ಉಪ್ಪಳ: ಜಿಲ್ಲೆಯ ಅತಿ ಹಳೆಯ ರೈಲು ನಿಲ್ದಾಣಗಳಲ್ಲಿ ಒಂದಾದ ಉಪ್ಪಳ ರೈಲು ನಿಲ್ದಾಣವು ಮೊದಲಿನಂತೆಯೆ ಕಾರ್ಯಾಚರಿಸಲಿದ್ದು, ಮುಚ್ಚುಗಡೆಯ ಭೀತಿಯ ಬಗ್ಗೆ ಸಾರ್ವಜನಿಕರು ಕಳವಳ ಪಡಬೇಕಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಕೆ.ಕೃಷ್ಣದಾಸ್ ಭರವಸೆ ನೀಡಿದರು.
ಉಪ್ಪಳ ರೈಲು ನಿಲ್ದಾಣ ಕಡೆಗಣಿಸಿ ಮುಚ್ಚುಗಡೆಗೊಳಿಸಲಾಗುತ್ತಿದೆ ಎಂಬ ಊಹಾಪೋಪಗಳ ಮಧ್ಯೆ ಬಿಜೆಪಿ ನೇತಾರರು ನೀಡಿದ್ದ ಮನವಿಗೆ ಸ್ಪಂದಿಸಿ ಬುಧವಾರ ಸಂಜೆ ಉಪ್ಪಳ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ನೆರೆದಿದ್ದ ಸಾರ್ವಜನಿಕರಿಗೆ ಭರವಸೆ ನೀಡಿ ಮಾತನಾಡಿದರು.
ತಾನು ರೈಲ್ವೇ ವಿಭಾಗೀಯ ಪ್ರಬಂಧಕರಿಗೆ ಮನವಿ ನೀಡಿದ್ದು, ಮೊದಲಿನಂತೆ ಕಾರ್ಯಾಚರಿಸುವ ಭರವಸೆ ಅವರು ನೀಡಿರುವರೆಂದು ತಿಳಿಸಿದರು. ನಿಲ್ದಾಣ ಪರಿಶೀಲನೆ ನಡೆಸಿದ ಅವರು ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ನಿಲ್ದಾಣದ ಸಮಗ್ರ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಅಲ್ಲದೆ ಯಾವುದೇ ರೈಲು ಗಾಡಿಗಳ ನಿಲುಗಡೆ ರದ್ದುಗೊಳಿಸಲಾಗುವುದಿಲ್ಲ ಎಂದು ತಿಳಿಸಿದರು. ಮಂಗಳೂರಿಂದ ಕಣ್ಣೂರಿಗೆ ಒಂದು ಮೆಮೋ ರೈಲು ಗಾಡಿ ಸಂಚರಿಸಲು, ಉಪ್ಪಳ ರೈಲು ನಿಲ್ದಾಣದ ಸಮಗ್ರ ಅಭಿವೃದ್ದಿ, ಮಂಜೇಶ್ವರ, ಕುಂಬಳೆ ನಿಲ್ದಾಣಗಳನ್ನೂ ಅಭಿವೃದ್ದಿಪಡಿಸಲಾಗುವುದೆಂದು ಕೃಷ್ಣದಾಸ್ ತಿಳಿಸಿದರು.
ಬಿಜೆಪಿ ಮುಖಂಡರಾದ ವಿಜಯಕುಮಾರ್ ರೈ, ಗೋಪಾಲ ಶೆಟ್ಟಿ, ಅಶೋಕ ಕುಮಾರ್ ಹೊಳ್ಳ, ಎ.ಕೆ.ಕಯ್ಯಾರ್, ಸೀತಾರಾಮ ಭಂಡಾರಿ, ಭರತ್ ರೈ, ಅಮಿತ್ ಪರಂಕಿಲ, ರೈಲ್ವೇ ನಿಲ್ದಾಣ ಹೋರಾಟ ಸಮಿತಿ ಕಾರ್ಯದರ್ಶಿ ಅಝೀಂ ಮಣಿಮುಂಡ, ಅಲಿ ಮಾಸ್ತರ್, ಕುಟ್ಟಿಕೃಷ್ಣ ಗುರುಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು. ಜೊತೆಗೆ ಕೃಷ್ಣದಾಸ್ ಅವರು ಹನುಮಾನ್ ನಗರ ಕಡಲ್ಕೊರೆತದಿಂದ ನಾಶಗೊಂಡ ಪ್ರದೇಶಗಳ ಸಂದರ್ಶನ ನಡೆಸಿದರು.







