HEALTH TIPS

ಕನ್ನಡ ವಿದ್ಯಾರ್ಥಿಗಳ ಅಳಲಿಗೆ ಕಿವುಡಾದ ಸರ್ಕಾರ ಕನ್ನಡ ಶಾಲೆಗಳಿಗೆ ಮತ್ತೆ ಕನ್ನಡ ಅರಿಯದ ಶಿಕ್ಷಕರ ನೇಮಕಕ್ಕೆ ಸನ್ನಾಹ

     
      ಕುಂಬಳೆ: ಒಂದೆಡೆ `ಭಾಷಾ ಅಲ್ಪಸಂಖ್ಯಾಕರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲಾಗುವುದು' ಎಂದು ಮಂಜೇಶ್ವರ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ವಿವಿಧ ಪಕ್ಷಗಳ ಮುಖಂಡರು ಹೇಳಿಕೊಂಡು ಬರುತ್ತಿದ್ದರೆ ಇನ್ನೊಂದೆಡೆ  ಕನ್ನಡ ಶಾಲೆಗಳಲ್ಲಿ ಮತ್ತೆ ಕನ್ನಡ ತಿಳಿಯದ ಶಿಕ್ಷಕರನ್ನು ನೇಮಿಸಿ ಕನ್ನಡ ವಿದ್ಯಾರ್ಥಿಗಳ ಭವಿಷ್ಯವನ್ನು ಕರಾಳವಾಗಿಸಲು ರಾಜ್ಯ ಶಿಕ್ಷಣ ಇಲಾಖೆ ಸಿದ್ಧತೆ ನಡೆಸುತ್ತಿದೆ.
       ಕನ್ನಡ ಶಾಲೆಗಳಿಗೆ ಕನ್ನಡ ತಿಳಿದವರನ್ನೇ ಶಿಕ್ಷಕರನ್ನಾಗಿ ನೇಮಿಸಬೇಕೆಂಬ ಕನ್ನಡ ವಿದ್ಯಾರ್ಥಿಗಳ ಪೆÇೀಷಕರ ಸಂಘಟನೆಗಳ ಹೋರಾಟಕ್ಕೆ ಕಿವುಡಾದ ಸರ್ಕಾರ ಈ ಸಮಸ್ಯೆಗೆ ಯಾವುದೇ ಪರಿಹಾರವನ್ನು ಕೈಗೊಳ್ಳುತ್ತಿಲ್ಲ. ಸರ್ಕಾರದ ಈ ನಿರ್ಲಕ್ಷ್ಯ ಮತ್ತು ನಿಷ್ಕ್ರಿಯತೆಗೆ  ಕನ್ನಡಿಗರ ವಲಯದಲ್ಲಿ ಭಾರೀ ಆಕ್ರೋಶ ಕಂಡುಬರುತ್ತಿದ್ದು ಇದು ಮಂಜೇಶ್ವರ ಚುನಾವಣೆಯಲ್ಲಿ ಪ್ರತಿಫಲಿಸುವ ಸಾಧ್ಯತೆಯಿದೆ.
       ಕನ್ನಡ ಶಾಲೆಗಳಿಗೆ ಕನ್ನಡ ತಿಳಿಯದ ಶಿಕ್ಷಕರನ್ನು ನೇಮಿಸುತ್ತಿರುವುದರಿಂದ ಭಾಷಾ ಅಲ್ಪಸಂಖ್ಯಾಕರಿಗೆ ಮಾತೃ ಭಾಷೆಯಲ್ಲಿ ಕಲಿಯುವ ಸಾಂವಿಧಾನಿಕ ಅವಕಾಶಕ್ಕೆ ಹಾಗೂ ಮಕ್ಕಳ ಶಿಕ್ಷಣದ ಹಕ್ಕಿಗೆ ಧಕ್ಕೆಯಾಗಲಿದೆ. ಸಾರ್ವಜನಿಕ ಶಿಕ್ಷಣ ರಂಗವನ್ನು ಉಳಿಸುತ್ತಿರುವವರೆಂದು ಹೇಳಿಕೊಳ್ಳುತ್ತಿರುವ ಸಿ.ಪಿ.ಎಂ. ಪಕ್ಷದ ನೇತೃತ್ವದ  ಎಡರಂಗ ಸರ್ಕಾರ ಕಲಿಸುವ ಮಾಧ್ಯಮದ ಭಾಷೆಯನ್ನೇ ತಿಳಿಯದ ಶಿಕ್ಷಕರನ್ನು ನೇಮಿಸುವ ಮೂಲಕ  ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಿರುವ ಸರ್ಕಾರಿ ಶಾಲೆಗಳ ಕನ್ನಡ ಮಾಧ್ಯಮ ವಿಭಾಗವನ್ನು ಮುಚ್ಚಿಸಿ ಖಾಸಗಿ ಶಾಲೆಗಳಿಗೆ ನೆರವಾಗಲು ಹೊರಟಿದೆಯೇ ಎಂಬ ಗುಮಾನಿ ಮೂಡುತ್ತಿದೆ.
      ಮಕ್ಕಳ ಉಪವಾಸಕ್ಕೂ ಮಣಿಯದ ಸರ್ಕಾರ :
     ಮಂಗಲ್ಪಾಡಿ, ಪೈವಳಿಕೆ, ಬೇಕೂರು, ಪೆರಡಾಲ, ಬಂದಡ್ಕ ಮೊದಲಾದ ಶಾಲೆಗಳಿಗೆ ಈಗಾಗಲೇ ಕನ್ನಡ ತಿಳಿಯದ ಶಿಕ್ಷಕರನ್ನು ನೇಮಿಸಲಾಗಿತ್ತು. ಇದರ ವಿರುದ್ಧ ಧರಣಿ, ತರಗತಿ ಬಹಿಷ್ಕಾರ, ಉಪವಾಸ ಸತ್ಯಾಗ್ರಹ, ದೂರು ಮನವಿಗಳ ಸಮರ್ಪಣೆ, ನ್ಯಾಯಾಂಗ ಹೋರಾಟ ಮೊದಲಾದ ಎಲ್ಲ ಹೋರಾಟಗಳನ್ನೂ ಕನ್ನಡಿಗ ವಿದ್ಯಾರ್ಥಿಗಳು ಪೆÇೀಷಕರು ಕೈಗೊಂಡಿದ್ದರು. ಇದರ ಫಲವಾಗಿ ಇಬ್ಬರು ಶಿಕ್ಷಕರನ್ನು ವೇತನ ಸಹಿತ ರಜೆಯಲ್ಲಿ ಕನ್ನಡ ಕಲಿಯಲು ಮೈಸೂರಿನ ಪ್ರಾದೇಶಿಕ ಭಾಷಾ ಆದ್ಯಯನ ಕೇಂದ್ರಕ್ಕೆ ಕಳುಹಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಹಿಂದಿನ ಅನುಭವಗಳ ಆಧಾರದಲ್ಲಿ ಇವರು ಕನ್ನಡ ಕಲಿತು ಕನ್ನಡದಲ್ಲಿ ಪಾಠ ಮಾಡಲು ಸಮರ್ಥರಾಗುವರೆಂಬ ವಿಶ್ವಾಸ ಕನ್ನಡಿಗರಿಗಿಲ್ಲ. ಕನ್ನಡ ತಿಳಿಯದಿದ್ದರೂ ಕೇರಳ ಲೋಕಸೇವಾ ಆಯೋಗದಿಂದ ಅಕ್ರಮವಾಗಿ ಆಯ್ಕೆಯಾದ ಈ ಅನರ್ಹ ಶಿಕ್ಷಕರಿಗೆ ಕನ್ನಡದಲ್ಲಿ ಮೂರು ಗಂಟೆಗಳ ವಿವರಣಾತ್ಮಕ ಲಿಖಿತ ಪರೀಕ್ಷೆ ನಡೆಸಿ ಅದರಲ್ಲಿ ತೇರ್ಗಡೆಯಾದರೆ ಮಾತ್ರ ಕನ್ನಡ ಮಾಧ್ಯಮ ತರಗತಿಗಳಿಗೆ ಪಾಠ ಮಾಡಲು ಅನುಮತಿ ನೀಡಬೇಕೆಂದೂ ಇಲ್ಲವಾದರೆ ಅವರನ್ನು ಮಲಯಾಳ ಮಾಧ್ಯಮಕ್ಕೆ ಅಥವಾ ತತ್ಸಮಾನ ಹುದ್ದೆಗಳಿಗೆ ವರ್ಗಾಯಿಸಿ ಕನ್ನಡ ವಿದ್ಯಾರ್ಥಿಗಳ ಹಿತ ಕಾಪಾಡಬೇಕೆಂದೂ ಕನ್ನಡಿಗರ ಒತ್ತಾಯವಾಗಿದೆ. ಆದರೆ ಇದಕ್ಕೆ ಕಿವಿಗೊಡದ ಸರ್ಕಾರ ಮತ್ತೆ ಇಬ್ಬರು ಕನ್ನಡ ಬಾರದ ಸಮಾಜ ವಿಜ್ಞಾನ ಅಧ್ಯಾಪಕರ ನೇಮಕಕ್ಕೆ ಸಿದ್ಧತೆ ನಡೆಸಿದೆ. ಬೇಕಲ, ಉದುಮ ಶಾಲೆಗಳಿಗೆ ಇವರಿಗೆ ನೇಮಕಾತಿ ನೀಡಲಾಗಿದೆ. ಕನ್ನಡ ಮಾಧ್ಯಮ ಶಿಕ್ಷಕ ಹುದ್ದೆಯ ವಿವಿಧ  ರ್ಯಾಂಕು ಪಟ್ಟಿಗಳಲ್ಲಿ ಇಪ್ಪತ್ತಮೂರಕ್ಕೂ ಹೆಚ್ಚು ಕನ್ನಡ ಅರಿಯದವರಿದ್ದು ಇವರೆಲ್ಲರ ನೇಮಕವಾದರೆ ಕೆಲವು ಶಾಲೆಗಳ ಕನ್ನಡ ಮಾಧ್ಯಮ ವಿಭಾಗಗಳೇ ಮುಚ್ಚಬಹುದು. ಕನ್ನಡ ಅರಿತ ಉದ್ಯೋಗಾರ್ಥಿಗಳನ್ನು ಕಡೆಗಣಿಸಿ ಕನ್ನಡ ತಿಳಿಯದವರನ್ನು ನೇಮಿಸಿ ಕನ್ನಡ ವಿದ್ಯಾರ್ಥಿಗಳ ಹಿತವನ್ನು ಕಡೆಗಣಿಸಿ ಕನ್ನಡ ತಿಳಿಯದ ತೆಂಕಣ ಕೇರಳದ ಶಿಕ್ಷಕರನ್ನು ರಕ್ಷಿಸಲು ಹೊರಟ ಎಡರಂಗ ಸರಕಾರ ಚುನಾವಣೆಯ ಸಮಯದಲ್ಲೂ ಕನ್ನಡಿಗರನ್ನು ನಿರ್ಲಕ್ಷಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
     ಸರಕಾರಕ್ಕೆ ಜವಾಬ್ದಾರಿಯಿಲ್ಲವೆ ? : ಅನರ್ಹ ಶಿಕ್ಷಕರನ್ನು ನೇಮಿಸಿದ್ದು ಕೇರಳ ಲೋಕಸೇವಾ ಆಯೋಗವೇ ಹೊರತು ಸರ್ಕಾರವಲ್ಲ ಎಂದು ಆಡಳಿತ ಪಕ್ಷದ ಪ್ರಾದೇಶಿಕ ಮುಖಂಡರು ಹೇಳುತ್ತಿದ್ದಾರೆ. ಕನ್ನಡ ಭಾಷಾ ತಜ್ಞರ ಸಹಾಯವನ್ನು ಪಡೆದು ಅಧ್ಯಾಪಕರನ್ನು ನೇಮಿಸಲಾಗಿದೆ ಎಂದು ಕೇರಳ ಲೋಕಸೇವಾ ಆಯೋಗ (ಪಿ.ಎಸ್.ಸಿ.) ಸಮಜಾಯಿಷಿ ನೀಡುತ್ತಿದೆ. ಅಂಕಗಳನ್ನು ನೀಡಿದ್ದು ಸಂದರ್ಶಕ ಸಮಿತಿಯಲ್ಲಿದ್ದ ಪಿ.ಎಸ್.ಸಿ. ಬೋರ್ಡ್ ಅಧ್ಯಕ್ಷರೇ ಹೊರತು ತಮಗೆ ಈ ಅಕ್ರಮದಲ್ಲಿ ಪಾಲಿಲ್ಲ ಎಂದು ಭಾಷಾತಜ್ಞರು ಕೈತೊಳೆದುಕೊಳ್ಳುತ್ತಿದ್ದಾರೆ. ಹೀಗೆ ಒಬ್ಬರನ್ನೊಬ್ಬರು ಬೆರಳುಮಾಡಿ ತೋರಿಸುತ್ತಿದ್ದಾರೆಯೇ ಹೊರತು ಅಮಾಯಕ ವಿದ್ಯಾರ್ಥಿಗಳಿಗಾದ ಅನ್ಯಾಯಕ್ಕೆ ಯಾರದೂ ಸಹಾನುಭೂತಿಯೂ ಇಲ್ಲ. ಪರಿಹಾರದ ಬಗ್ಗೆ ಚಿಂತಿಸುವುದೂ ಇಲ್ಲ. ಕನ್ನಡ ಶಾಲೆಗಳಿಗೆ ಕನ್ನಡ ತಿಳಿದವರನ್ನೇ ನೇಮಿಸಬೇಕೆಂದು ಕೇರಳ ಉಚ್ಛ ನ್ಯಾಯಾಲಯ ಆದೇಶ ನೀಡಿತ್ತು. ಹತ್ತನೇ ತರಗತಿ ತನಕ ಕನ್ನಡ ಕಲಿತರನ್ನು ಮಾತ್ರ ಕನ್ನಡ ಶಾಲೆಗಳಿಗೆ ಅಧ್ಯಾಪಕರನ್ನಾಗಿ ನೇಮಿಸಬೇಕೆಂದು ಸರ್ಕಾರವೇ ಮಾಡಿದ ಆದೇಶವೂ ಇದೆ. ಕನ್ನಡ ತಿಳಿಯದವರನ್ನು ಅನರ್ಹರನ್ನಾಗಿಸ ಬಹುದೆಂದು ಪಿ.ಎಸ್.ಸಿ. ಬೋರ್ಡ್ ಸಂದರ್ಶಕ ಸಮಿತಿಗೆ ಅಧಿಕಾರವನ್ನೂ ನೀಡಿತ್ತು. ಹಾಗಿದ್ದರೂ ಯಾರದೋ ತಪ್ಪಿನಿಂದ ಅಥವಾ ರಾಜಕೀಯ ಒತ್ತಡ, ಭ್ರಷ್ಟಾಚಾರದ ಕಾರಣಗಳಿಂದ ಕನ್ನಡ ಅರಿಯದವರ ಆಯ್ಕೆಯಾಗಿದೆ. ತಪ್ಪು ಯಾರದ್ದೇ ಆಗಿರಲಿ. ತಪ್ಪತಸ್ಥರನ್ನು ಶಿಕ್ಷಿಸುವ ಕ್ರಮ ಬದಿಗಿರಲಿ, ಕನ್ನಡ ಅರಿಯದವರ ಆಯ್ಕೆಯನ್ನು ರದ್ದುಗೊಳಿಸಬೇಕೆಂದಾಗಲೀ ಆ ಶಿಕ್ಷಕರ ಹೊಟ್ಟೆಗೆ ಹೊಡೆಯಬೇಕೆಂದಾಗಲೀ ಕನ್ನಡಿಗರು ಒತ್ತಾಯಿಸುತ್ತಿಲ್ಲ. ಅವರನ್ನು ಬೇರೆ ಹುದ್ದೆಗಳಿಗೆ ವರ್ಗಾಯಿಸುವ ಆಡಳಿತಾತ್ಮಕ ಕ್ರಮ ಕೈಗೊಂಡು ಆದೇಶ ಹೊರಡಿಸಿ ಕನ್ನಡ ಮಕ್ಕಳ ಹಿತ ಕಾಯಬೇಕೆಂದು ಮಾತ್ರ ಕೇಳಿಕೊಳ್ಳುತ್ತಿದ್ದಾರೆ.
      ಸರ್ಕಾರ ಕನ್ನಡಿಗರ ಬಗ್ಗೆ ನಿರ್ಲಕ್ಷ್ಯದ ಧೋರಣೆಯನ್ನು ಮುಂದುವರಿಸಿದರೆ ಮಂಜೇಶ್ವರದ ಜಾಗೃತ ಮತದಾರರು ಪಾಠ ಕಲಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries