ಪುಸ್ತಕ: ಪತ್ತ್ ಪನಿ ತೀರ್ಥೊ
ಲೇಖಕರು: ಕುಶಾಲಾಕ್ಷಿ ವಿ. ಕುಲಾಲ್.ಕಣ್ವತೀರ್ಥ
ಬರಹ: ಚೇತನಾ ಕುಂಬಳೆ
ತುಳು ಭಾಷೆ ತುಳು ಸಂಸ್ಕೃತಿಯ ಮಹತ್ವವನ್ನು ತಮ್ಮ ಕವನ ಹಾಗೂ ಲೇಖನಗಳ ಮೂಲಕ ಪರಿಚಯಿಸುತ್ತಿರುವ ಕುಶಾಲಾಕ್ಷಿ ವಿ ಕುಲಾಲ್ ಅವರು ಕಾಸರಗೋಡಿನ ತುಳು ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡ ಪ್ರಮುಖ ಲೇಖಕಿ. ಮಂಜೇಶ್ವರದ ಕಣ್ವತೀರ್ಥದವರಾದ ಇವರು ಸುರೂತ ಪನಿ, ರಡ್ ಪನಿ, ಪನಿ ಮುತ್ತು ಮಾಲೆ ಎಂಬ ಕವನ ಸಂಕಲನಗಳನ್ನು ತುಳು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ. ಇತ್ತೀಚೆಗಷ್ಟೇ ಬೆಳಕು ಕಂಡ ತುಳು ಲಿಪಿಯನ್ನು ಕಲಿತು ಆಸಕ್ತರಿಗೂ ಕಲಿಸಿಕೊಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪನಿ ಮುತ್ತು ಮಾಲೆ ಕವನ ಸಂಕಲನದಲ್ಲಿ ಕವಿತೆಗಳನ್ನು ತುಳು ಹಾಗೂ ಕನ್ನಡ ಎರಡು ಲಿಪಿಗಳಲ್ಲೂ ಮುದ್ರಿಸಿರುವುದು ಈ ಸಂಕಲನದ ವೈಶಿಷ್ಟ್ಯವಾಗಿದೆ ಹಾಗೂ ಇದರ ಮೂಲಕ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ್ದಾರೆ. ತುಳು ಲಿಪಿ ಕಲಿಯುವವರಿಗೆ ಇದು ಕೈಪಿಡಿಯಾಗುವುದರಲ್ಲಿ ಸಂಶಯವಿಲ್ಲ.
ಕಣ್ವ ಪ್ರಕಾಶನದಿಂದ ಪ್ರಕಟಗೊಂಡ 'ಪತ್ ಪನಿ ತೀರ್ಥೊ' ತುಳು ಭಾಷೆಯಲ್ಲಿರುವ ಕಿರು ಲೇಖನಗಳ ಸಂಗ್ರಹ. ಈ ಸಂಕಲನಕ್ಕೆ ಶಂಕರ ಕುಂಜತ್ತೂರು ಅವರು ಮುನ್ನುಡಿ ಬರೆದಿದ್ದಾರೆ.ಇದರಲ್ಲಿ ತುಳು ಸಂಸ್ಕೃತಿ, ಆಚಾರ- ವಿಚಾರ, ಹಬ್ಬಗಳು, ನಂಬಿಕೆಗಳು ಹೀಗೆ ಹಲವು ವಿಷಯಗಳನ್ನೊಳಗೊಂಡ 10 ಅಧ್ಯಾಯಗಳಿವೆ. ತುಳುನಾಡಿನಲ್ಲಿ ತೀರ್ಥ ಪವಿತ್ರವಾದದ್ದು. ಅದನ್ನು ಭಕ್ತಿಯಿಂದ ಸ್ವೀಕರಿಸಿ ಕಣ್ಣಿಗೊತ್ತಿ ಕುಡಿಯುವ ಕ್ರಮ. ಈ ಸಂಕಲನದ ಪ್ರಥಮ ಅಧ್ಯಾಯದಲ್ಲಿ, ಮಂಜೇಶ್ವರದಲ್ಲಿ ಪ್ರಸಿದ್ಧವಾಗಿರುವ ಕಣ್ವ ತೀರ್ಥ, ರಾಮ ತೀರ್ಥ,ಚಕ್ರ ತೀರ್ಥ, ಶೇಷ ತೀರ್ಥ, ಮತ್ಸ್ಯ ತೀರ್ಥ ಎಂಬ ಪಂಚ ತೀರ್ಥಸ್ಥಳಗಳ ಐತಿಹ್ಯವನ್ನು ನೀಡಿದ್ದಾರೆ. ಪ್ರತಿಯೊಂದು ತೀರ್ಥಸ್ಥಳಗಳ ಹಿಂದೆ ಒಂದೊಂದು ರೋಚಕವಾದ ಕಥೆಯಿದ್ದು ಓದುಗರಲ್ಲಿ ಕುತೂಹಲ ಮೂಡಿಸುತ್ತದೆ. ಇದರ ಮೂಲಕ ಪ್ರಾದೇಶಿಕ ಚರಿತ್ರೆಗೆ ಒತ್ತು ನೀಡಿರುವುದು ಗಮನಾರ್ಹ.
ತುಳುನಾಡಿನಲ್ಲಿ ಕಾರ್ತೆಲ್ ತಿಂಗಳು ಮುಗಿದು ನಂತರ ಬರುವುದೇ ಆಟಿ ತಿಂಗಳು. ಹಿಂದಿನ ಕಾಲದಲ್ಲಿ ಆಟಿ ತಿಂಗಳೆಂದರೆ ಹೊರಗೆ ಬಿಡದೇ ಸುರಿಯುವ ಜಡಿಮಳೆ. ಹಾಗಾಗಿ ಈ ತಿಂಗಳಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿರಲಿಲ್ಲ. ಹಿಂದೆ ಇದ್ದ ಅವಿಭಕ್ತ ಕುಟುಂಬದ ವ್ಯವಸ್ಥೆ, ಈ ತಿಂಗಳಲ್ಲಿ ತಿನ್ನುತ್ತಿದ್ದ ವೈವಿಧ್ಯಮಯ ತಿನಿಸುಗಳನ್ನು ಪರಿಚಯಿಸುತ್ತಾರೆ. ಈಗ ನಮಗೆ ಆಟಿ ತಿಂಗಳೆಂದರೆ ನೆನಪಾಗುವುದು ಪತ್ರೊಡೆ ಮಾತ್ರ. ಆಟಿ ಅನಿಷ್ಟದ ತಿಂಗಳಾದ್ದರಿಂದ ಯಾವುದೇ ಶುಭಕಾರ್ಯಗಳು ನಡೆಯುವುದಿಲ್ಲ.ಆದರೂ ಈ ತಿಂಗಳಲ್ಲಿ ನಡೆಸುವ ಕೆಲವೊಂದು ಆಚರಣೆಗಳಿವೆ. ಸತ್ತವರಿಗೆ ಬಡಿಸುವ ಕ್ರಮವಿದೆ, ಹೊಸತಾಗಿ ಮದುವೆಯಾದ ಹೆಣ್ಣು ತವರಿಗೆ ಬರುವ ಪದ್ಧತಿಯಿದೆ. ಆಟಿ ಅಮಾವಾಸ್ಯೆಯಂದು ಪಾಲೆಯ ಕಷಾಯ ಕುಡಿಯುತ್ತಾರೆ. ಅದರಲ್ಲಿ ಔಷಧೀಯ ಅಂಶವಿದ್ದು, ಅದನ್ನು ಕುಡಿದರೆ ಒಂದು ವರ್ಷದ ತನಕ ಬೇರೆ ಔಷಧಿ ತಗೊಳುವ ಅವಶ್ಯಕತೆ ಬರುವುದಿಲ್ಲ ಎಂಬ ನಂಬಿಕೆಯಿತ್ತು.
ಆಟಿ ತಿಂಗಳಲ್ಲಿ ಹೊರಗಿನ ಕೆಲಸ ಮಾಡಲಾಗದ ಕಾರಣ ಜನರು ಆಟದ ಕಡೆಗೆ ಗಮನ ಕೊಡುತ್ತಿದ್ದರು. ಪುರುಷರು ಹೆಚ್ಚಾಗಿ ಹೊರಾಂಗಣ ಆಟಗಳನ್ನಾಡುತ್ತಿದ್ದರೆ, ಸ್ತ್ರೀಯರು ಒಳಾಂಗಣ ಆಟವಾಡುತ್ತಿದ್ದರು. ಒಳಾಂಗಣ ಆಟಗಳಲ್ಲಿ ಒಂದು ಜನಪ್ರಿಯ ಆಟವೇ ಚೆನ್ನೆಮಣೆ. ಆಟಿ ತಿಂಗಳಲ್ಲಿ ಚೆನ್ನೆಯ ಮಣೆಯನ್ನು ಅಟ್ಟದಿಂದ ಕೆಳಗಿಳಿಸಿ ಆಟವಾಡುವ ಕ್ರಮವಿತ್ತು. ಆದರೆ, ಈಗ ಇಂಥ ಆಟಗಳು ಮರೆಯಾಗುತ್ತಿದ್ದು, ಈಗಿನವರಿಗೆ ಈ ಆಟ ಆಡುವ ರೀತಿ ಗೊತ್ತೂ ಇಲ್ಲ. ಗೊತ್ತಿಲ್ಲದವರಿಗೆ ಅದರ ಗಮ್ಮತ್ತು ತಿಳಿದಿಲ್ಲ. ಗೊತ್ತಿರುವವರಿಗೆ ಅದನ್ನು ಮರೆಯುವಂತೆಯೂ ಇಲ್ಲ. ಈ ಆಟಕ್ಕೆ ಕವಡೆಕಾಯಿ, ಮಂಜಟ್ಟಿಕಾಯಿ ಹೊಂಗಾರಕನ ಕಾಯಿ ಉಪಯೋಗಿಸುತ್ತಾರೆ. ಈ ಆಟಕ್ಕೆ ಅದರದೇ ಆದ ನಿಯಮಗಳಿವೆ. ಹಾಗೆಯೇ ಕೆಲವೊಂದು ನಂಬಿಕೆಗಳೂ ಇವೆ. ಅಬಗ ದಾರಗ ಎಂಬ ಅಕ್ಕ ತಂಗಿಯರ ಕಥೆಯ ಮೂಲಕ ಈ ಆಟವನ್ನು ಅಕ್ಕ ತಂಗಿಯರು ಆಡಬಾರದೆಂದು ಹೇಳುತ್ತಾರೆ. ಅರಸ ಕೊಸ್ರಾಲ್ ಬಲ್ಲಾಳ್ ಹಾಗೂ ರಾಣಿ ಬಳಜೇಯಿ ಮಾಣಿಗರ ಕಥೆಯ ಮೂಲಕ ಗಂಡ ಹೆಂಡತಿ ಆಡಬಾರದೆಂಬ ನಂಬಿಕೆಯಿದೆ. ಹಿಗೆ ಇಂಥ ಆಟಗಳಲ್ಲಿ ತುಳುನಾಡಿನ ಸಾಂಸ್ಕೃತಿಕ ಬದುಕಿನ ವಿವರಗಳು ದಾಖಲಾಗಿರುತ್ತವೆ. ಈ ಆಟವನ್ನು ಆಟಿ ತಿಂಗಳಲ್ಲಿ ಮಾತ್ರ ಆಡಬೇಕೆಂದೂ ಬೇರೆ ದಿನಗಳಲ್ಲಿ ಆಡಬಾರದೆಂದೂ ಹೇಳುತ್ತಾರೆ. ಚೆನ್ನೆಮಣೆಯ ವಿಶೇಷತೆಯನ್ನೂ ಆಟದ ರೀತಿಯನ್ನೂ ವಿವರಿಸುತ್ತಾರೆ.
"ಆಟಿ ಆಡ ಆಡಾ ಸೋಣ ಓಡ ಓಡಾ
ಆಟಿದ ದೊಂಬುಗು ಆನೆದ ಬೆರಿಲ ಪುಡವು
ಆಟಿದ ತಿಡಿಲ್ಗ್ ಅಟ್ಟ ಪೊಲಿವು
ಸೋಣದ ತೆಡಿಲ್ಗ್ ಸೊಂಟ ಪೊಲಿವು
ಮಾಯಿದ ಬರ್ಸಗ್ ಮಲೆಬುಲೆವು
ಆಟಿದ ಬರ್ಸಗ್ ಅರಿಬುಲೆವು"
ಹೀಗೆ ಆಟಿಯ ಬಗ್ಗೆ ಪ್ರಚಲಿತದಲ್ಲಿರುವ ಮಾತುಗಳನ್ನು ಉಲ್ಲೇಖಿಸುತ್ತಾರೆ.
ವೀಳ್ಯದೆಲೆಯನ್ನು ತಿನ್ನುವುದರ ಉದ್ದೇಶವನ್ನೂ ತಿನ್ನುವ ರೀತಿಯನ್ನೂ 'ಬಚ್ಚಿರೆ' ಲೇಖನದಲ್ಲಿ ತಿಳಿಸಿಕೊಡುತ್ತಾರೆ.ಕರಾವಳಿಯ ತುಳುವರಲ್ಲಿ ಜನನದಿಂದ ಹಿಡಿದು ಮರಣದವರೆಗಿನ ಎಲ್ಲ ಶುಭ ಕಾರ್ಯಗಳಿಗೂ ವೀಳ್ಯದೆಲೆ ಅಡಿಕೆ ಬೇಕೇಬೇಕು. ಮಗು ಹುಟ್ಟಿದಾಗ,ಕಿವಿ ಚುಚ್ಚುವಾಗ, ಹೆಣ್ಣು ದೊಡ್ಡವಳಾಗುವಾಗ, ಮದುವೆ ನಿಶ್ಚಿತಾರ್ಥ, ವಿವಾಹ ದಿನ, ಸೀಮಂತ, ಮರಣ ಹೀಗೆ ಪ್ರತಿಯೊಂದು ಸಂದರ್ಭದಲ್ಲೂ ವೀಳ್ಯದೆಲೆಗೆ ಪ್ರಾಧಾನ್ಯತೆಯಿದೆ. ಪೂಜೆ, ನೇಮ, ಭೂತ ಹೀಗೆ ಧಾರ್ಮಿಕ ಕಾರ್ಯಗಳಲ್ಲೂ ವೀಳ್ಯದೆಲೆಯ ಅಗತ್ಯವಿದೆ.
"ಅವು ಬಜಿ ಪಟ್ಟ್ ದ್ ತಿನ್ಪುನ ಪಿರ್ತಿದ ಸೊತ್ತು... ಅಯಿಕ್ ಮಲ್ಲಾಯೆ ಬಡವೆ, ಜಾತಿ, ಪನ್ಪುನ ಅಂತರೊ ಇಜ್ಜಾಂಡ್" ಎಂದು ವೀಳ್ಯದೆಲೆಯ ಬಗ್ಗೆ ಹೇಳುವ ಮಾತಿನಲ್ಲಿ ತುಳುವರ ಮನಸ್ಸಿನ ಹಿರಿಮೆ ಗೋಚರಿಸುತ್ತದೆ. ವೀಳ್ಯದೆಲೆಯ ಬಗೆಗಿನ ನಂಬಿಕೆಗಳು ವೀಳ್ಯದೆಲೆಯನ್ನು ಬೆಳೆಸುವಲ್ಲಿ ಹಾಕುವ ಗೊಬ್ಬರಗಳು ಅದರ ವಿಶೇಷತೆಯನ್ನು ವಿವರಿಸುತ್ತಾರೆ. ಮುಟ್ಟಾದ ಹೆಣ್ಣು ವೀಳ್ಯದೆಲೆಯನ್ನು ಮುಟ್ಟಬಾರದೆಂಬ ಮಾಹಿತಿ ನೀಡುತ್ತಾರೆ. ವೀಳ್ಯದೆಲೆಯಲ್ಲಿ ಔಷಧೀಯ ಗುಣವಿದ್ದು, ಹೊಟ್ಟೆನೋವು, ವಾಯು ತೊಂದರೆಗಳಂಥ ಸಣ್ಣ ಪುಟ್ಟ ಸಮಸ್ಯೆಗಳೂ ದೂರವಾಗುತ್ತದೆ.
ಮುತ್ತೈದೆ ಹೆಣ್ಣಿನ ಸೌಭಾಗ್ಯವಾಗಿರುವ, ಲಕ್ಷ್ಮಿದೇವಿಯ ಪ್ರತಿರೂಪವಾಗಿರುವ ಕುಂಕುಮದ ಮಹತ್ವವನ್ನು ತಿಳಿಸಿಕೊಡುತ್ತಾರೆ.
'ಅಟಿಲ್' ಅಧ್ಯಾಯದಲ್ಲಿ ಅಡುಗೆ ಮನೆಯಲ್ಲಿ ತಯಾರಿಸುವ ಹಲವು ಬಗೆಯ ಆಹಾರ ಪದಾರ್ಥಗಳನ್ನೂ, ಅದಕ್ಕೆ ಬಳಸುತ್ತಿದ್ದ ಪಾತ್ರಗಳನ್ನೂ ಪರಿಚಯಿಸುತ್ತಾರೆ. ಮದುವೆಯ ಸಂದರ್ಭದಲ್ಲಿ ಎರಡು ಕುಟುಂಬಗಳು ಒಟ್ಟು ಸೇರುವಾಗ ಹೆಣ್ಣು ಗಂಡು ಒಂದಾಗುವಾಗ ಹಾಕುವ ಉಂಗುರವೇ ಒಡ್ಯುಂಗಿಲ ಅಥವಾ ಒಡ್ಡಿಂಗಿಲ. ಮದುವೆಯಾಗದ ಹೆಣ್ಣು ಇದನ್ನು ಧರಿಸಬಾರದೆಂಬ ನಿಯಮವಿದೆ. ಯಾಕೆಂದರೆ, ಈಗ ಕರಿಮಣಿಗಿರುವಷ್ಟು ಬೆಲೆ ಅಂದು ಒಡ್ಯುಂಗಿಲಕ್ಕಿತ್ತು. ಎನ್ನುತ್ತಾ ಅದರ ವೈಶಿಷ್ಟ್ಯತೆಯನ್ನು ತಿಳಿಸುತ್ತಾರೆ. ತುಳುನಾಡಿನ ಜನರು ಸಂಭ್ರಮದಿಂದ ಆಚರಿಸುವ ಕೆಡ್ಡಸ, ಕೆಡ್ಡಸದ ಬೇಟೆಗಳ ಮಾಹಿತಿಯನ್ನು ನೀಡುತ್ತಾರೆ. ಆಟಿ ಕಳೆದೊಡನೆ ಬರುವ ಮೊದಲ ಹಬ್ಬವೇ ನಾಗರಪಂಚಮಿ. ತುಳುನಾಡಿನಲ್ಲಿ ನಾಗಾರಾಧನೆಯೂ ಪ್ರಧಾನವಾಗಿದೆ. ಪಗ್ಗು ತಿಂಗಳಲ್ಲಿ ನಡೆಯುವ ತನು ತಂಬಿಲ, ಬನದ ವಿಶೇಷತೆ ಬನದ ಆಚಾರ, ಮನೆ ತುಂಬಿಸುವ ಶಾಸ್ತ್ರ ಹೀಗೆ ಹಲವಾರು ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತಾರೆ. ಒಟ್ಟಿನಲ್ಲಿ ತುಳು ಸಂಸ್ಕೃತಿ ಆಚಾರ ವಿಚಾರ, ಹಬ್ಬಗಳು, ನಂಬಿಕೆಗಳ ಬಗ್ಗೆ ತಿಳಿಸಿಕೊಡುವ ಈ ಲೇಖನಗಳ ಸಂಕಲನ ಸಣ್ಣ ಅಧ್ಯಯನಕ್ಕೆ ಕೈಪಿಡಿಯಾಗುತ್ತದೆ.
ಬರಹ:ಚೇತನಾ ಕುಂಬಳೆ




