ವಿದ್ಯಾರ್ಥಿನಿ ಸವಿತಾರ ಗೃಹ ನಿರ್ಮಾಣಕ್ಕೆ ಚಾಲನೆ
0
ಮಾರ್ಚ್ 15, 2019
ಬದಿಯಡ್ಕ: ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಒಂದು ಕೋಣೆಯ ಟರ್ಪಲ್ ಹಾಸಿದ ಮನೆಯಲ್ಲಿ ಹಲವು ವರ್ಷಗಳಿಂದ ಬದುಕು ಕಟ್ಟಿಕೊಂಡು ಬದುಕುತ್ತಿದ್ದರೂ ಕಳೆದ ವರ್ಷ ಬಿ.ಎ. ಕನ್ನಡದಲ್ಲಿ ಮೂರನೇ ರ್ಯಾಂಕ್ ಪಡೆದು ಗಮನಸೆಳೆದ ಪಾಡಿಯ ಸವಿತಾ ಎಂ. ಅವರ ಮನೆ ನಿರ್ಮಾಣಕ್ಕೆ ಚಾಲನೆ ದೊರಕಿದೆ.
ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನ ಎನ್ನೆಸ್ಸೆಸ್ ಘಟಕವು ಕಳೆದ ವರ್ಷವೇ ಸವಿತಾಳಿಗೆ ಮನೆ ನಿರ್ಮಿಸಿಕೊಡಲು ತಯಾರಿ ನಡೆಸಿತ್ತು. ಬಳಿಕ ಹಲವು ಮಹನೀಯರು ಸವಿತಾಳ ಸಂಕಷ್ಟದಲ್ಲಿ ಸಹಭಾಗಿಯಾಗಿದ್ದರು. ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು, ಸ್ಥಳೀಯ ಕ್ಲಬ್ ಹಾಗೂ ಮಂಜೇಶ್ವರ ಹಾಗೂ ಕಾಸರಗೋಡು ಸರಕಾರಿ ಕಾಲೇಜಿನ ಎನ್ನೆಸ್ಸೆಸ್ ಘಟಕಗಳು ಜೊತೆಯಾಗಿ ಗೃಹ ನಿರ್ಮಾಣ ಸಮಿತಿಯೊಂದನ್ನು ಈಗಾಗಲೇ ರೂಪಿಕರಿಸಲಾಗಿದೆ. ಪತ್ರಕರ್ತರು ಹಾಗೂ ಊರ ಪರವೂರ ಕೆಲವರು ಸವಿತಾಳ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಸವಿತಾ ಪ್ರಸ್ತುತ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಎಂ.ಎ. ಕನ್ನಡದ ಮೊದಲ ವರ್ಷದ ವಿದ್ಯಾರ್ಥಿನಿ.
ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಅರವಿಂದ್ ಕೃಷ್ಣನ್ ಕೆ. ಶಿಲಾನ್ಯಾಸ ನೆರವೇರಿಸಿದರು. ಗೃಹ ನಿರ್ಮಾಣ ಸಮಿತಿ ಉಪಾಧ್ಯಕ್ಷ ಸಿ.ವಿ.ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಸರಕಾರಿ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ.ಸಿಂಧು ಜೋಸೆಪ್ ಮುಖ್ಯ ಅತಿಥಿಯಾಗಿದ್ದರು. ಪಿ.ಕೆ. ವಿನೋದ್ ಕುಮಾರ್, ಲಕ್ಷ್ಮೀ ಕೆ, ಡಾ.ರತ್ನಾಕರ ಮಲ್ಲಮೂಲೆ, ಡಾ.ವಿನಯನ್ ಟಿ, ಅಜೀಶ್ ಎ, ಸಜಿ ಮ್ಯಾಥ್ಯೂ, ವಿ.ಎನ್ ಸತ್ಯನ್, ಡಾ. ಕೆ.ವಿ.ಅನೂಪ್, ಟಿ.ಕೆ.ಅನಿಲ್ ಕುಮಾರ್ ಮುಂತಾದವರು ಮಾತನಾಡಿದರು. ಸವಿತಾ ಬಿ, ಸೌಮ್ಯಾ ಪ್ರಸಾದ್ ಕಿಳಿಂಗಾರು, ಸುಬ್ರಹಣ್ಯ ಹೇರಳ, ಅನಿಲ್ ಹಾಗೂ ಸವಿತಾರ ಮನೆಯವರು ಉಪಸ್ಥಿತರಿದ್ದರು.

