ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿ 2018-19ನೇ ವಾರ್ಷಿಕ ಯೋಜನೆಯ ಅಂಗವಾಗಿ ಮಾನ್ಯದಲ್ಲಿ ನೂತನವಾಗಿ ನಿರ್ಮಿಸಿದ ಪರಿಶಿಷ್ಟ ಜಾತಿ (ಎಸ್.ಸಿ.) ವನಿತಾ ಭವನವನ್ನು ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಶುಕ್ರವಾರ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ವನಿತಾ ಭವನವನ್ನು ಪಂಚಾಯತಿ ಯೋಜನೆಯ 10ಲಕ್ಷದ 70 ಸಾವಿರ ಅನುದಾನದಲ್ಲಿ ನಿರ್ಮಿಸಲಾಗಿದೆ. ಹೆಚ್ಚಿನ ಸೌಕರ್ಯವನ್ನು ಒದಗಿಸಿ ಮಹಿಳಾ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಮಹಿಳೆಯರು ಕೈಗೊಳ್ಳುವ ವಿವಿಧ ಚಟುವಟಿಕೆಗಳಿಗೆ ಭವನವನ್ನು ಉಪಯೋಗಿಸಿಕೊಳ್ಳಬಹುದು. ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಮಾತ್ರ ಇಂತಹ ಕೆಲಸಗಳು ಸುಸೂತ್ರವಾಗಿ ಸಾಗಿ ಉತ್ತಮ ರೀತಿಯ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಿದಲ್ಲಿ ಮಹಿಳೆಯರ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಬದಿಯಡ್ಕ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಝೈಬುನ್ನಿಸಾ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಸ್. ಅಹಮ್ಮದ್, ಬದಿಯಡ್ಕ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅನ್ವರ್ ಓಝೋನ್, ಮುಹಮ್ಮದ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಸಿ.ಡಿ.ಎಸ್. ಅಧ್ಯಕ್ಷೆ ಸುಧಾ ಜಯರಾಂ, ಎ.ಡಿ.ಸಿ ಸದಸ್ಯರಾದ ಎಂ.ಎಚ್. ಜನಾರ್ದನ, ಖಾದರ್ ಮಾನ್ಯ, ಸಿ.ಡಿ.ಎಸ್ ಸದಸ್ಯೆ ಅನಸೂಯ, ಕೃಷ್ಣ ಭಟ್ ವಳಕುಂಜ, ಎ.ಡಿ.ಎಸ್ ಅಧ್ಯಕ್ಷೆ ಲಲಿತ ಮಾನ್ಯ, ವಿವಿಧ ಕ್ಲಬ್‍ಗಳ ಸದಸ್ಯರು, ಕುಟುಂಬಶ್ರೀ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆರೋಗ್ಯ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ಬದಿಯಡ್ಕ ಗ್ರಾ.ಪಂ. ಕಾರ್ಯದರ್ಶಿ ಎಂ. ಪ್ರದೀಪನ್ ವಂದಿಸಿದರು.



