ತಲೇಕಳ ಶ್ರೀ ಸದಾಶಿವ ರಾಮವಿಠಲ ಕ್ಷೇತ್ರದಲ್ಲಿ ಮಹಾ ಶಿವರಾತ್ರಿಯ ಸಂಭ್ರಮದ ಉತ್ಸವ
0
ಮಾರ್ಚ್ 07, 2019
ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮವಿಠಲ ದೇಗುಲದಲ್ಲಿ ಮಹಾಶಿವರಾತ್ರಿಯ ಮಹೋತ್ಸವವನ್ನು ಭಕ್ತಿ, ಶ್ರದ್ಧೆ ಸಂಭ್ರಮಗಳಿಂದ ಆಚರಿಸಲಾಯಿತು. ಕಾರ್ಯಕ್ರಮಗಳ ಅಂಗವಾಗಿ ಉಷಃಕಾಲ ಪೂಜೆಯ ನಂತರ ಮೊಕ್ತೇಸರ ವೇ.ಮೂ. ಯನ್ ವಾಸುದೇವ ಭಟ್ ಇವರ ನೇತೃತ್ವದಲ್ಲಿ, ಶಿವರಾಜ.ವಿ ಹಾಗೂ ತಂಡದವರಿಂದ ಶ್ರೀ ಕ್ಷೇತ್ರದ ಪರಿವಾರ ದೇವತೆಗಳವರಾದ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ, ಶ್ರೀ ರಾಮವಿಠಲ ದೇವರ ಸನ್ನಿಧಿಯಲ್ಲಿ, ಶ್ರೀವನ ಶಾಸ್ತಾವೇಶ್ವರ ಸನ್ನಿಧಿಯಲ್ಲಿ ಹಾಗೂ ನಾಗಬ್ರಹ್ಮ, ಗುರುವೃಂದಾವನದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಶ್ರೀ ಕ್ಷೇತ್ರದ ಪ್ರಧಾನ ದೇವರಾದ ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಕ್ಷೀರಾಭಿಷೇಕ, ದಧಿಯಾಭಿಷೇಕ, ಘೃತಾಭಿಷೇಕ, ಮಧುವಾಭಿಷೇಕ, ಶರ್ಕರಾಭಿಷೇಕ, ಫಲಾಭಿಷೇಕಗಳೊಂದಿಗೆ ಪಂಚಾಮೃತಾಭಿಷೇಕವನ್ನು ಮಾಡಿ, ಶ್ರೀ ಗಂಧ, ಪುಷ್ಪ, ನಾಳಿಕೇರ ಜಲಧಾರೆಯೊಂದಿಗೆ ರುದ್ರಾಭಿಷೇಕದ ವಿಶೇಷ ಸೇವೆಯನ್ನು ಸಲ್ಲಿಸಲಾಯಿತು. ಸ್ವರ್ಣ, ರಜತ, ಪುಷ್ಪಾಲಂಕಾರದೊಂದಿಗೆ ಸರ್ವಾಭರಣ, ಸರ್ವಾಲಂಕಾರದೊಂದಿಗೆ ಅರ್ಚನೆ, ದೀಪಾರಾಧನೆ ಕಾರ್ತಿಕಪೂಜೆಯೊಂದಿಗೆ ವಿಶೇಷ ಸೇವಾಧಿಗಳನ್ನು ನೆರವೇರಿಸಿ ಮಹಾಪೂಜೆಯನ್ನು ಸಲ್ಲಿಸಲಾಯಿತು. ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ, ಒಳ್ಳೆ ಮೆಣಸಿನ ಪಾನಕದೊಂದಿಗೆ ಫಲಾಹಾರದ ವ್ಯವಸ್ಥೆಯನ್ನು ಮಾಡಿ ಶಿವರಾತ್ರಿ ವೃತವನ್ನು ಆಚರಿಸಲಾಯಿತು. ಭಕ್ತವೃಂದ ಹಾಗೂ ಶ್ರೀಕ್ಷೇತ್ರ ಸಮಿತಿಯವರಿಂದ ಹಗಲು, ರಾತ್ರಿ ಭಜನಾ ಕಾರ್ಯಕ್ರಮವನ್ನು ನಡೆಸಲಾಯಿತು. ಶ್ರೀ ಸದಾಶಿವ ರಾಮವಿಠಲ ದೇವಸ್ಥಾನದ ನವೀಕರಣ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಲಕ್ಷ್ಮೀಶ.ವಿ ಹಾಗೂ ಪ್ರಧಾನ ಕಾರ್ಯದರ್ಶಿ ಸದಾನಂದ ಶೆಟ್ಟಿ ತಲೇಕಳ ನೇತೃತ್ವದಲ್ಲಿ ಶ್ರೀ ಕ್ಷೇತ್ರದ ನವೀಕರಣ ಕಾಮಗಾರಿಯ ಬಗ್ಗೆ ಚಿಂತನಾ ಸಭೆ ಈ ಸಂದರ್ಭ ನಡೆಯಿತು. ಮುಖ್ಯ ಅತಿಥಿಯಾಗಿ ವೇ.ಮೂ. ಶ್ರೀಕಾಂತ ಮಾಣಿಲತ್ತಾಯರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.




