ಪಯಸ್ವಿನಿ ನದಿಗೆ ಕಿಂಡಿ ಅಣೆಕಟ್ಟು
0
ಮಾರ್ಚ್ 17, 2019
ಮುಳ್ಳೇರಿಯ: ಪಯಸ್ವಿನಿ ನದಿ ನೀರನ್ನು ಕುಂಟಾರು ಪ್ರದೇಶದಿಂದ ಬೆಳ್ಳೂರು ಗ್ರಾಪಂ ಪ್ರದೇಶಗಳಿಗೆ ರವಾನಿಸುವ ಜಲನಿಧಿ ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು, ಈಗ ಪಯಸ್ವಿನಿ ನದಿಗೆ ಕುಂಟಾರಿನಲ್ಲಿ ಕಿಂಡಿ ಅಣೆಕಟ್ಟು (ಚೆಕ್ ಡ್ಯಾಂ) ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ.
ಜಲನಿಧಿಯು ಚೆಕ್ ಡಾಂ ನಿರ್ಮಾಣಕ್ಕಾಗಿ ಹಣ ಬಿಡುಗಡೆಗೊಳಿಸಿದರೂ ಗುತ್ತಿಗೆ ಪೂರ್ಣಗೊಳ್ಳದ ಕಾರಣ ಕಾಮಗಾರಿ ಒಂದು ವರ್ಷ ತಡವಾಗಿ ಆರಂಭವಾಗಿದೆ. ಚೆಕ್ ಡ್ಯಾಂ ನಿರ್ಮಿಸದೆ ಬೆಳ್ಳೂರಿಗೆ ನೀರು ಪೂರೈಕೆ ಆರಂಭಿಸಬಾರದು ಎಂಬ ತೀರ್ಮಾನದ ಹಿನ್ನೆಲೆಯಲ್ಲಿ ಬೆಳ್ಳೂರಿಗೆ ನೀರು ಪೂರೈಕೆ ಆರಂಭಗೊಂಡಿರಲಿಲ್ಲ.
ಬೇಸಿಗೆಯಲ್ಲಿ ಪಯಸ್ವಿನಿ ಬತ್ತಿ ಕುಂಟಾರಿನ ಜನರೂ ನೀರಿಗಾಗಿ ಒದ್ದಾಡ ಬೇಕಾಗುತ್ತಿರುವುದು ವಸ್ತುಸ್ಥಿತಿಯಾಗಿದೆ. ಈ ಹಿನ್ನೆಲೆಯಲ್ಲಿ ನೀರು ಪೂರೈಕೆ ಯೋಜನೆಯ ಬಾವಿ ತೋಡಿದ ಸ್ಥಳಕ್ಕಿಂತ ಕೆಳ ಭಾಗದಲ್ಲಿ, ಅಂದರೆ ಕುಂಟಾರು ತೂಗುಸೇತುವೆಗಿಂತ 75 ಮೀ. ದೂರದಲ್ಲಿ ಚೆಕ್ ಡಾಂ ನಿರ್ಮಿಸಲಾಗುತ್ತಿದೆ. ಮೂರು ತಿಂಗಳ ಹಿಂದೆಯೇ ಚೆಕ್ ಡ್ಯಾಂ ನಿರ್ಮಿಸಲು ಕಾಮಗಾರಿ ಆರಂಭಗೊಂಡಿತ್ತು. ಆದರೆ ನದಿಯಲ್ಲಿ ನೀರಿನ ಹರಿವು ಅಧಿಕವಿದ್ದ ಕಾರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿತ್ತು.
ಆದರೆ ಈಗ ಪಯಸ್ವಿನಿ ಬತ್ತಿದ ಸ್ಥಿತಿಗೆ ತಲುಪಿದ್ದು, ಚೆಕ್ ಡ್ಯಾಂ ನಿರ್ಮಿಸಲು ಅಗತ್ಯವಾದ ಅಡಿಪಾಯ ಹಾಕುವ ಕೆಲಸ ನಡೆಯುತ್ತಿದೆ. ಪಯಸ್ವಿನಿ ನದಿಯ ನೀರನ್ನು ತಡೆ ಹಿಡಿಯಲು ಇದರ ಮೇಲೆ ಎರಡು ಮೀ. ಎತ್ತರದ ನೀರನ್ನು ತಡೆದು ನಿಲ್ಲಿಸುವ ಕಾಂಕ್ರಿಟ್ ತಡೆಗೋಡೆ ನಿರ್ಮಿಸಲಾಗುತ್ತಿದೆ. ಸುಮಾರು 93 ಮೀ. ಉದ್ದದ ಈ ತಡೆಗೋಡೆ ನಿರ್ಮಾಣ ಭರದಿಂದ ನಡೆಯುತ್ತಿದೆ. ಫೈಬರ್ ಹಲಗೆ ಉಪಯೋಗಿಸಿ ಇದರ ಕಾರ್ಯನಿರ್ವಹಣೆ ನಡೆಯಲಿದೆ. ಮಳೆಗಾಲದಲ್ಲಿ ನೀರನ್ನು ತೆರೆದು ಬಿಡುವ ವ್ಯವಸ್ಥೆ ಮಾಡಲಾಗುತ್ತಿದೆ.
ಮಳೆ ಬಂದರೆ ಕಾಮಗಾರಿ ಸ್ಥಗಿತ:
ಮಳೆಗಾಲ ಆರಂಭವಾಗುವ ಮೊದಲೇ ಕಾಮಗಾರಿ ಪೂರ್ಣಗೊಳಿಸಬೇಕಾದ ಅನಿವಾರ್ಯತೆಯಿದೆ. ಆದರೆ ಕಾಮಗಾರಿ ತಡವಾಗಿ ಆರಂಭವಾಗಿರುವುದರಿಂದ ಕಾಮಗಾರಿ ಸಕಾಲಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲವೆಂದೇ ತೋರುತ್ತಿದೆ. ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೂ ಬೇಸಿಗೆಯಲ್ಲಿ ಇದ್ದಕ್ಕಿದ್ದಂತೆ ಮಳೆ ಬಂದರೆ ಪಯಸ್ವಿನಿಯಲ್ಲಿ ನೀರಿನ ಹರಿವು ಬಲಗೊಳ್ಳುತ್ತದೆ. ಇದು ಕಾಮಗಾರಿಯ ಸ್ಥಗಿತತೆಗೆ ಕಾರಣವಾಗುವ ಸಾಧ್ಯತೆಯಿದೆ. ಜೊತೆಗೆ ಈಗಾಗಲೇ ನೀರನ್ನು ತಡೆಹಿಡಿಯಲು ದೇಗುಲ ಪರಿಸರದಿಂದ ತಂದು ನದಿಯಲ್ಲಿ ರಾಶಿ ಹಾಕಿ ವ್ಯವಸ್ಥೆಗೊಳಿಸಿದ ಮಣ್ಣು ಸಮುದ್ರ ಪಾಲಾಗುವ ಭೀತಿ ಇದೆ. ಇದರಿಂದ ಕಾಮಗಾರಿಯನ್ನು ಈ ವರ್ಷ ಮುಂದುವರಿಸಲು ಅಸಾಧ್ಯವಾಗಬಹುದು.
ಕಲಕಿದ ನೀರು:
ಚೆಕ್ ಡ್ಯಾಂ ನಿರ್ಮಾಣ ಸಂದರ್ಭ ಸುರಿದ ಮಣ್ಣು ಮತ್ತು ನಿರ್ಮಾಣ ಕಾಮಗಾರಿ ಸಂದರ್ಭ ಸಂಗ್ರಹವಾಗುತ್ತಿರುವ ನೀರನ್ನು ಪಂಪ್ ಮೂಲಕ ನಿಂತ ನೀರಿಗೆ ಹಾಯಿಸುವ ಕಾರಣ ಈ ಪ್ರದೇಶದಲ್ಲಿರುವ ನೀರು ಸಂಪೂರ್ಣ ಕಲಕಿದೆ. ಹೀಗಾಗಿ ಕುಂಟಾರು ಕ್ಷೇತ್ರ ಮತ್ತು ಇಲ್ಲಿನ ಪರಿಸರ ನಿವಾಸಿಗಳು ಸಮಸ್ಯೆ ಎದುರಿಸಬೇಕಾಗುತ್ತಿದೆ.
ಬೆಳ್ಳೂರಿಗೆ ನೀರು:
ಬೆಳ್ಳೂರು ಗ್ರಾಪಂ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ವಿಶ್ವ ಬ್ಯಾಂಕ್‍ನ ನೆರವಿನೊಂದಿಗೆ ರಾಜ್ಯ ಸರಕಾರ, ಗ್ರಾಪಂನ ಆರ್ಥಿಕ ಸಹಾಯದೊಂದಿಗೆ ನಿರ್ಮಿಸುತ್ತಿರುವ 7.37 ಕೋಟಿ ರೂ. ವೆಚ್ಚದ ಬೃಹತ್ ಕುಡಿಯುವ ನೀರಿನ ಯೋಜನೆ ಇದಾಗಿದೆ. ಯೋಜನೆಯಂತೆ ಕಾರಡ್ಕ ಗ್ರಾಪಂಗೆ ಸೇರಿದ ಕುಂಟಾರು ಶ್ರಿಕ್ಷೇತ್ರದ ಸಮೀಪದಲ್ಲಿ ಹರಿಯುವ ಪಯಸ್ವಿನಿ ನದಿಯಿಂದ ನೀರನ್ನು, ನದಿಗೆ ಹೊಂದಿಕೊಂಡು ಬೃಹತ್ ಬಾವಿಯೊಂದನ್ನು ಕೊರೆದು, ಅದಕ್ಕೆ 50 ಅಶ್ವಶಕ್ತಿಯ ನೀರೆತ್ತುವ ಪಂಪ್ ಜೋಡಿಸಿ, ಕುಂಟಾರು-ಮಾಯಿಲಂಕೋಟೆ ಮೂಲಕ ಮಿಂಚಿಪದವಿನಲ್ಲಿ ನಿರ್ಮಿಸುವ ಸಂಗ್ರಹ ಟ್ಯಾಂಕಿಯಲ್ಲಿ ಶೇಖರಿಸಿ ಅಲ್ಲಿಂದ ಬೆಳ್ಳೂರಿಗೆ ತಲುಪಿಸುವ ಯೋಜನೆ ಇದಾಗಿದೆ. ಇದಕ್ಕಾಗಿ ಸುಮಾರು 10 ಕಿ.ಮೀ. ಉದ್ದಕ್ಕೆ ಕೊಳವೆಯನ್ನು ಜೋಡಿಸಬೇಕಾಗಿದೆ.
ಗ್ರಾಮೀಣ ಪ್ರದೇಶವಾಗಿರುವ ಬೆಳ್ಳೂರು ಗ್ರಾಪಂಗೆ ಈ ಕುಡಿಯುವ ನೀರಿನ ಯೋಜನೆ ವರದಾನವಾಗಬಹುದು. ಇಲ್ಲಿನ ಬಹಳಷ್ಟು ಕುಟುಂಬಗಳು ಬೇಸಿಗೆ ಬಂತೆಂದರೆ ನೀರಿಗಾಗಿ ಒದ್ದಾಡುತ್ತವೆ. ಕಾಲನಿ ನಿವಾಸಿಗಳು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮಿಂಚಿಪದವಿನಲ್ಲಿ ಎರಡೂವರೆ ಲಕ್ಷ ಲೀಟರ್ ಸಾಮಥ್ರ್ಯದ ನೀರು ಸಂಗ್ರಹ ಟ್ಯಾಂಕ್ ನಿರ್ಮಾಣ ನಡೆಯಲಿದೆ. ಇಲ್ಲಿಂದ ಕಿರು ನೀರು ಸಂಗ್ರಾಹಕಗಳಿಗೆ ವಿತರಿಸಿ, ಅಲ್ಲಿಂದ ಮನೆ ಮನೆಗೂ ನೀರು ಒದಗಿಸುವ ಯೋಜನೆ ಇದಾಗಿದೆ. ಕೊಳವೆ ಜೋಡಿಸುವ ಕಾಮಗಾರಿಯೂ ನಡೆಯಬೇಕಿದೆ. ಈ ಯೋಜನೆಯಂತೆ ಶೇ.15 ಖರ್ಚನ್ನು ಗ್ರಾಪಂ, ಶೇ.10 ಖರ್ಚನ್ನು ಫಲಾನುಭವಿಗಳು ಭರಿಸುತ್ತಿದ್ದಾರೆ. ಕುಂಟಾರು ಪ್ರದೇಶದಲ್ಲಿ ಪಯಸ್ವಿನಿ ನದಿಗೆ ಹೊಂದಿಕೊಂಡು ಬೃಹತ್ ಪಂಪಿಂಗ್ ಕೇಂದ್ರ ತಯಾರಾಗಿದೆ. ಇದರಲ್ಲಿ ಅಗತ್ಯವಾದ ಯೋಜನೆಗೆ ನೀರು ಹಾಯಿಸುವ ಮೋಟಾರನ್ನು ಜೋಡಿಸಲಾಗಿದೆ. ವಿದ್ಯುತ್ ಸಂಪರ್ಕವೂ ಲಭಿಸಿದ ಹಿನ್ನೆಲೆಯಲ್ಲಿ ಪ್ರಾಯೋಗಿಕ ನೀರು ಹಾಯಿಸುವಿಕೆಯೂ ನಡೆಯುತ್ತಿದೆ.
ಈ ಯೋಜನೆಯ ಕಾಮಗಾರಿಯನ್ನು 2014ರ ಏಪ್ರಿಲ್ ತಿಂಗಳಲ್ಲಿಯೇ ಆರಂಭಿಸಲಾಗಿತ್ತು. ಕುಂಟಾರಿನ ಜನರ ವಿರೋಧದಿಂದಾಗಿ ಬಾವಿ ಕೊರೆಯುವ ಕಾಮಗಾರಿ ನಿಲ್ಲಿಸಬೇಕಾಯಿತು. ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಯೋಜನೆ ಬಗ್ಗೆ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯ ಜನರೊಂದಿಗೆ ಮಾತುಕತೆ ನಡೆಸಿದ್ದರು. ಸ್ಥಳೀಯರ ಒತ್ತಾಯದ ಹಿನ್ನೆಲೆಯಲ್ಲಿ ಪಯಸ್ವಿನಿ ನದಿಗೆ ಕುಂಟಾರು ಪ್ರದೇಶದಲ್ಲಿ ನಬಾರ್ಡ್ ನೇತೃತ್ವದಲ್ಲಿ ಚೆಕ್ ಡ್ಯಾಂ ನಿರ್ಮಿಸಲು ನಿರ್ಧರಿಸಿದುದರ ಪರಿಣಾಮವೇ ಇದೀಗ ನಿರ್ಮಾಣವಾಗುತ್ತಿರುವ ಡ್ಯಾಂ ನಿರ್ಮಾಣದ ಪ್ರಧಾನ ಕಾರಣವಾಗಿದೆ.

