ಕೇಳು ಮಾಸ್ತರ್ ಅತ್ಯಪರೂಪದ ಸಾಧಕ-ಪ್ರಭಾಕರ ಕಲ್ಲೂರಾಯ
0
ಮಾರ್ಚ್ 12, 2019
ಬದಿಯಡ್ಕ: ಸರಳ ಸಜ್ಜನಿಕೆಯ ಮೇರು ವ್ಯಕ್ತಿತ್ವದ ಕೇಳು ಮಾಸ್ತರ್ ಅವರು ಮಾದರಿ ಸಮಾಜಸೇವಕ. ಸ್ವಪ್ರಯತ್ನದಿಂದ ಶಿಕ್ಷಕನಾಗಿ ಅಕ್ಷರದೀಪವನ್ನು ಬೆಳಗಿ ಹಲವರ ಜೀವನವನ್ನು ಬೆಳಗಿದ್ದಾರೆ. ತನ್ನೊಳಗಿನ ಸಾಹಿತ್ಯಾಸಕ್ತಿಯನ್ನು ಉನ್ನತವಾದ ತಯಾರಿಯೊಂದಿಗೆ, ಸ್ಪಷ್ಟ ಮಾಹಿತಿಗಳ ಸಂಗ್ರಹದೊಂದಿಗೆ ಪುಸ್ತಕ ರೂಪದಲ್ಲಿ ನೀಡಿದವರು. ಅದೆಷ್ಟೋ ಮಂದಿಯನ್ನು ಪ್ರಧಾನ ಕಕ್ಷೆಗೆ ತಂದು ಸಮಾಜದ ಉನ್ನತಿಗೆ ದುಡಿಯುವಂತೆ ಪ್ರೇರೇಪಿಸಿದವರು. ಧೀಮಂತ ಸಮಾಜ ಸುಧಾರಕನ ಅನಿರೀಕ್ಷಿತ ಅಗಲುವಿಕೆ ಕನಸೋ ಎನ್ನುವಷ್ಟರ ಮಟ್ಟಿಗೆ ನಮ್ಮ ನಡುವೆ ಜೀವಂತವಾದ ನೆನಪುಗಳನ್ನು ನೀಡಿ ಮರೆಯಾಗಿದ್ದಾರೆ ಎಂದು ಗಡಿನಾಡ ಸಾಹಿತ್ಯ ಸಿರಿ ಅಧ್ಯಕ್ಷ ಮೊಹಮ್ಮದಲಿ ಪೆರ್ಲ ಅವರು ದುಃಖ ವ್ಯಕ್ತಪಡಿಸಿದರು.
ಅವರು ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಹಾಗೂ ಗಡಿನಾಡ ಸಾಹಿತ್ಯ ಸಿರಿ ಬದಿಯಡ್ಕ ಇದರ ಆಶ್ರಯದಲ್ಲಿ ಬದಿಯಡ್ಕದ ರಾಮಲೀಲಾ ಸಭಾ ಭವನದಲ್ಲಿ ಸೋಮವಾರ ಸಂಜೆ ನಡೆದ ಹಿರಿಯ ಸಾಹಿತಿ ಕೇಳು ಮಾಸ್ತರ್ ಅಗಲ್ಪಾಡಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಒಳ್ಳೆಯ ವಿಚಾರಗಳನ್ನು ಯುವಮನಸುಗಳಲ್ಲಿ ತುಂಬಿ ಸಮಾಜದ ಏಳಿಗೆಗೆ ಪ್ರಯತ್ನಿಸುತ್ತಿದ್ದ ಮಾಸ್ತರರ ನಿಸ್ವಾರ್ಥ ಮನೋಭಾವ, ಸರಳತೆಯ ಜೀವನವನ್ನು ನಾವೂ ಮೈಗೂಡಿಸಿಕೊಳ್ಳಬೇಕು ಎಂದವರು ಅಭಿಪ್ರಾಯಪಟ್ಟರು.
ನಾಟಕೀಯತೆಯೇ ತುಂಬಿರುವ ಈ ಕಾಲಘಟ್ಟದಲ್ಲಿ ನೇರವಾಗಿ ವ್ಯವಹರಿಸುವ, ನಿಷ್ಕಲ್ಮಶವಾದ ಗುಣವನ್ನು ಹೊಂದಿರುವ ಮಾಸ್ತರರು ಮಾಡಿದ ಸಂಶೋಧನೆಗಳಿಗೆ ಅವರ ಕೃತಿಗಳೇ ಸಾಕ್ಷಿ. ಪ್ರತಿಯೊಂದು ಲೇಖನದ, ಅಂಕಣದ, ಪುಸ್ತಕದ ಹಿಂದೆ ಅವಿರತ ಶ್ರಮವಿದೆ. ದಿನಗಟ್ಟಲೆ ಅದಕ್ಕಾಗಿ ನಡೆದಾಡಿದ ಕತೆಯಿದೆ. ಮಾತ್ರವಲ್ಲದೆ ಮಾಡಬೇಕೆಂಬ ದೃಢ ನಿರ್ಧಾರ ಹಾಗೂ ಜವಾಬ್ದಾರಿಯುತ ಪ್ರಯತ್ನವಿದೆ. ಒಬ್ಬ ಯಶಸ್ವಿ ವ್ಯಕ್ತಿಗೆ ಇರಬೇಕಾದ ಎಲ್ಲಾ ಉತ್ತಮ ಗುಣಗಳನ್ನು ಹೊಂದಿದ್ದ ಅತ್ಯಂತ ಸರಳ ವ್ಯಕ್ತಿ ಮಾಸ್ತರರು ಇನ್ನಷ್ಟು ಕಾಲ ಬದುಕಿದ್ದು ಸಾಹಿತ್ಯ ಸಮಾಜ ಸೇವೆ ಮಾಡಬೇಕಾಗಿತ್ತು, ಆದರೆ ಒಳ್ಳೆಯವರು ದೇವರಿಗೂ ಬೇಗ ಪ್ರಿಯರಾಗುತ್ತಾರೆ ಎಂದು ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ.ಕೆ.ಶ್ರೀಕಾಂತ್ ತನ್ನ ಸಂತಾಪವನ್ನು ಸೂಚಿಸಿದರು.
ಈ ಸಂದರ್ಭದಲ್ಲಿ ಸಂತಾಪ ಸೂಚಿಸಿದ ಅಕಾಡೆಮಿ ಅಧ್ಯಕ್ಷರಾದ ಪ್ರಭಾಕರ ಕಲ್ಲೂರಾಯ ಮಾತನಾಡಿ ಆತ್ಮೀಯವಾಗಿ ಮಾತನಾಡುವ ಮಾಸ್ತರರ ಸಲಹೆಗಳು ಜೀವನಕ್ಕೆ ಮಾರ್ಗಸೂಚಿ. ಸಮಯದ ಸದುಪಯೋಗದ ಪಾಠವನ್ನು ಕಲಿಸಿದವರು. ಹತ್ತು ಹಲವು ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಮಾದರಿಯಾದವರು. ಸಾಹಿತ್ಯ, ಸಂಘಟನೆ, ಸಮಾಜಸೇವೆಯ ಮೂಲಕ ಸದಾ ಕ್ರಿಯಾಶೀಲರಾಗಿರುವ ಸ್ಥಿತಪ್ರಜ್ಞ ಕೇಳುಮಾಸ್ತರರು ಎಂದು ಅಭಿಪ್ರಾಯ ಪಟ್ಟರು. ಸಹೃದಯಿ ಹಿತಚಿಂತಕ ಮಾಸ್ತರರು ಕಾಸರಗೋಡಿನ ಕನ್ನಡ ಶಾಲೆಗಳ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಪುಸ್ತಕಗಳನ್ನು ಒದಗಿಸಿ ಸಾಹಿತ್ಯಾಭಿರುಚಿ ಬೆಳೆಸುವ ಪ್ರಯತ್ನ ಮಾಡಿದ್ದಾರೆ. ಪ್ರತಿಭಾ ಸಂಪನ್ನರನ್ನು, ಸಮಾಜದ ಏಳಿಗೆಗಾಗಿ ಶ್ರಮಿಸುವವರನ್ನು ಮುಂದೆ ತರುವ ವಿಶಾಲವಾದ ಮನಸ್ಸನ್ನು ಹೊಂದಿದ್ದ ಅತ್ಯಪರೂಪದ ಸಾಧಕ ಕೇಳು ಮಾಸ್ತರರು ಎಂದವರು ಹೇಳಿದರು.
ಬದಿಯಡ್ಕ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಅಧ್ಯಕ್ಷರಾದ ಎಸ್.ಎನ್.ಮಯ್ಯ ಮಾಸ್ತರರೊಂದಿಗಿನ ತಮ್ಮ ಒಡನಾಟ ಹಾಗೂ ನೀಡಿದ ಸಹಕಾರಗಳ ನೆನಪುಗಳನ್ನು ಹಂಚಿಕೊಂಡರು.
ಸಾಹಿತಿ, ಪತ್ರಕರ್ತ ರಾಧಾಕೃಷ್ಣ.ಕೆ. ಉಳಿಯತ್ತಡ್ಕ, ಚಂದ್ರಹಾಸ ರೈ ಪೆರಡಾಲ ಗುತ್ತು,ರಾಮಚಂದ್ರ ಮಾಸ್ತರ್, ಪುತ್ತಿಗೆ ಪಂಚಾಯತು ಮಾಜಿ ಅಧ್ಯಕ್ಷ ನ್ಯಾಯವಾದಿ.ಥೋಮಸ್ ಡಿ.ಸೋಜ,ಖ್ಯಾತ ವೈದ್ಯರಾದ ಡಾ.ಶ್ರೀನಿಧಿ ಸರಳಾಯ, ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ವೆಂಕಟ್ರಮಣ ಭಟ್, ರಾಮಚಂದ್ರ ಮಣಿಯಾಣಿ, ರವಿ ನಾಯ್ಕಾಪು, ಗಣೇಶ್ ಪೈ ಬದಿಯಡ್ಕ, ಸುಬ್ರಹ್ಮಣ್ಯ ಮಾಸ್ತರ್, ಕೇಶವ ಶೆಟ್ಟಿ ಆದೂರು, ಸಾಹಿತ್ಯ ಸಿರಿಯ ಪ್ರಧಾನ ಕಾರ್ಯದರ್ಶಿ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್, ರವಿಕಾಂತ ಕೇಸರಿ ಕಡಾರು, ಅಕಾಡೆಮಿಯ ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಗಾಯಕ ರತ್ನಾಕರ ಓಡಂಗಲ್ಲು ಮತ್ತು ವಸಂತ ಬಾರಡ್ಕ, ಪ್ರಭಾಕರ ಕಾಮತ್, ಬೇಂದ್ರೋಡಿ ಗೋವಿಂಧ ಭಟ್, ಲಕ್ಷ್ಮಣ ಪ್ರಭು, ಮೀಡಿಯಾ ಕ್ಲಾಸಿಕಲ್‍ನ ಶ್ರೀಕಾಂತ್ ನೆಟ್ಟಣಿಗೆ, ರಾಮಚಂದ್ರ ಚೆಟ್ಟಿಯಾರ್, ಪೆರಡಾಲ ಸೇವಾ ಸಮಿತಿ ಕಾರ್ಯದರ್ಶಿ ನಿರಂಜನ ರೈ ಬದಿಯಡ್ಕ, ಪ್ರಭಾವತಿ ಕೆದಿಲಾಯ, ರೇಶ್ಮಾಸುನಿಲ್, ಸಂಧ್ಯಾಗೀತಾ ಬಾಯಾರು, ಪ್ರಸನ್ನ, ಜ್ಯೋತ್ಸ್ನಾ ಕಡಂದೇಲು, ದಿವ್ಯಾ ಟೀಚರ್, ಸುಜಾತ, ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದು ಪುಷ್ಪಾರ್ಚನೆ ನಡೆಸಿ ಅಗಲಿದ ಆತ್ಮಕ್ಕೆ ಚಿರಶಾಂತಿ ಕೋರಿದರು. ಲಕ್ಷ್ಮಣ ಪ್ರಭು ಕರಿಂಬಿಲ ಸ್ವಾಗತಿಸಿ, ವಿದ್ಯಾಗಣೇಶ್ ಅಣಂಗೂರು ವಂದಿಸಿದರು. ಪ್ರೊ.ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು.




