ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬನ ಕರ್ತವ್ಯ : ಟಿ.ವೈಕುಂಠನ್
0
ಮಾರ್ಚ್ 07, 2019
ಪೆರ್ಲ: ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ವಾಹನ ಸವಾರನ ಕರ್ತವ್ಯ. ವಾಹನ ಚಾಲನೆ ಮಾಡುವಾಗ ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಿದರೆ ಅರ್ಧದಷ್ಟು ಅಪಘಾತಗಳನ್ನು ತಡೆಗಟ್ಟಬಹುದು. ಅತೀ ವೇಗದ ವಾಹನ ಸವಾರಿ, ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಸವಾರಿ, ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆ, ಮದ್ಯ ಸೇವಿಸಿ ವಾಹನ ಸವಾರಿ, ಲೈಸೆನ್ಸ್ ರಹಿತ ವಾಹನ ಸವಾರಿ ಮುಂತಾದವುಗಳು ಅಪಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿವೆ ಎಂದು ಕಾಸರಗೋಡು ಮೋಟಾರ್ ವಾಹನ ಇಲಾಖೆಯ ಮೋಟಾರ್ ವೆಹಿಕಲ್ ಇನ್‍ಸ್ಪೆಕ್ಟರ್ ಟಿ.ವೈಕುಂಠನ್ ಹೇಳಿದ್ದಾರೆ.
ಅವರು ಪೆರ್ಲ ನಾಲಂದಾ ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ರಸ್ತೆ ಸುರಕ್ಷತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ತರಗತಿಯನ್ನು ನಡೆಸಿಕೊಟ್ಟು ಮಾತನಾಡಿದರು.
ಯುವ ಜನಾಂಗ ಎಚ್ಚೆತ್ತುಕೊಂಡಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಸದಸ್ಯ ರಾಜಶೇಖರ್ ಮಾತನಾಡಿ ಸರಕಾರಗಳು ಹೊಸ ಹೊಸ ರಸ್ತೆ ಸುರಕ್ಷತೆ ನಿಯಮಗಳನ್ನು ಜಾರಿಗೆ ತರುವುದು ಜನರ ಸುರಕ್ಷತೆಗಾಗಿ ಹೊರತು ತಮ್ಮ ಸಂಪತ್ತನ್ನು ವೃದ್ಧಿಸಲು ಅಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ವಿಘ್ನೇಶ್ವರ ವರ್ಮುಡಿ, ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಿದಲ್ಲಿ ನಮ್ಮ `Àವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಹೇಳಿದರು. ಈ ವೇಳೆ ಕಾಸರಗೋಡು ಮೋಟಾರ್ ವಾಹನ ಇಲಾಖೆಯ ಸಹಾಯಕ ಮೋಟಾರ್ ವೆಹಿಕಲ್ ಇನ್‍ಸ್ಪೆಕ್ಟರ್ ಗಣೇಶನ್, ಎನ್ನೆಸ್ಸೆಸ್ ಕಾರ್ಯದರ್ಶಿ ರೂಪಾ, ನಿಶ್ಚಿತಾ, ಸುದೀಶ್, ದಿವ್ಯಾ ಮತ್ತಿತರರು ಉಪಸ್ಥಿತರಿದ್ದರು.




