ರೈಲು ನಿಲ್ದಾಣ ಅವಗಣನೆಗೆ ಎದುರಾಗಿ ಸಂಘಟಿತ ಹೋರಾಟಕ್ಕೆ ಸರ್ವ ಪಕ್ಷ ಸಭೆ ನಿರ್ಧಾರ
0
ಮಾರ್ಚ್ 10, 2019
ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣ ಕೇಂದ್ರೀಕರಿಸಿ ರೈಲ್ವೇ ಇಲಾಖೆ ತೋರಿಸುತ್ತಿರುವ ನಿರ್ಲಕ್ಷ್ಯ ಮತ್ತು ಜನದ್ರೋಹದ ನೀತಿಗೆದುರಾಗಿ ಸಂಘಟಿತ ಹೋರಾಟಕ್ಕೆ ರೂಪು ನೀಡಲು ಶನಿವಾರ ಹೊಸಂಗಡಿಯ ಗೇಟ್ ವೇ ಸಭಾಂಗಣದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
ಮಂಜೇಶ್ವರ ರೈಲು ನಿಲ್ದಾಣ ಆಸುಪಾಸಿನಲ್ಲಿ ದಿನದ ಬಹುತೇಕ ಸಮಯಗಳಲ್ಲೂ ಗೂಡ್ಸ್ ರೈಲುಗಾಡಿಗಳನ್ನು ನಿಲುಗಡೆಗೊಳಿಸುವುದನ್ನು ನಿಯಂತ್ರಿಸಬೇಕು, ಮುಂಗಡ ಟಿಕೇಟ್ ಕಾಯ್ದಿರಿಸುವಿಕೆ ಕ್ರಮಕ್ಕೆ ಚಾಲನೆ ನೀಡಬೇಕು, ಕುಡಿಯುವ ನೀರು, ಶೌಚಾಲಯ, ಕ್ಯಾಂಟೀನ್ ಸೌಕರ್ಯ ಏರ್ಪಡಿಸಬೇಕು, ಹೊಸಂಗಡಿ-ಉದ್ಯಾವರ ರೈಲು ಮೇಲ್ಸೇತುವೆ ಮತ್ತು ಅಂಡರ್ ಬ್ರಿಡ್ಜ್ ನಿರ್ಮಾಣ ಶೀಘ್ರ ಆರಂಭಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಯಾವುದೇ ಅಭಿಪ್ರಾಯ ಬೇಧಗಳಿಲ್ಲದೆ ಸಂಘಟಿತ ಹೋರಾಟಕ್ಕೆ ಸರ್ವಪಕ್ಷ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸರ್ವಪಕ್ಷ ಸಭೆಯ ಅಧ್ಯಕ್ಷತೆಯನ್ನು ಶೇಖ್ ರಶೀದ್ ಸಾಹೇಬ್ ವಹಿಸಿದ್ದರು. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಬಿ.ವಿ.ರಾಜನ್, ಎಸ್.ರಾಮಚಂದ್ರ, ಉಮ್ಮರ್ ಬೋರ್ಕಳ, ಅಬ್ದುಲ್ಲ ಕಜೆ, ಬಿ.ಚಂದಪ್ಪ ಮಾಸ್ತರ್, ಹರಿಶ್ಚಂದ್ರ ಮಂಜೇಶ್ವರ, ಹಮೀದ್ ನೆಲ್ಯಾಡಿ, ಹನೀಫ್ ಪೊಸೋಟು, ಯಾಕೂಬ್ ಕುಂಜತ್ತೂರು, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬಶೀರ್ ಕನಿಲ ಮೊದಲಾದವರು ಉಪಸ್ಥಿತರಿದ್ದು ಸಲಹೆ-ಸೂಚನೆಗಳನ್ನು ನೀಡಿ ಮಾತನಾಡಿದರು. ಯೋಗೀಶ್ ಕುಂಜತ್ತೂರು, ಚಿತ್ರಾವತಿ ಅಂಜರೆ, ಶ್ರೀಧರ ಆರ್.ಕೆ, ಶಾಫಿ ಮಾಸ್ತರ್, ಹರೀಶ್ ಟೈಲರ್, ಗಂಗಾಧರ, ರಾಮದಾಸ್ ಬಡಾಜೆ, ಅನ್ಸಾರ್ ಮೊದಲಾದವರು ಉಪಸ್ಥಿತರಿದ್ದರು.
ಮಂಜೇಶ್ವರ ಅಭಿವೃದ್ದಿ ಸಮಿತಿಯ ಎಂ.ಕೆ.ಮಜೀದ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹೋರಾಟ ಸಂಬಂಧಿಯಾಗಿ ಅಂತಿಮ ತೀರ್ಮಾನ ಕೈಗೊಳ್ಳಲು 10 ಮಂದಿ ಸದಸ್ಯರುಗಳ ತಾತ್ಕಾಲಿಕ ಸಮಿತಿಯನ್ನು ಮಜೀದ್ ಎಂ.ಕೆ ಅವರ ಸಂಚಾಲಕತ್ವದಲ್ಲಿ ಆಯ್ಕೆ ಮಾಡಲಾಯಿತು. ಜನಪ್ರತಿನಿಧಿಗಳ ಸಮಾಗಮ, ವಿವಿಧ ಕ್ಲಬ್-ಸಂಘಟನೆಗಳ ಪ್ರತ್ಯೇಕ ಸಮಾವೇಶವನ್ನು ಸಂಘಟಿಸಿ ಹೋರಾಟವನ್ನು ಸಮಗ್ರ ಯಶಸ್ಸಿನತ್ತ ಮುನ್ನಡೆಸಲು ನಿರ್ಧರಿಸಲಾಯಿತು.




