ಉಪ್ಪಳ: ಕೇರಳದ ಇತರ ಜಿಲ್ಲೆಗಳನ್ನು ಹೋಲಿಸಿದರೆ ಗಡಿ ಗ್ರಾಮ ಮಂಜೇಶ್ವರ ಅಭಿವೃದ್ದಿಯಲ್ಲಿ 60 ವರ್ಷಗಳಷ್ಟು ಹಿಂದಿದೆ ಎಮದು ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಎ.ಕೆ.ನಸೀರ್ ಅವರು ತಿಳಿಸಿದರು.
ಮಂಜೇಶ್ವರ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಎನ್ ಡಿ ಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರ ಚುನಾವಣಾ ಪ್ರಚಾರದ ಭಾಗವಾಗಿ ಗುರುವಾರ ಪೈವಳಿಕೆ ಸಮೀಪದ ಜೋಡುಕಲ್ಲಿನಲ್ಲಿ ನಡೆದ ಸಾರ್ವಜನಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಚುನಾವಣೆಯಲ್ಲೂ ನೀಡಿರುವ ಭರವಸೆಗಳನ್ನು ಅವಲೋಕಿಸಿದಲ್ಲಿ ಎಡ-ಬಲ ರಂಗಗಳು ಬಣ್ಣದ ಮಾತುಗಳಿಂದ ಇಲ್ಲಿ ಜನವಂಚನೆ ಎಸಗುತ್ತಿದೆ. ಸ್ಥಳೀಯವಾಗಿ ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸುವ ಪಕ್ಷಗಳು ಅಧಿಕಾರದ ಮೋಹದಿಂದ ಕೇಂದ್ರದಲ್ಲಿ ಜೊತೆಯಾಗುತ್ತವೆ. ಆದರೆ ಅಭಿವೃದ್ದಿಯ ಅರ್ಥವನ್ನು ಗ್ರಹಿಸಿರುವ ಜನಸಾಮಾನ್ಯರು ಇದೀಗ ಮಂಜೇಶ್ವರ ಭವ್ಯ ಅಭಿವೃದ್ದಿ ಕಲ್ಪನೆಯೊಂದಿಗೆ ಬಿಜೆಪಿಗೆ ಮತನೀಡುವ ವಿಶ್ವಾಸ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಎಂ.ವೇಲಾಯುಧನ್, ಹಿಂದುಳಿದ ಜಾತಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಎ.ಕೆ.ಕಯ್ಯಾರ್, ಜಿಲ್ಲಾ ಉಪಾಧ್ಯಕ್ಷ ರಾಮಪ್ಪ ಮಂಜೇಶ್ವರ, ಜಿಲ್ಲಾ ಸಮಿತಿ ಸದಸ್ಯ ವಿಜಯಕುಮಾರ್ ರೈ,ಮಂಡಲ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಮಂಜೇಶ್ವರ, ಆದರ್ಶ ಬಿ.ಎಂ., ಮುರಳೀದರ ಯಾದವ್ ನಾಯ್ಕಾಪು, ಯುವ ಮೋರ್ಚಾದ ಜಿಲ್ಲಾಧ್ಯಕ್ಷ ರಾಜೇಶ್ ಕೈಂತಾರ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಉಪಸ್ಥಿತರಿದ್ದರು.





