯಿತು. ದೇವಸ್ಥಾನ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ, ದೈವಸ್ಥಾನ ಸಮಿತಿ ಅಧ್ಯಕ್ಷ ರಾಮಕೃಷ್ಣ ಭಟ್ ಸರ್ಪಂಗಳ, ಗ್ರಾ.ಪಂ. ಮಾಜಿ ಸದಸ್ಯ ವಿಶ್ವನಾಥ ರೈ ಬಜಕೂಡ್ಲು, ವ್ಯಾಪಾರಿ ಅನಂತೇಶ್ವರ ಪೈ ಪೆರ್ಲ, ಅಭಿಯಂತರ ಪ್ರಶಾಂತ್ ಬಜಕೂಡ್ಲು, ಭೋಜರಾಜ್ ಬಜಕೂಡ್ಲು ಉಪಸ್ಥಿತರಿದ್ದರು.
ರಸ್ತೆ ನಿರ್ಮಾಣಕ್ಕೆ ಶ್ರಮವಹಿಸಿದ ವಾರ್ಡು ಸದಸ್ಯ ಹನೀಫ್ ನಡುಬೈಲು ಅವರಿಗೆ ರಾಮಕೃಷ್ಣ ಭಟ್ ಸ್ಮರಣಿಕೆ ನೀಡಿ ಗೌರವಿಸಿದರು. ಕಾಂಕ್ರೀಟ್ ರಸ್ತೆಯನ್ನು ದೈವಸ್ಥಾನ ವರೆಗೆ ವಿಸ್ತರಿಸುವಂತೆ ರಾಮಕೃಷ್ಣ ಭಟ್ ಅವರು ಗ್ರಾ.ಪಂ. ಅಧ್ಯಕ್ಷೆ ಶಾರದಾ ವೈ. ಅವರಿಗೆ ಮನವಿ ನೀಡಿದರು. ಪುರುಷೋತ್ತಮ ಸ್ವಾಗತಿಸಿ, ದಾಮೋದರ ಬಜಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಮಾಸ್ಟರ್ ವಂದಿಸಿದರು.




