ಹೋರಾಟದ ಮೂಲಕ ಸೌಲಭ್ಯಗಳನ್ನು ಪಡೆಯಬೇಕು-ಕೆ.ಭಾಸ್ಕರ ಕಾಸರಗೋಡು -ಅಂಗನವಾಡಿ ಕನ್ನಡ ಮಾಧ್ಯಮ ಅಧ್ಯಾಪಕಿಯರ ಹಾಗು ಸಹಾಯಕಿಯರ ಸಮಾಲೋಚನಾ ಸಭೆ
0
ಮಾರ್ಚ್ 15, 2019
ಉಪ್ಪಳ: ಸಂಘಟಿತರಾಗಿ ಹೋರಾಟ ಮಾಡಿದರೆ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆಯೆಂದು ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಅಭಿಪ್ರಾಯಪಟ್ಟರು.
ಉಪ್ಪಳ ಪಂಚಮಿ ಹಾಲ್‍ನಲ್ಲಿ ಇತ್ತೀಚೆಗೆ ಜರಗಿದ ಮಂಜೇಶ್ವರ ತಾಲೂಕು ಅಂಗನವಾಡಿ ಕನ್ನಡ ಮಾಧ್ಯಮ ಅಧ್ಯಾಪಕಿಯರ ಹಾಗು ಸಹಾಯಕಿಯರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಕನ್ನಡಿಗರಾದ ನಾವು ನಮ್ಮ ಹಕ್ಕುಗಳಿಗಾಗಿ ಯಾರ ಮುಂದೆಯೂ ಯಾಚಿಸುವ ಅಗತ್ಯವಿಲ್ಲವೆಂದು, ಅದು ನಮ್ಮ ಮೂಲಭೂತ ಹಕ್ಕುಗಳಾಗಿರುವುದರಿಂದ ನ್ಯಾಯಯುತವಾಗಿ ನಮಗೆ ಲಭಿಸಬೇಕಾದ ಸವಲತ್ತುಗಳಾಗಿದೆಯೆಂದು ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಈ ಸಂದರ್ಭ ತಿಳಿಸಿದರು.
ಅಂಗನವಾಡಿ ಮಕ್ಕಳಿಗೆ ಮಾತೃ ಭಾಷೆಯಾದ ಕನ್ನಡದಲ್ಲಿಯೇ ಕಲಿಸುವುದರಿಂದ ಅವರಲ್ಲಿ ನಮ್ಮ ಸಂಸ್ಕøತಿ ಬೆಳೆಸಲು ಸಾಧ್ಯವೆಂದು ಕನ್ನಡ ಸಾಹಿತ್ಯ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ. ಭಟ್ ಹೇಳಿದರು.
ಅಧ್ಯಾಪಕರ ಮತ್ತು ಸಹಾಯಕಿಯರ ಸಭೆಯಲ್ಲಿ ಈ ಪ್ರದೇಶದ ಅಂಗನವಾಡಿ ನೌಕರರು ಅನುಭವಿಸುವ ನರಕ ಯಾತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ಕುರಿತು ಮುಂದಿನ ದಿನಗಳಲ್ಲಿ ಸಭೆ ಸೇರಿ ಸಂಘಟನೆ ಬಲ ಪಡಿಸುವ ಮೂಲಕ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಯಾವುದೇ ರಾಜಕೀಯ ಪಕ್ಷದಲ್ಲಿದ್ದರೂ ಕನ್ನಡ ನೌಕರರ ಸಮಸ್ಯೆಗಳಿಗೆ ಸ್ಪಂದಿಸಲು ರಾಜಕೀಯ ಮರೆತು ಸಂಘಟಿತರಾಗಲು ತೀರ್ಮಾನಿಸಲಾಯಿತು.
ಕನ್ನಡ ಹೋರಾಟ ಸಮಿತಿಯ ನಾಯಕರಾದ ದಿನೇಶ ಚೆರುಗೋಳಿ, ಸತೀಶ ಕೂಡ್ಲು, ಗಣೇಶ್ ಪ್ರಸಾದ್ ಮೊದಲಾದವರು ಸಭೆಯಲ್ಲಿ ಅಭಿಪ್ರಾಯ ಮಂಡಿಸಿದರು. ಶೋಭಾ ಸಭೆಯ ಅಧ್ಯಕ್ಷತೆ ವಹಿಸಿದರು. ಜಲಜಾಕ್ಷಿ ಸ್ವಾಗತಿಸಿ, ರೂಪ ವಂದಿಸಿದರು.

