HEALTH TIPS

ಸಮರಸ ಶಬ್ದಾಂತರಂಗ ಸೌರಭ-27-ಬರಹ:ಶ್ರೀವತ್ಸ ಜೋಶಿ ವಾಶಿಂಗ್ಟನ್ ಡಿ.ಸಿ.

                      ಇಂದಿನ  ಮೂರು ಟಿಪ್ಪಣಿಗಳು:  
೧. ‘ಸರಕಾರಿ ಗಂಡುಮಕ್ಕಳ ಶಾಲೆ’ಗಳನ್ನು ಕಟ್ಟಬಾರದುಕೆಡವಬೇಕು.

ಗಾಬರಿಯಾಗಬೇಡಿ! ನಿಜವಾದ ಶಾಲೆಗಳ ಬಗ್ಗೆ ಅಲ್ಲ ಈ ಮಾತು. ‘ಸರಕಾರಿ ಗಂಡುಮಕ್ಕಳ ಶಾಲೆ’ ಎಂಬ ರೀತಿಯ ಪದಪ್ರಯೋಗಗಳನ್ನು ಶಿಷ್ಟ ಬರವಣಿಗೆಯಲ್ಲಿ ಸಾಧ್ಯವಾದಷ್ಟೂ ಮಟ್ಟಿಗೆ ಕಡಿಮೆಗೊಳಿಸಬೇಕು ಎಂಬರ್ಥದಲ್ಲಿ ಹೇಳಿದ್ದು. ಕೆಲವೊಮ್ಮೆ ನಮಗರಿವಿಲ್ಲದಂತೆಯೇ ವಾಕ್ಯ ಆ ರೀತಿ ಆಗುತ್ತದೆ. ಬರೆದಾದ ಮೇಲೆ ಒಂದೆರಡು ಸಲ ಓದಿ ನೋಡಬೇಕು ಎನ್ನುವುದು ಬರೀ ಕಾಗುಣಿತ ದೋಷವ್ಯಾಕರಣ ದೋಷಗಳನ್ನು ಸರಿಪಡಿಸುವುದಕ್ಕಷ್ಟೇ ಅಲ್ಲಪ್ರತಿಯೊಂದು ವಾಕ್ಯದಲ್ಲೂಬಳಕೆಯಾದ ಪದಗಳುಅವುಗಳ ರೂಪ ಮತ್ತು ಸ್ಥಾನಗಳು ವಾಕ್ಯದ ನಿಖರತೆಗೆ ಅಡ್ಡಿಯಾಗುತ್ತಿಲ್ಲ ಎಂದು ದೃಢಪಡಿಸಲಿಕ್ಕೂ “ಬರೆದಾದ ಮೇಲೆ ಒಂದೆರಡು ಸಲ ಓದಿ ನೋಡು" ನೆರವಾಗುತ್ತದೆ. ಕೆಲವು ಉದಾಹರಣೆಗಳನ್ನು ಗಮನಿಸೋಣ:


ಅ) “8mm ಎಂಬ ಜಗ್ಗೇಶ್ ನಟಿಸಿರುವ ಸಿನಿಮಾ 8 ತೊಟ್ಟಕ್ಕಲ್ ಎಂಬ ತಮಿಳು ಸಿನಿಮಾದ ರಿಮೇಕ್..."
ಇದರಲ್ಲಿ ‘8mm ಎಂಬ ಜಗ್ಗೇಶ್’ ಅಂದ್ರೇನುಅದಕ್ಕಿಂತ, ‘ಜಗ್ಗೇಶ್ ನಟಿಸಿರುವ 8mm ಎಂಬ ಸಿನಿಮಾ...’ ಎಂದು ಬರೆದರೆ ಹೆಚ್ಚು ಸ್ಪಷ್ಟತೆ ಇರುತ್ತದೆ.

ಆ) “ಈ ಮೊದಲು ಚಾನೆಲ್‌ ಒಂದಕ್ಕೆ ಮಾತನಾಡುತ್ತ ಮುಖ್ಯಮಂತ್ರಿ ತಿಳಿಸಿದರು."
ಇದು, `speaking to a channel' ಎನ್ನುವುದರ ಕನ್ನಡ ರೂಪ. ಆದರೆ ಒಂದನೆಯ (serial number 1) ಚಾನೆಲ್‌ಗೆ ಎಂಬ ಅರ್ಥವೂ ಬರುತ್ತದೆ! ಹಾಗಾಗಿ, ‘ಈ ಮೊದಲು ಒಂದು ಚಾನೆಲ್‌ಗೆ (ಅಥವಾಚಾನೆಲ್ ಜೊತೆಗೆ) ಮಾತನಾಡುತ್ತ ಮುಖ್ಯಮಂತ್ರಿ ತಿಳಿಸಿದರು’ ಎಂದು ಬರೆದರೆ ಸ್ಪಷ್ಟತೆ ಹೆಚ್ಚು. ‘ಚಾನೆಲೊಂದಕ್ಕೆ, ‘’ವಾಹಿನಿಯೊಂದಕ್ಕೆ’ ಎಂದು ಬರೆಯುವುದೂ ಒಳ್ಳೆಯ ಕ್ರಮ. ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ‘ಒಂದಕ್ಕೆ’ ಅಂದರೆ ಮೂತ್ರವಿಸರ್ಜನೆ. ಆ ದೃಷ್ಟಿಯಿಂದಲೂ ‘ಒಂದಕ್ಕೆ’ ಪದ ಅನಗತ್ಯವಾಗಿ ವಾಕ್ಯದಲ್ಲಿ ನುಸುಳದಂತೆ ನೋಡಿಕೊಳ್ಳಬೇಕು.

ಇ) “ಚಿಕ್ಕಂದಿನಲ್ಲಿ ಹಾಸಿಗೆಯಲ್ಲಿ ಮೂತ್ರ ಮಾಡುವ ಅಭ್ಯಾಸವಿದ್ದ ನನ್ನ ಅಕ್ಕನ ಮಗ..."
ಅಂದರೆ ಚಿಕ್ಕಂದಿನಲ್ಲಿ bed-wetting ಅಭ್ಯಾಸವಿದ್ದದ್ದು ನನಗೆನನ್ನ ಅಕ್ಕಳಿಗೆಅಥವಾ ಅಕ್ಕಳ ಮಗನಿಗೆಇಂಥ ಗೊಂದಲ ಬರಬಾರದೆಂದಿದ್ದರೆ "ನನ್ನ ಅಕ್ಕಳ ಮಗನಿಗೆ ಚಿಕ್ಕಂದಿನಲ್ಲಿ ಹಾಸಿಗೆಯಲ್ಲಿ ಉಚ್ಚೆಹೊಯ್ಯುವ ಅಭ್ಯಾಸವಿತ್ತು." ಎಂದು ಬರೆದು ಆಮೇಲೆ ಮುಂದಿನ ವಾಕ್ಯ ಬರೆಯುವುದೊಳ್ಳೆಯದು.

ಈ) "ಮಹಿಳೆಯರ ಭಾರ ಎತ್ತುವ ಸ್ಪರ್ಧೆಯನ್ನು ಮುಂದೂಡಲಾಗಿದೆ."
ಭಾರ ಎತ್ತುವ ಸ್ಪರ್ಧೆ ಮಹಿಳೆಯರಿಗೆ ಇದ್ದದ್ದು. ‘ಮಹಿಳೆಯರ ಭಾರ’ ಎತ್ತುವ ಸ್ಪರ್ಧೆ ಅಲ್ಲ! ‘ರಾಜ್ಯ ಮಟ್ಟದ ಬೃಹತ್ ಮಹಿಳೆಯರ ಸಮಾವೇಶ’ ನಡೆದರೆ ಆಗ ‘ಮಹಿಳೆಯರ ಭಾರ ಎತ್ತುವ ಸ್ಪರ್ಧೆ’ಯನ್ನೂ ಅಲ್ಲಿ ಏರ್ಪಡಿಸಬಹುದು. :-)

ಉ) “ಡಕಾಯಿತನು ಸುಮಾರು ನೂರು ಕೇಜಿ ತೂಕದ ಮೀಸೆಯುಳ್ಳ ದಢೂತಿ ವ್ಯಕ್ತಿಯಾಗಿದ್ದನು."
ನೂರು ಕೇಜಿ ತೂಕ ಡಕಾಯಿತನದೇ ಹೊರತು ಆತನ ಮೀಸೆಯದಲ್ಲ! ವೀರಪ್ಪನ್ ವಿಷಯ ಮಾತಾಡುತ್ತೀರಾದರೆ ಆತನ ದೇಹಕ್ಕಿಂತ ಮೀಸೆಯೇ ಹೆಚ್ಚು ತೂಕವಿತ್ತೋ ಏನೋ!

====
೨. ಕುಷ್ಮಾಂಡ ಎಂಬ ಬೂದುಗುಂಬಳ

ಕಾಶಿಹಲ್ವಾ ಅಂತ ಈಗೀಗ ಹೆಚ್ಚು ಜನಪ್ರಿಯವಾಗಿರುವ ಸಿಹಿತಿಂಡಿಬೂದುಗುಂಬಳದ ತಿರುಳು ಮತ್ತು ಸಕ್ಕರೆಪಾಕ ಸೇರಿ ಆಗಿರುವಂಥದು. ‘ಆಗ್ರಾ ಪೇಢಾ’ ಎಂದು ಉತ್ತರಭಾರತದಲ್ಲಿ ಸಿಗುವಂಥದೂ ಅದೇ ರೀತಿಯದುಬೂದುಗುಂಬಳವನ್ನು ಸಂಸ್ಕೃತದಲ್ಲಿ ‘ಕುಷ್ಮಾಂಡ’ ಎನ್ನುತ್ತಾರೆ. ಕೂಷ್ಮಾಂಡ ಎಂದು ದೀರ್ಘ ಎಳೆಯಬೇಕಿಲ್ಲ. ‘ತುಸು ಬೆಚ್ಚಗೆ ಇರುವ ಮೊಟ್ಟೆ’ ಎಂಬ ಅರ್ಥದಲ್ಲಿ ಸಂಸ್ಕೃತದಲ್ಲಿ ‘ಕು’ (ಸ್ವಲ್ಪ) + ಉಷ್ಮ (ಬೆಚ್ಚಗಿನ) + ಅಂಡ (ಮೊಟ್ಟೆಬ್ರಹ್ಮಾಂಡ) ಎಂಬ ವ್ಯುತ್ಪತ್ತಿ ಈ ಪದದ್ದು ಎನ್ನುತ್ತಾರೆ ಕೆಲವು ವಿದ್ವಾಂಸರು. ಪರೀಕ್ಷೆಯಲ್ಲಿ ಸೊನ್ನೆ ಅಂಕಗಳು ಬಂದರೆ ‘ದೊಡ್ಡ ಕುಂಬಳಕಾಯಿ ಸಿಕ್ಕಿತು’ ಎಂದು ಹೇಳುತ್ತೇವಲ್ಲಉತ್ತರಪತ್ರಿಕೆಯಲ್ಲಿ ಮೇಷ್ಟ್ರು ದೊಡ್ಡದೊಂದು ಸೊನ್ನೆಯನ್ನು ಬರೆದದ್ದು ಕುಂಬಳಕಾಯಿಯ ಚಿತ್ರದಂತೆ ಕಾಣಿಸುವುದರಿಂದ ಆ ನುಡಿಗಟ್ಟು ಹುಟ್ಟಿರಬಹುದು. ನವರಾತ್ರಿ ಹಬ್ಬದಲ್ಲಿ ಆಯುಧಪೂಜೆ ವೇಳೆ ದೇವಿಗೆ ಕುಂಬಳಕಾಯಿ ಸಮರ್ಪಣೆಯ ಹಿಂದೆಯೂ ಈ ಬ್ರಹ್ಮಾಂಡ ಕಲ್ಪನೆಯೇ ಇರುವುದೆಂದು ಅಂದಾಜಿಸಬಹುದು.

ಇದಕ್ಕೂ ಸ್ವಚ್ಛ ಭಾಷೆ ಕಲಿಕೆಗೂ ಏನು ಸಂಬಂಧಏನಿಲ್ಲಆದರೆ ಪದಮೂಲಭಾಷೆ-ಬಳಕೆ ವಿಚಾರಗಳಲ್ಲಿ ‘ತಲೆ ತಿನ್ನುವ’ ವಿಚಾರಗಳಿಗಿಂತ ಈ ರೀತಿ ‘ತಿನ್ನುವ’ ವಿಚಾರಗಳನ್ನು ಸೇರಿಸಿದರೆ ಕಲಿಕೆಯಲ್ಲಿ ಆಸಕ್ತಿ ಉಳಿಯುತ್ತದೆಬೆಳೆಯುತ್ತದೆ.

====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು:

ಅ) ಗಾಢಾಂಧಕಾರ ಸರಿ. ಗಾಢ ಮತ್ತು ಅಂಧಕಾರ ಎರಡು ಕಡೆ ಮಹಾಪ್ರಾಣ ಅಕ್ಷರ ಬರುತ್ತದೆ. ಕಗ್ಗತ್ತಲು ಎಂಬ ಅರ್ಥ.
ಆ) ನಿನ್ನೆ ಸರಿ. ನೆನ್ನೆ ಎಂದು ಆಡುಮಾತಿನಲ್ಲಿ ಬಳಕೆಯಿದೆಯಾದರೂ ಶಿಷ್ಟ ಬರವಣಿಗೆಯಲ್ಲಿ ನಿನ್ನೆ ಎಂದು ಬರೆಯುವುದೊಳ್ಳೆಯದು.
ಇ) ವಿರುದ್ಧ ಸರಿ. ವಿರೋಧ ಸರಿ. ಮೊದಲನೆಯ ಪದದಲ್ಲಿ ಅಲ್ಪಪ್ರಾಣ ಅಕ್ಷರಕ್ಕೆ ಮಹಾಪ್ರಾಣ ಒತ್ತಕ್ಷರ. ಎರಡನೆಯ ಪದದಲ್ಲಿ ಮಹಾಪ್ರಾಣ ಅಕ್ಷರ ‘ಧ’.
ಈ) ಎಡಪಂಥೀಯ ಸರಿ. (ಸ್ಪೆಲ್ಲಿಂಗ್ ಮಾತ್ರ!) ಎಡಪಂತೀಯ ಎಂದು ಬರೆಯುವುದು ತಪ್ಪು. ಪಂಥ (ಮಾರ್ಗ ಎಂಬ ಅರ್ಥ)ದಿಂದ ಬಂದದ್ದು ಪಂಥೀಯ.
ಉ) ಗೋಷ್ಠಿ ಸರಿ. (ಸಭೆಸಮೂಹಗುಂಪುಪರಸ್ಪರ ಮಾತುಕತೆಸಂಭಾಷಣೆ ಎಂಬೆಲ್ಲ ಅರ್ಥಗಳಿವೆ). ಗೋಷ್ಟಿ ಎಂದು ಬರೆದರೆ ತಪ್ಪು.
    ಬರಹ:ಶ್ರೀವತ್ಸ ಜೋಶಿ ವಾಶಿಂಗ್ಟನ್ ಡಿ.ಸಿ. 

===========

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries