ಮಂಜೇಶ್ವರ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಇಂದು(ಸೋಮವಾರ) ನಡೆಯುತ್ತಿದ್ದು, ಶನಿವಾರ ಸಂಜೆ ವಿವಿಧ ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರ ಕೊನೆಗೊಂಡಿತು. ಬಹಿರಂಗ ಪ್ರಚಾರ ಕೊನೆಗೊಂಡಿದ್ದರೂ ಭಾನುವಾರ ಅಭ್ಯರ್ಥಿಗಳು ವಿವಿಧ ಪ್ರದೇಶಗಳಲ್ಲಿ ಮನೆಮನೆ ಸಂದರ್ಶನ ನಡೆಸುವ ಮೂಲಕ ತಮ್ಮ ಮತಗಳಿಕೆಯನ್ನು ಖಾತ್ರಿಪಡಿಸುವಲ್ಲಿ ನಿರತರಾಗಿರುವುದು ಕಂಡುಬಂತು.
ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ಭಾನುವಾರ ಬೆಳಿಗ್ಗೆ ಬೇಳ ಇಗರ್ಜಿಗೆ ಭೇಟಿ ನಿಡಿ ಮತ ಚಲಾವಣೆಗೆ ವಿನಂತಿಸಿದರು. ಸಂಜೆ ಪ್ರಮುಖ ಗಣ್ಯ ವ್ಯಕ್ತಿಗಳನ್ನು ಭೇಟಿಯಾದರು.
ಎನ್ ಡಿ ಎ ಅಭ್ಯರ್ಥಿ ಕುಂಟಾರು ರವೀಶ ತಂತ್ರಿ ಅವರು ಮಂಡಲ ವ್ಯಾಪ್ತಿಯ ಗಣ್ಯರನ್ನು ಭೇಟಿಯಾಗಿ ಮತಯಾಚನೆ ನಡೆಸಿದರು. ಮೊರತ್ತಣೆ, ಪೈವಳಿಕೆ, ಮೀಯಪದವು, ಮಂಗಲ್ಪಾಡಿ ವ್ಯಾಪ್ತಿಗಳ ಗಣ್ಯರನ್ನು ಭೇಟಿಯಾಗಿ ಮತಯಾಚಿಸಿದರು.
ಎಡರಂಗದ ಅಭ್ಯರ್ಥಿ ಎಂ.ಶಂಕರ ರೈ ಮಾಸ್ತರ್ ಭಾನುವಾರ ಪಡ್ರೆ ಜಟಾಧಾರಿ ಕ್ಷೇತ್ರ ದರ್ಶನ ನಡೆಸಿದರು. ಬಳಿಕ ಆ ಪರಿಸರದ ವಿವಿಧ ಗೃಹ ಸಂದರ್ಶನ ನಡೆಸಿ, ಬಳಿಕ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ, ಪೆರ್ಮುದೆ ಇಗರ್ಜಿಗಳನ್ನು ಸಂದರ್ಶನ ನಡೆಸಿದರು.
ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 2, 14, 779 ಮತದಾರರಿದ್ದಾರೆ. ಈ ಪೈಕಿ 106928 ಮಂದಿ ಮಹಿಳಾ ಮತದಾರರೂ, 107851 ಪುರುಷ ಮತದಾರರೂ, 1240 ವಿಶೇಷ ಚೇತನ ಮತದಾರರು ಇಂದು ಮತ ಚಲಾಯಿಸುವರು. ವಿಧಾನ ಸಭಾ ವ್ಯಾಪ್ತಿಯಲ್ಲಿ ಸುಗಮ ಮತದಾನಕ್ಕಾಗಿ 198 ಮತಗಟ್ಟೆಗಳನ್ನು ವ್ಯವಸ್ಥೆಗೊಳಿಸಲಾಗಿದೆ. ವಿಶೇಷವೆಂಬಂತೆ ಅಕ್ರಮ ಮತಚಲಾವಣೆ ತಡೆಯಲು ಎಲ್ಲಾ ಮತಗಟ್ಟೆಗಳಲ್ಲೂ ವೀಡಿಯೋ ದಾಖಲೀಕರಣ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. ಈ ಪೈಕಿ 50 ಸೂಕ್ಷ್ಮ ಸಂವೇದಿ ಮತಗಟ್ಟೆಗಳನ್ನು ಗುರುತಿಸಲಾಗಿದೆ. 17 ಮತಗಟ್ಟೆಗಳು ಕರ್ನಾಟಕ ಗಡಿ ಪ್ರದೇಶ ಹೊಂದಿದೆ. ಇಂತಹ ಮತಗಟ್ಟೆಗಳಲ್ಲಿ ಸಶಸ್ತ್ರಪಡೆ ಪೋಲೀಸರು ಭದ್ರತಾ ದೃಷ್ಟಿಯಿಂದ ನಿಯೋಜಿಸಲಾಗಿದೆ. ಬುರ್ಖಾ ಧರಿಸಿ ಮತ ಚಲಾಯಿಸುವ ಮತದಾರರನ್ನು ಗುರುತಿಸಲು ಎಲ್ಲಾ ಮತಗಟ್ಟೆಗಲಲ್ಲಿ ಮಹಿಳಾ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸಲಾಗಿದೆ. ಕೇಂದ್ರಪಡೆಗಳೂ ಕರ್ತವ್ಯದಲ್ಲಿವೆ.
ಉಪ ಚುನಾವಣಾ ಸಂಬಂಧಿ ಚುನಾವಣಾ ಸಾಮಗ್ರಿಗಳ ವಿತರಣೆ ಭಾನುವಾರ ಬೆಳಿಗ್ಗೆ ಪೈವಳಿಕೆ ನಗರ ಸರ್ಕಾರಿ ಶಾಲೆಯಲ್ಲಿ ನಡೆಯಿತು. ಇಂದು ಬೆಳಿಗ್ಗೆ 7 ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದೆ.
2016ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಒಟ್ಟು 2, 08,165 ಮತದಾರರಿದ್ದರು. ಆದರೆ 1, 58, 886 ಮಂದಿ ಮತದಾರರು ಮತ ಚಲಾಯಿಸಿದ್ದರು. ಯುಡಿಎಫ್ ಅಭ್ಯರ್ಥಿ ದಿ.ಪಿ.ಬಿ ಅಬ್ದುಲ್ ರಸಾಕ್ ಅವರು 56,870 ಮತಗಳನ್ನು, ಎನ್ ಡಿ ಎ ಅಭ್ಯರ್ಥಿ ಕೆ.ಸುರೇಂದ್ರನ್ ಅವರು 56,781 ಹಾಗೂ ಎಡರಂಗದ ನ್ಯಾಯವಾದಿ ಸಿ.ಎಚ್.ಕುಂಞÂಂಬು ಅವರು 42, 565 ಮತಗಳು ಲಭ್ಯವಾಗಿದ್ದವು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಜೇಶ್ವರ ವ್ಯಾಪ್ತಿಯಲ್ಲಿ 2, 10, 086 ಮತದಾರರಲ್ಲಿ 1, 60, 934 ಮತದಾರರು ಮತದಾನಗೈದಿದ್ದರು. ಯುಡಿಎಫ್ ನ ಹಾಲಿ ಸಂಸದ ರಾಜಮೋಹನ ಉಣ್ಣಿತ್ತಾನ್ 68,217 ಮತಗಳು, ಎನ್ ಡಿ ಎಯ ಕುಂಟಾರು ರವೀಶ ತಂತ್ರಿ ಅವರು 57, 104 ಮತ್ತು ಎಡರಂಗದ ಕೆ.ಪಿ.ಸತೀಶ್ಚಂದ್ರನ್ ಅವರು 32, 796 ಮತಗಳು ಲಭಿಸಿದ್ದವು.


