ಕುಂಬಳೆ: ಬಿರುಸಿನ ಮಳೆಗೆ ಹಾನಿಗೊಂಡಿರುವ ಕುಂಬಳೆ ಗ್ರಾಮ ಪಂಚಾಯತಿ ಉಜಾರು ಕೊಡಿಯಮ್ಮೆ ರಸ್ತೆಯ ಸೇತುವೆ ಪುನರ್ ನಿರ್ಮಾಣ ಶೀಘ್ರದಲ್ಲೇ ನಡೆಯಲಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ತಿಳಿಸಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷರ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಬುಧವಾರ ನೀಡಿದ ಭೇಟಿಯ ವೇಳೆ ಅವರು ಈ ಬಗ್ಗೆ ಭರವಸೆ ನೀಡಿ ಮಾತನಾಡಿದರು.
ಸ್ಥಳೀಯರು ಅನುಭವಿಸುತ್ತಿರುವ ತೊಂದರೆಗಳು ಸೇತುವೆ ಪುನರ್ ನಿರ್ಮಾಣ ಮೂಲಕ ಪರಿಹಾರಗೊಳ್ಳಲಿವೆ ಎಂದು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಪಿ.ರಾಜ್ ಮೋಹನ್ ತಿಳಿಸಿದರು.
2018-19ರ ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ಈ ಸೇತುವೆ ಮತ್ತು ರಸ್ತೆಯ ಕಾಮಗಾರಿ ನಡೆಯಲಿದೆ. ಕೆಲವು ತಾಂತ್ರಿಕ ಸಮಸ್ಯೆಗಳ ಪರಿಣಾಮ ಟೆಂಡರ್ ಪ್ರಕ್ರಿಯೆಗಳು ನಡೆಯದೇ ಉಳಿದಿತ್ತು. ಈಗ ಅದೆಲ್ಲವೂ ಪರಿಹಾರವಾಗಿ ಶೀಘ್ರದಲ್ಲೇ ಟೆಂಡರ್ ಕ್ರಮಗಳು ಪೂರ್ಣಗೊಳ್ಳಲಿವೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ತಿಳಿಸಿದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ, ಅಭಿವೃದ್ಧಿ ಸ್ಥಾಯೀ ಸಮಿತಿಯ ಮಾಜಿ ಅಧ್ಯಕ್ಷ ಅಶ್ರಫ್ ಕೊಡಿಯಮ್ಮೆ ಮೊದಲಾದವರು ಜೊತೆಗಿದ್ದರು.

